Advertisement

ಮೆರುಗು ನೀಡಿದ ಸಾಂಸ್ಕೃತಿಕ ಮೆರವಣಿಗೆ

09:54 AM Dec 22, 2018 | |

ಮಹಾನಗರ: ಕರಾವಳಿ ಉತ್ಸವದ ಪ್ರಯುಕ್ತ ಶುಕ್ರವಾರ ನೆಹರೂ ಮೈದಾನದ ಕರಾವಳಿ ಉತ್ಸವ ಮೈದಾನದವರೆಗೆ ಪ್ರಮುಖ ಬೀದಿಗಳಲ್ಲಿ ಸಾಗಿದ ಸಾಂಸ್ಕೃತಿಕ ಮೆರವಣಿಗೆ ಸಾರ್ವಜನಿಕರ ಗಮನ ಸೆಳೆಯಿತು. ವಿವಿಧ ದೇವಾಲಯಗಳ ಸಹಭಾಗಿತ್ವದಲ್ಲಿ ಸಾಗಿದ ಮೆರವಣಿಗೆಯಲ್ಲಿ ವಿವಿಧ ಜಿಲ್ಲೆಗಳ ಸುಮಾರು 80ಕ್ಕೂ ಹೆಚ್ಚು ತಂಡಗಳು ಪಾಲ್ಗೊಂಡಿದ್ದವು.

Advertisement

ವಿಶೇಷವಾಗಿ ಮಹಿಳಾ ವೀರಗಾಸೆ, ಚಿಕ್ಕಮಗಳೂರು, ಶಿವಮೊಗ್ಗದ ಡೊಳ್ಳು ಕುಣಿತ, ಸಾಗರದ ಕೋಲಾಟ, ಹಾವೇರಿಯ ಪುರವಂತಿಕೆ, ಧಾರವಾಡದ ಜಗ್ಗಲಿಗೆ ಮೇಳ, ಮಾಗಡಿಯ ಪಟ್ಟದ ಕುಣಿತ, ತುಮಕೂರಿನ ಸೋಮನ ಕುಣಿತ, ರಾಮನಗರದ ಪೂಜಾ ಕುಣಿತ, ಮೈಸೂರಿನ ವೀರಭದ್ರ ಕುಣಿತ, ಹಾವೇರಿಯ ಬೇಡರ ಕುಣಿತ, ಕಾರವಾರದ ಸುಗ್ಗಿ ಕುಣಿತ, ಮೈಸೂರಿನ ಕಂಸಾಳೆ, ನಗಾರಿ ತಂಡ, ರಾಯಚೂರಿನ ಕಣಿವಾದನ, ಚಾಮರಾಜ ನಗರದ ಗೊರವರ ಕುಣಿತ, ಬೆಳಗಾವಿಯ ಲಂಬಾಣಿ ನೃತ್ಯ, ಹಾಸನದ ಚಿಟ್ಟಿ ಮೇಳ, ಬದಿಯಡ್ಕದ ತ್ರಯಂಬಕಂ, ಕಾಸರಗೋಡಿನ ದುಡಿ ಇನದನ, ಮಾರ್ಗಂಕಳಿ, ತಿರುವಾದಿರೆಕ್ಕಳಿ, ಮಡಿಕೇರಿಯ ಕೊಡವ ನೃತ್ಯ ತಂಡಗಳಿದ್ದವು.

