ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲ·ನ.24ರಿಂದ 3 ದಿನಗಳ ಕಾಲ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಿಲ್ಲೆಯಲ್ಲಿ ಪ್ರಚಾರ ನಡೆಸಲು ರೂಪಿಸಿರುವ ರಥಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಚಾಲನೆ ನೀಡಿದರು.
ಸಮ್ಮೇಳನ ನಡೆಯುವ ಮಹಾರಾಜ ಕಾಲೇಜು ಮೈದಾನದಲ್ಲಿ ಮುಖ್ಯ ವೇದಿಕೆ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಪ್ರಚಾರ ರಥಕ್ಕೆ ಚಾಲನೆ ನೀಡಿದರು.
ಈ ರಥ ಶನಿವಾರ ಮೈಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಪ್ರಚಾರ ನಡೆಸಿದ್ದು, ಭಾನುವಾರ ಬನ್ನೂರು ಪಟ್ಟಣ, ಯಾಚೇನಹಳ್ಳಿ, ಚಾಮನಹಳ್ಳಿ ಸಂತೇ ಮೈದಾನ, ಸೋಸಲೆ-ತಲಕಾಡುಗಳಲ್ಲಿ ಸಂಚರಿಸಿ, ಮೂಗೂರು ಮೂಲಕ ತಿ.ನರಸೀಪುರ ತಲುಪಲಿದೆ. ನ.13ರಂದು ಸುತ್ತೂರು, ನಂಜನಗೂಡು, ಹುಲ್ಲಹಳ್ಳಿ, ಹಂಪಾಪುರ ಮೂಲಕ ಎಚ್.ಡಿ.ಕೋಟೆ ತಲುಪಲಿದೆ. 14ರಂದು ಹುಣಸೂರು, ಪಿರಿಯಾಪಟ್ಟಣದಲ್ಲಿ ಪ್ರಚಾರ ನಡೆಸಿದ ನಂತರ ಬೆಟ್ಟದಪುರ ತಲುಪಲಿದೆ. 15ರಂದು ಬೆಟ್ಟದಪುರದಿಂದ ಚುಂಚನಕಟ್ಟೆ, ಸಾಲಿಗ್ರಾಮ, ಮಿರ್ಲೆ ಮಾರ್ಗವಾಗಿ ಕೆ.ಆರ್.ನಗರದಲ್ಲಿ ಪ್ರಚಾರ ಮುಗಿಸಿ, ಬಿಳಿಕೆರೆ, ಇಲವಾಲ ಮಾರ್ಗದಲ್ಲಿ ಮೈಸೂರು ತಲುಪಲಿದೆ.
16ರಂದು ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ಕೆ.ಎಂ.ದೊಡ್ಡಿ, ಮಳವಳ್ಳಿಯಲ್ಲಿ ಪ್ರಚಾರ ನಡೆಸಲಿದೆ. 17ರಂದು ಮಳವಳ್ಳಿಯಿಂದ ಸತ್ತೇಗಾಲ ಮೂಲಕ ಕೊಳ್ಳೇಗಾಲ, ಸಂತೆಮರಹಳ್ಳಿ, ಚಾಮರಾಜ ನಗರ ತಲುಪಲಿದೆ. 18ರಂದು ಚಾಮರಾಜ ನಗರದಿಂದ ಹೊರಟು ತೆರಕಣಾಂಬಿ-ಗುಂಡ್ಲುಪೇಟೆ, ಬೇಗೂರು,ನಂಜನಗೂಡು ಮೂಲಕ ಕಡಕೊಳ, ತಾಂಡವಪುರಗಳಲ್ಲಿ ಪ್ರಚಾರ ನಡೆಸಿ ರಥ ಮೈಸೂರಿಗೆ ವಾಪಸ್ಸಾಗಲಿದೆ. 19ರಂದು ಮೈಸೂರು ನಗರ ಹಾಗೂ ತಾಲೂಕಿನ ಸುತ್ತಲಿನ ಬಡಾವಣೆಗಳಲ್ಲಿ ಸಂಚರಿಸಿ ಪ್ರಚಾರ ನಡೆಸುವ ಮೂಲಕ ಸಮ್ಮೇಳನದ ಪ್ರಚಾರ
ಅಂತ್ಯಗೊಳ್ಳಲಿದೆ.
