ಶಿರ್ವ: ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಗುಂಪುಗಳು ಹಾಗೂ18 ರಿಂದ 59 ವರ್ಷದವರೆಗಿನ ನಾಗರಿಕರಿಗೆ ಸಹಾಯವಾಗವ ನಿಟ್ಟಿನಲ್ಲಿ ತ್ವರಿತ ಸೇವೆ ನೀಡುವ ಸಲುವಾಗಿ ಶಿರ್ವ ಗ್ರಾ.ಪಂ.ನಲ್ಲಿ ಪ್ರಾಂಭಗೊಂಡ ಸಂಜೀವಿನಿ ಸೇವಾ ಕೇಂದ್ರದ ಚಟುವಟಿಕೆಗಳಿಗೆ ಮಾ.8 ರಂದು ಚಾಲನೆ ನೀಡಲಾಯಿತು.
ಜಿ.ಪಂ. ಮುಖ್ಯಕಾರ್ಯ ನಿರ್ವಹಣಾಧಿಕಾರಿ ಡಾ| ನವೀನ್ ಭಟ್ ನೂತನ ಕೊಠಡಿ ಮತ್ತು ಸೇವಾ ಕೇಂದ್ರವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿ ಶಿರ್ವದಲ್ಲಿ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದು ,ಮಹಿಳೆಯರ ಸಂಜೀವಿನಿ ಸಂತೆ ಮತ್ತು ಸಂಜೀವಿನಿ ಸೇವಾ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಸಾರ್ವಜನಿಕರಿಗೆ ಸಹಾಯವಾಗುವ ನಿಟ್ಟಿನಲ್ಲಿ ಕಾಪು ತಾಲೂಕಿನಲ್ಲಿ ಪ್ರಥಮ ಬಾರಿಗೆ ಚಾಲನೆ ನೀಡಿದ ಕೇಂದ್ರದಲ್ಲಿ ಒಕ್ಕೂಟದ ಸದಸ್ಯರು ತಂಡವಾಗಿ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಹೆಚ್ಚು ಸದಸ್ಯರನ್ನು ನೋಂದಾಯಿಸಿ ಚಟುವಟಿಕೆಗಳನ್ನು ಹೆಚ್ಚಿಸಿದಾಗ ರಾಜ್ಯದಿಂದ ಬರುವ ಅನುದಾನ ಕೂಡಾ ಹೆಚ್ಚಾಗಿ ಪ್ರತೀತಿಂಗಳು ಸಂಜೀವಿನಿ ಸಂತೆ ನಡೆಸಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿದರು. ಪ್ರಥಮ ಬಾರಿಗೆ ಶಿರ್ವ ಗ್ರಾ.ಪಂ. ಗೆ ಬೇಟಿ ನೀಡಿದ ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರನ್ನು ಶಿರ್ವ ಗ್ರಾ.ಪಂ. ವತಿಯಿಂದ ಗೌರವಿಸಲಾಯಿತು.
ಜಿ.ಪಂ. ಮುಖ್ಯ ಯೋಜನಾಧಿಕಾರಿ ಬಾಬು,ಶಿರ್ವ ಗ್ರಾ.ಪಂ. ಉಪಾಧ್ಯಕ್ಷೆ ಗ್ರೇಸಿ ಕಾರ್ಡೋಜಾ, ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಶಿರ್ವ ಒಕ್ಕೂಟದ ಅಧ್ಯಕ್ಷೆ ಗೀತಾ ವಾಗ್ಲೆ, ಗ್ರಾ.ಪಂ. ಸದಸ್ಯ ಪ್ರವೀಣ್ ಪೂಜಾರಿ ವೆದಿಕೆಯಲ್ಲಿದ್ದರು.
ಕಾರ್ಯಕ್ರಮದಲ್ಲಿ ಎನ್‌ಆರ್‌ಎಲ್‌ಎಂನ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ಯ,ಜಿ.ಪಂ. ಅಧಿಕಾರಿ ಪಾಂಡುರಂಗ, ಗ್ರಾ.ಪಂ. ಸದಸ್ಯರು,ಕಾರ್ಯದರ್ಶಿ ಮಂಗಳಾ ಜೆ.ವಿ.,ಲೆಕ್ಕಾಧಿಕಾರಿ ಚಂದ್ರಮಣಿ, ಪಂ. ಸಿಬಂದಿ, ಸಂಜೀವಿನಿ ಒಕ್ಕೂಟಗಳ ಸ್ವಸಹಾಯ ಸಂಘಗಳ ಸದಸ್ಯರು, ಉಪಸ್ಥಿತರಿದ್ದರು.
ಶಿರ್ವ ಪಂ. ಅಭಿವೃದ್ಧಿ ಅಧಿಕಾರಿ ಅನಂತ ಪದ್ಮನಾಭ ನಾಯಕ್ ಸ್ವಾಗತಿಸಿ,ವಂದಿಸಿದರು.