ಅಷ್ಟೇ ಅಲ್ಲದೆ, ಕನ್ನಡ ಭುವನೇಶ್ವರಿಯ ಟ್ಯಾಬ್ಲೊ ಸೇರಿದಂತೆ ತುಳು ನಾಡಿನ ಜನಪದ ಕುಣಿತ, ಯಕ್ಷಗಾನ ವೇಷಗಳು, ಸೋಣಜೋಗಿ ಕುಣಿತ ಹುಲಿ ವೇಷ, ತಾಲೀಮು, ಶಂಖ ದಾಸರು, ಜಾನಪದ ಗೊಂಬೆ, ಕೊರಗರ ಗಜಮೇಳ, ಮರಕಾಲು ಹುಲಿ ವೇಷ, ಕಂಗೀಲು ನೃತ್ಯ ಸೇರಿದಂತೆ ಅನೇಕ ಕಲಾ ತಂಡಗಳು ಜನಾಕರ್ಷಣೆ ಪಡೆದವು. ಬೆಡಿ ಗರ್ನಲ್‌ ಸಹಿತ ವಿವಿಧ ದೇವಸ್ಥಾನ ಗಳಿಂದ ಸಾಂಪ್ರದಾಯಿಕ ವಾದನ ದೊಂದಿಗೆ ತಟ್ಟಿರಾಯ, ಬೇತಾಳ ಮೆರವಣಿಗೆಗೆ ಮೆರುಗು ನೀಡಿದವು.

ಅನೇಕ ವಿದ್ಯಾ ಸಂಸ್ಥೆಗಳು, ಧಾರ್ಮಿಕ ಕೇಂದ್ರಗಳು, ಎನ್‌ಸಿಸಿ, ಸ್ಕೌಟ್ಸ್‌ಗೈಡ್ಸ್‌ ಭಾರತ ಸೇವಾದಳ, ಬ್ಯಾಂಕ್‌, ಅಂಚೆ ಇತ್ಯಾದಿ ಸಂಸ್ಥೆಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ವಿವಿಧ ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡಂತೆ ವಿವಿಧ ಸಾಮಾಜಿಕ ಚಿಂತನೆಗಳ ಅಭಿವ್ಯಕ್ತ ಪ್ರದರ್ಶನದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.

ಕರಾವಳಿ ಉತ್ಸವ ವಸ್ತು ಪ್ರದರ್ಶನ ಮಂಟಪ ಹೊರ ಆವರಣದ ಮೈದಾನದಲ್ಲಿ ಕಲಾ ತಂಡಗಳು ವಿಶೇಷ ಪ್ರದರ್ಶನವನ್ನು ನೀಡಿದರು. ಇದೇ ವೇಳೆ ಅಪರ ಜಿಲ್ಲಾಧಿಕಾರಿ ಕುಮಾರ್‌, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಜಿ.ಪಂ. ಸಿಇಒ ಡಾ| ಆರ್‌. ಸೆಲ್ವಮಣಿ, ನಗರ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಪಾಲಿಕೆ ಆಯುಕ್ತ ಮೊಹಮ್ಮದ್‌ ನಝೀರ್‌, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ತುಳು ಅಕಾಡೆಮಿ ಅಧ್ಯಕ್ಷಎ.ಸಿ.ಭಂಡಾರಿ, ಹರಿಕೃಷ್ಣ ಪುನರೂರು ಉಪಸ್ಥಿತರಿದ್ದರು.

Advertisement

ಕರಾವಳಿ ಉತ್ಸವ ಜಿಲ್ಲೆಗೆ ಹೆಮ್ಮೆ
ಸಾಂಸ್ಕೃತಿಕ ಮೆರವಣಿಗೆಗೆ ನಗರದ ನೆಹರೂ ಮೈದಾನದಲ್ಲಿ ಪಾಲಿಕೆ ಮೇಯರ್‌ ಭಾಸ್ಕರ್‌ ಕೆ. ಚಾಲನೆ ನೀಡಿ, ದಕ್ಷಿಣ ಕನ್ನಡ ಇಡೀ ದೇಶದಲ್ಲಿಯೇ ವಿಶೇಷವಾದ ಜಿಲ್ಲೆ. ಇಲ್ಲಿಯ ಸಾಂಸ್ಕೃತಿಕ ಕಲಾ ಪ್ರಕಾರಗಳು ಭಿನ್ನವಾದುದು ಎಂದರು.

