ತೇರದಾಳ: ಪಟ್ಟಣದ ಕಲ್ಲಟ್ಟಿ ಗಲ್ಲಿಯ ಹನುಮಾನ ದೇವರ ಮೂರು ದಿನಗಳ ನೀರೋಕಳಿಯು ವಿಜೃಂಭನೆಯಿಂದ ಶನಿವಾರ ಪ್ರಾರಂಭಗೊಂಡಿತು.
ದೇವರಿಗೆ ಅಭಿಷೇಕ, ವೀಳ್ಯದೆಲೆ ಪೂಜೆ, ಅಲಂಕಾರಿಕ ಪೂಜೆ, ತುಪ್ಪದಾರುತಿ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಭಕ್ತ ಜನರೊಂದಿಗೆ ಸಾಗಿ ಬಂದಿತು. ಶನಿವಾರ ನೀರೋಕುಳಿ ಕೊಂಡ(ಹೊಂಡ) ಪೂಜಾ ಕಾರ್ಯಕ್ರಮ ಕೊಂಡದ ಪೂಜೆ ನೆರವೇರಿಸಿ ಓಕುಳಿ ಪ್ರಾರಂಭಿಸಲಾಯಿತು.
ನೇತೃತ್ವ ವಹಿಸಿದ ಪಟ್ಟಣದ ಬಾಲಗಂಗಾಧರ ದೇವರು ಹಾಗೂ ಶೇಗುಣಸಿ ವಿರಕ್ತ ಮಠದ ಮಹಾಂತ ಶ್ರೀಗಳು ಆಶೀರ್ವಚನ ನೀಡಿ, ವಿವಿಧ ಮತಗಳನ್ನು ಒಳಗೊಂಡ ಭಾರತವು ಸರ್ವಧರ್ಮ ಸಹಿಷ್ಣುತೆಯೊಂದಿಗೆ ಸಾಗುತ್ತಿದೆ. ಧಾರ್ಮಿಕ ಆಚರಣೆಗಳಿಂದ ಯಾರ ಮನಸ್ಸಿಗೂ ನೋವಾಗದಂತೆ ಸೂಕ್ತ ಎಚ್ಚರಿಕೆಯಿಂದ ಸಂಭ್ರಮಿಸಬೇಕು. ಹಬ್ಬ-ಹರಿದಿನಗಳು, ಧಾರ್ಮಿಕ ಆಚರಣೆಗಳು ಪರಸ್ಪರರಲ್ಲಿ ವೃದ್ಧಿಸಿ, ಭಿನ್ನಾಭಿಪ್ರಾಯಗಳನ್ನು ದೂರಿಕರಿಸುತ್ತವೆ. ಆದ್ದರಿಂದ ಸ್ನೇಹಪೂರ್ಣವಾಗಿ ಹಬ್ಬಗಳನ್ನು ಆಚರಿಸಬೇಕು ಎಂದರು.
ನಂತರ ಮುತೈದೆಯರ ಆರುತಿ ಸೇವೆ ನಂತರ ವಾಡಿಕೆಯಂತೆ ನಾಡಗೌಡರ ವಾಡೆಯಿಂದ ಓಕುಳಿಯಾಟವಾಡುವ ಯುವಕರು ಚಡ್ಡಿ ಧರಿಸಿ, ಕೈಯಲ್ಲಿ ನೀರು ತುಂಬುವ ಬಟ್ಟೆಯ ಜೋಳುಗೆ ಹಿಡಿದು ಮಂಗಲವಾದ್ಯ ಸಮೇತ ಮಾರುತಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದರು.
ಅವರೊಂದಿಗೆ ನೀರಾಟದಲ್ಲಿ ಪಾಲ್ಗೊಳ್ಳುವ ಸ್ತ್ರೀ ವೇಷ ಹಾಕಿದ ಯುವಕರು ಸಹ ಕೈಯಲ್ಲಿ ಹಸಿ ಬೆತ್ತಗಳನ್ನು ಹಿಡಿದುಕೊಂಡು ಬಂದರು. ಅವರೆಲ್ಲರು ಮೆರವಣಿಗೆಯಲ್ಲಿ ಬರುವುದ ಕಂಡು ಕೂಡಿದ ಜನ ಕೇಕೇ ಹಾಕಿ ಅವರನ್ನು ಹುರಿದುಂಬಿಸಿದರು. ದೇವಸ್ಥಾನದ ಅಂಗಳದಲ್ಲಿ, ಮನೆಗಳ ಮೇಲೆ ಏರಿ ನಿಂತ ಮಹಿಳೆಯರು ಸೇರಿದಂತೆ ಸಾವಿರಾರು ಜನ ಸಂಭ್ರಮಿಸಿದರು.
ನಂತರ ಓಕುಳಿಯಾಡುವವರು ಹನುಮಾನ ದೇವರಿಗೆ ನಮಸ್ಕರಿಸಿ, ನೀರು ತುಂಬಿದ ಹೊಂಡಕ್ಕೆ ಹಾರಿ ದೇವರ ಮುಂದೆ ಐದು ಜೋಳಿಗೆ ನೀರು ಅರ್ಪಿಸಿ, ಸ್ತ್ರೀ ವೇಶ ಧರಿಸಿದ ಸ್ನೇಹಿತರಿಗೆ ಜೋಳಿಗೆಯಲ್ಲಿ ತಂದ ನೀರನ್ನು ಉಗ್ಗಿದರು. ನೀರು ಉಗ್ಗಿಸಿಕೊಂಡ ಸ್ತ್ರೀ ವೇಷಧಾರಿಗಳು ಅವರಿಗೆ ಹಸಿ ಬೆತ್ತದಿಂದ ಹೊಡೆಯುತ್ತಿದ್ದರು. ತಪ್ಪಿಸಿಕೊಂಡು ಓಡುವ ಯುವಕರು ಮತ್ತೆ ನೀರನ್ನು ತಂದು ಉಗ್ಗುತ್ತಿದ್ದರು. ಇದೆಲ್ಲವು ನೋಡುಗರ ಕಣ್ಣಿಗೆ ಹಬ್ಬದಂತಾಗಿತ್ತು. ಜೈಕಾರ ಹಾಕುತ್ತ ಮುಖಂಡರು ಯಾವ ಜಗಳ ತಂಟೆಗಳು ಬಾರದಂತೆ ಎಲ್ಲರನ್ನು ಸಮಾಧಾನಿಸುತ್ತಿದ್ದರು. ಹೀಗೆ ನೀರೋಕುಳಿಯು ಹೊಂಡ ಖಾಲಿಯಾಗುವವರೆಗೆ ಸಾಗಿತು.