ಇನ್ನೂ 2 ರಥ: ಜತೆಗೆ ಮೈಸೂರು ನಗರದಲ್ಲಿ ಇನ್ನೂ 2 ರಥಗಳು ಪ್ರಚಾರ ಕಾರ್ಯ ಕೈಗೊಳ್ಳಲಿದ್ದು, ಕಲಾವಿದರೇ ಶಾಲಾ- ಕಾಲೇಜುಗಳಿಗೆ ತೆರಳಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿ ಸಮ್ಮೇಳನಕ್ಕೆ ಆಹ್ವಾನಿಸಲಿದ್ದಾರೆ. 7575 ನೋಂದಣಿ: 83ನೇ ಸಾಹಿತ್ಯ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ರಾಜ್ಯ ಜಿಲ್ಲಾ ಕಸಾಪ ಘಟಕಗಳಲ್ಲಿ ಶುಕ್ರವಾರದವರೆಗೆ 1793 ಮಹಿಳೆಯರು, 7582 ಪುರುಷರು ಸೇರಿದಂತೆ ಒಟ್ಟಾರೆ 7575 ಮಂದಿ ಹೆಸರು ನೋಂದಾಯಿಸಿದ್ದಾರೆ.
ಈ ಪೈಕಿ ಮೈಸೂರು ಜಿಲ್ಲೆಯಲ್ಲಿ 250 ಮಹಿಳೆಯರು, 550 ಪುರುಷರು ಸೇರಿ 800 ಮಂದಿ ಹೆಸರು ನೋಂದಾಯಿಸಿದ್ದಾರೆ. ವಿವಿಧ ಜಿಲ್ಲಾ ಘಟಕಗಳಲ್ಲಿ ಹೆಸರು ನೋಂದಾಯಿಸುವ ಅವಧಿ ನ.10ಕ್ಕೆ ಮುಕ್ತಾಯಗೊಂಡಿದೆ. ಶನಿವಾರದಿಂದ ನ.21ರವರೆಗೆ ಸ್ಥಳೀಯವಾಗಿ ನೋಂದಾಯಿಸಲು ಅವಕಾಶವಿದ್ದು, ಅವರು ಪಡುವಾರಹಳ್ಳಿಯಲ್ಲಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ಗಂಟೆವರೆಗೆ ರಜಾ ದಿನಗಳಲ್ಲೂ
ನೋಂದಾಯಿಸಬಹುದು. ಸಮ್ಮೇಳನದ ದಿನ ಒತ್ತಡ ಕಡಿಮೆ ಮಾಡಲು ಸ್ಥಳೀಯವಾಗಿ ನೋಂದಾಯಿಸಿದವರಿಗೆ ನ.22 ಹಾಗೂ 23ರಂದು ಬ್ಯಾಗು, ಪೆನ್ನು,ಬರವಣಿಗೆ ಪುಸ್ತಕ, ಆಹಾರದ ಕೂಪನ್,ಕಾರ್ಯಕ್ರಮದ ವೇಳಾಪಟ್ಟಿ ನೀಡಲಾಗುವುದು.ಆದರೆ, ವಸತಿ ಸೌಲಭ್ಯ ಇಲ್ಲ ಎಂದು ನೋಂದಣಿ ಸಮಿತಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು.
ಮೈಸೂರಿನಲ್ಲಿ ನಡೆಯಲಿರುವ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲೆಡೆ ಉತ್ಸಾಹ ಕಂಡು ಬರುತ್ತಿದೆ. 3 ದಿನಗಳ ಕಾಲ ನಡೆಯುವ ಸಾಹಿತ್ಯ ಜಾತ್ರೆಗೆ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದೆ. ಕನ್ನಡದ ತೇರು ಎಳೆಯಲು ಎಲ್ಲರೂ ಕೈಜೋಡಿಸಿ, ಪರಿಣಾಮಕಾರಿ ಸಮ್ಮೇಳನ ಮಾಡೋಣ.
– ಡಾ.ಎಚ್.ಸಿ.ಮಹದೇವಪ್ಪ,
ಜಿಲ್ಲಾ ಉಸ್ತುವಾರಿ ಸಚಿವ