ಮಂಗಳೂರಿಗರಿಗೆ ಹೆಮ್ಮೆಯ ಸಂಗತಿ
ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಮಾತನಾಡಿ, ಕರಾವಳಿ ಉತ್ಸವ ಮಂಗಳೂರಿಗೆ ಹೆಮ್ಮೆ. ಈ ಬಾರಿಯ ಉತ್ಸವದಲ್ಲಿ ಪುರಾತನ ಮಂಗಳೂರನ್ನು ಮರುಕಳಿಸುವ ಪ್ರಯತ್ನ ಮಾಡಿದ್ದೇವೆ ಎಂದರು.

ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ 
ಕರಾವಳಿ ಸಾಂಸ್ಕೃತಿಕ ಉತ್ಸವದ ಮೆರವಣಿಗೆಯು ನಗರದ ನೆಹರೂ ಮೈದಾನದಿಂದ ಹೊರಟು ಎ.ಬಿ ಶೆಟ್ಟಿ ವೃತ್ತ, ನೆಹರೂ ಮೈದಾನ ರಸ್ತೆ, ಗಡಿಯಾರ ಗೋಪುರ, ಯು.ಪಿ. ಮಲ್ಯರಸ್ತೆ, ಹಂಪನಕಟ್ಟೆ ವೃತ್ತ, ಕಾರ್ನಾಡ್‌ ಸದಾಶಿವ ರಾವ್‌ರಸ್ತೆ (ಕೆ.ಎಸ್‌. ರಾವ್‌ ರೋಡ್‌), ಬಿಷಪ್‌ ಹೌಸ್‌, ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ಸರ್ಕಲ್‌), ಪಿ.ವಿ.ಎಸ್‌. ಜಂಕ್ಷನ್‌, ಮಹಾತ್ಮಾಗಾಂಧಿ ರಸ್ತೆ, ಬಲ್ಲಾಳ್‌ಬಾಗ್‌, ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ, ಲಾಲ್‌ಬಾಗ್‌ ಮೂಲಕ ಸಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಮುಕ್ತಾಯಗೊಂಡಿತು.

ಕರಾವಳಿ ಉತ್ಸವದಲ್ಲಿ ಇಂದು
ಡಿ.21 ರಂದು ಕದ್ರಿ ಉದ್ಯಾನವನದಲ್ಲಿ ಸಂಜೆ 6 ಗಂಟೆಯಿಂದ 7.30 ರವರೆಗೆ ಕಣ್ಣಾನೂರು ವಿದುಷಿ ಜಯಶ್ರೀ ಮತ್ತು ತಂಡದಿಂದ ಕರ್ನಾಟಕೀ ಶಾಸ್ತ್ರೀಯ ಗಾಯನ, ಸಂಜೆ 7.30 ರಿಂದ 9.15ರ ವರೆಗೆ ಪುಣೆ, ತಬ್ಲಾ ಯಶವಂತ್‌ ವೈಷ್ಣವ್‌, ಉಸ್ತಾದ್‌ ರಫೀಕ್‌ ಖಾನ್‌ ಮಂಗಳೂರು ಹಾಗೂ ಉಸ್ತಾದ್‌ ಶಫೀಕ್‌ ಖಾನ್‌ ಧಾರವಾಡ ಅವರಿಂದ ಸಿತಾರ್‌ ವಾದನ ನಡೆಯಲಿದೆ. ವಸ್ತು ಪ್ರದರ್ಶನ ವೇದಿಕೆಯಲ್ಲಿ (ಕರಾವಳಿ ಉತ್ಸವ ಮೈದಾನ) ಸಂಜೆ 6 ಗಂಟೆಯಿಂದ 7.30ರ ವರೆಗೆ ಸತೀಶ್‌ ಸುರತ್ಕಲ್‌ ಮತ್ತು ತಂಡದಿಂದ ಸುಗಮ ಸಂಗೀತ, ಸಂಜೆ 7.30 ರಿಂದ 9.15 ಗಂಟೆವರೆಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ಬ್ಯಾರಿ ಸಾಹಿತ್ಯ ವೈವಿಧ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next