ಅಡ್ಯಾರ್ : ನಗರದ ಬ್ರ್ಯಾಂಡ್ ವಿಷನ್ ಸಂಸ್ಥೆ ವತಿಯಿಂದ ಕರಾವಳಿ ಕರ್ನಾಟಕ ಪ್ರಥಮ ಎಕೆ ಕಾರ್ಪೊರೇಟ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.
ಚಲನಚಿತ್ರ ನಟ ಅರ್ಜುನ್ ಕಾಪಿಕಾಡ್ ಮಾತನಾಡಿ, ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಕ್ರೀಡೆ ಸಹಕಾರಿಯಾಗಿದೆ. ಈ ಬಾರಿ ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಪೊರೇಟ್ ಸಂಸ್ಥೆಗಳು ಮಾತ್ರ ಪಾಲು ಪಡೆದಿದ್ದು, ಮುಂದಿನ ಬಾರಿ ಕೋಸ್ಟಲ್‌ವುಡ್ ತಂಡಕ್ಕೂ ಅವಕಾಶ ಕಲ್ಪಿಸಿ ಎಂದರು.
ಆಯೋಜಕ ಮಹಮ್ಮದ್ ಸಿರಾಜುದ್ದೀನ್ ಮಾತನಾಡಿ, ಎಲ್ಲ ಕಾರ್ಪೊರೇಟ್ ಸಂಸ್ಥೆಗಳು ಒಂದೆಡೆ ಸೇರಲು ಕ್ರಿಕೆಟ್ ಪಂದ್ಯಾಟ ಸಹಕಾರಿಯಾಗಿದೆ. ಪ್ರತಿ ವರ್ಷವೂ ಪಂದ್ಯಾಟ ನಡೆಸಲು ತೀರ್ಮಾನಿಸಿದ್ದೇವೆ. ಮಂಗಳೂರು ಶಾಂತಿಗೆ ಸಂಕೇತವಾದ ನಗರವಾಗಿದೆ. ಕ್ರೀಡೆಯಿಂದ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು.
ಕ್ರಿಕೆಟ್ ಪಂದ್ಯಾಟವು ನ. 23ರಿಂದ 26ರ ವರೆಗೆ ನಡೆಯಲಿದೆ. ಪ್ರಥಮ ಎರಡು ದಿನ ಹಗಲು ಹಾಗೂ ಕೊನೆಯ ಎರಡು ದಿನ ಹೊನಲು ಬೆಳಕಿನಲ್ಲಿ ಪಂದ್ಯಾಟ ನಡೆಯಲಿದೆ. ವಿಜೇತ ಮತ್ತು ದ್ವಿತೀಯ ಸ್ಥಾನ ಪಡೆಯುವ ತಂಡಗಳಿಗೆ ಆಕರ್ಷಕ ಟ್ರೋಫಿಯೊಂದಿಗೆ ಲಕ್ಷಾಂತರ ರೂ. ಮೌಲ್ಯದ ನಗದು ಬಹುಮಾನ ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುತ್ತದೆ.
ಪಂದ್ಯಾಟ ಲೀಗ್ ಮತ್ತು ನಾಕೌಟ್ ಆಧಾರದಲ್ಲಿ ತಲಾ 10 ಓವರ್‌ಗಳ ಇನ್ನಿಂಗ್ಸ್ ಒಳಗೊಂಡಿರುತ್ತದೆ. ಉಡುಪಿ ಮತ್ತು ದ.ಕ. ಜಿಲ್ಲೆಯ ವಿವಿಧ ಕಂಪೆನಿ, ಬ್ಯಾಂಕ್ ಮತ್ತು ವಿವಿಗಳ 24 ತಂಡಗಳು ಭಾಗವಹಿಸಲಿವೆ. ತಂಡಗಳನ್ನು 8 ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು, ಲೀಗ್ ಹಂತದ ಪಂದ್ಯಗಳ ಬಳಿಕ ಪ್ರತಿಯೊಂದು ಗುಂಪಿನಿಂದ ಪ್ರಥಮ ಸ್ಥಾನ ಪಡೆಯುವ ಒಂದೊಂದು ತಂಡವು ನಾಕೌಟ್ ಹಂತ ಪ್ರವೇಶಿಸಲಿವೆ. ವಿಜೇತ ತಂಡಗಳಿಗೆ ರಾಜ್ಯ, ರಾಷ್ಟ್ರ ಮಟ್ಟದ ಕಾರ್ಪೊರೇಟ್ ಪಂದ್ಯಕೂಟದಲ್ಲಿ ಭಾಗವಹಿಸುವ ಅವಕಾಶ ಲಭ್ಯವಾಗಲಿದೆ.
ಉದ್ಘಾಟನ ಸಮಾರಂಭದಲ್ಲಿ ಬ್ರ್ಯಾಂಡ್ ವಿಷನ್ ಸಂಸ್ಥೆಯ ಕಾರ್ಯನಿರ್ವಾಹಕ ಇಮ್ತಿಯಾಝ್ ಮಹಮ್ಮದ್, ನಟಿ ಪೂಜಾ ಶೆಟ್ಟಿ, ಆರ್ ಜೆ. ಅನುರಾಗ್, ನಿರ್ಮಾಪಕ ಸಚಿನ್, ಮಹಮ್ಮದ್ ಸಿರಾಜುದ್ದೀನ್, ಫೈಝಲ್, ನಾಗರಾಜ್, ಬಾಲಕೃಷ್ಣ ಪರ್ಕಳ ಸಹಿತ ನಾನಾ ಗಣ್ಯರು ಉಪಸ್ಥಿತರಿದ್ದರು.