Advertisement

ಅರಣ್ಯ ವಾಸಿಗಳ ಆರೋಗ್ಯ ಸೇವಾ ವಾಹನಕ್ಕೆ ಚಾಲನೆ

06:40 AM Aug 02, 2018 | Team Udayavani |

ಬೆಂಗಳೂರು: ಅರಣ್ಯ ಅವಲಂಬಿತ ಬುಡಕಟ್ಟು ಜನಾಂಗದವರ  ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.

Advertisement

ವಿಧಾನಸೌಧ ಮುಂಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಸಂಚಾರಿ ಆರೋಗ್ಯ ಘಟಕ ಸೇವೆ (ಆ್ಯಂಬುಲೆನ್ಸ್‌) ವಾಹನಗಳನ್ನು  ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಅರಣ್ಯವಾಸಿಗಳು, ಆದಿವಾಸಿಗಳಿಗೆ ಅವರು ಇರುವ ಕಡೆಯೇ ಆರೋಗ್ಯ ಸೇವೆ ಒದಗಿಸಲು  ಈ ಯೋಜನೆ ಜಾರಿಗೊಳಿಸಲಾಗಿದೆ.  ಉಚಿತವಾಗಿ ಆರೋಗ್ಯ ಸೇವೆ ನೀಡುವುದು ಇದರ ಉದ್ದೇಶ ಎಂದರು.

ಎರಡು ಹಂತಗಳಲ್ಲಿ ಯೋಜನೆ ಜಾರಿಯಾಗಲಿದ್ದು ಮೊದಲ ಹಂತದಲ್ಲಿ ಎಂಟು ಕೋಟಿ ರೂ. ವೆಚ್ಚದ 8  ಮೊಬೈಲ್‌ ವಾಹನಗಳು ಸಂಚರಿಸಲಿವೆ. ಪ್ರತಿ ವಾಹನಕ್ಕೆ 50 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯ ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲ್ಲೂಕು, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹೆಗ್ಗಡದೇವನಕೋಟೆ, ಹುಣಸೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲ್ಲೂಕುಗಳಲ್ಲಿ ಸಂಚಾರಿ ಆರೋಗ್ಯ ಘಟಕ ಸೇವೆ ಆರಂಭವಾಗಲಿದೆ.

Advertisement

ಎರಡನೇ ಹಂತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು ತಾಲ್ಲೂಕು, ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ತರೀಕೆರೆ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲ್ಲೂಕಿನಲ್ಲಿ ಸೇವೆ ಶುರುವಾಗಲಿದೆ ಎಂದು ವಿವರಿಸಿದರು.

ಪ್ರತಿದಿನ ಎರಡು ಗ್ರಾಮಗಳಿಗೆ ಭೇಟಿ ನೀಡಲಿರುವ ಆರೋಗ್ಯ ಘಟಕಗಳು ಅಗತ್ಯವಾದ ಸೇವೆ  ಒದಗಿಸಲಿವೆ ಎಂದು ತಿಳಿಸಿದರು. ಸಚಿವರಾದ ಪ್ರಿಯಾಂಕ್‌ ಖರ್ಗೆ, ವೆಂಕಟರಮಣಪ್ಪ ಉಪಸ್ಥಿತರಿದ್ದರು.

ಸಚಿವರಿಗೆ ಜಿಲ್ಲಾ ಉಸ್ತುವಾರಿ ವಹಿಸಿರುವುದರಲ್ಲಿ ಯಾವುದೇ ಅಸಮಾಧಾನ ಇಲ್ಲ. ಆ ರೀತಿ ಏನಾದರೂ ಇದ್ದರೂ ಮುಖ್ಯಮಂತ್ರಿಯವರ ಜತೆ ಕುಳಿತು ಮಾತನಾಡುತ್ತೇವೆ. ಅದಕ್ಕೆ ಅವಕಾಶವಂತೂ ಇದೆ.
– ಡಾ.ಜಿ.ಪರಮೇಶ್ವರ್‌.

ಪ್ರತ್ಯೇಕ ರಾಜ್ಯ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಗಿಮಿಕ್‌ ಮಾಡುತ್ತಿದ್ದಾರೆ.  ಅಡ್ವಾಣಿ ಉಪ ಪ್ರಧಾನಿಯಾದಾಗ 371ಜೆ ಗೆ ವಿರೋಧ ಮಾಡಿದ್ದರು. ಈಗ ರಾಜಕಾರಣಕ್ಕಾಗಿ ಗಿಮಿಕ್‌ ಮಾಡುತ್ತಿದ್ದಾರೆ. ಪ್ರತ್ಯೇಕ ರಾಜ್ಯ ಹೋರಾಟ ಮಾಡುವವರು ಏಕೀಕರಣದ ಇತಿಹಾಸ ತಿಳಿದುಕೊಳ್ಳಬೇಕು. ಅಭಿವೃದ್ಧಿಗಾಗಿ  ಹೋರಾಟ ಮಾಡಲಿ ಅದಕ್ಕೆ ಸ್ವಾಗತ.
– ಪ್ರಿಯಾಂಕ್‌  ಖರ್ಗೆ, ಸಮಾಜ ಕಲ್ಯಾಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next