Advertisement

Dharwad: ಅಂತರಾಷ್ಟ್ರೀಯ ಟೆನ್ನಿಸ್‌ ಪಂದ್ಯಾವಳಿಗೆ ಚಾಲನೆ

10:38 AM Oct 16, 2023 | Team Udayavani |

ಧಾರವಾಡ : ಧಾರವಾಡ ಜಿಲ್ಲಾ ಟೆನಿಸ್ ಸಂಸ್ಥೆ (ಡಿಡಿಎಲ್‌ಟಿಎ) ಆಶ್ರಯದಲ್ಲಿ ಎಂಟು ದಿನಗಳ ಕಾಲ ಆಯೋಜಿಸಿರುವ 25 ಸಾವಿರ ಡಾಲರ್ ಬಹುಮಾನ
ಮೊತ್ತದ ಅಂತರ್ ರಾಷ್ಟೀಯ ಪುರುಷರ ಸಿಂಗಲ್ಸ್ ಮತ್ತು ಡಬಲ್ಸ್ ಟೆನಿಸ್ ಪಂದ್ಯಾವಳಿಗೆ ರವಿವಾರ ಚಾಲನೆ ದೊರೆಯಿತು.

Advertisement

ಅಕ್ಟೋಬರ್ 17 ರಿಂದ ಮುಖ್ಯ ಡ್ರಾ ಪಂದ್ಯಾಟಗಳು ಆರಂಭಗೊಳ್ಳಲಿದ್ದು, ಇದೀಗ ರವಿವಾರದಿಂದ ಎರಡು ದಿನಗಳ ಅರ್ಹತಾ ಸುತ್ತಿನ ಪಂದ್ಯಾಟಗಳು ಆರಂಭಗೊಂಡಿವೆ. ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅರ್ಹತಾ ಟೂರ್ನಿಗಾಗಿ ನೀರಜ್ ಯಶಪಾಲ್, ಮುಕಿಲ್ ರಾಮನನ್ ಹಾಗೂ ಧರ್ಮಿಲ್ ಶಾ ಅವರಿಗೆ ವೈಲ್ಡ್ ಕಾರ್ಡ್ ಪ್ರವೇಶ ನೀಡಲಾಗಿದ್ದು, ಸಿದ್ದಾಂತ ಬಂಥಿಯಾ ಹಾಗೂ ಶಿವಾಂಕ ಭಟ್ನಾಗರ್ ಅವರಿಗೆ ವೈಲ್ಡ್ ಕಾರ್ಡ್ ಮೂಲಕ ಮುಖ್ಯ ಡ್ರಾಗೆ ನೇರ ಪ್ರವೇಶ ನೀಡಲಾಗಿದೆ.

ಶುಭಾರಂಭ; :ಭಾರತದ ಮಾಜಿ ಡೆವಿಸ್‌ ಕಪ್‌ ಆಟಗಾರ ಮತ್ತು ಒಲಿಂಪಿಕ್‌ ಪಟು ವಿಷ್ಣುವರ್ಧನ ಸೇರಿದಂತೆ ಪ್ರಮುಖ ಆಟಗಾರರು ಐಟಿಎಫ್‌ ಧಾರವಾಡ ಪುರುಷರ ವಿಶ್ವ ಟೆನಿಸ್‌ ಪಂದ್ಯಾವಳಿಯ ಅರ್ಹತಾ ಸುತ್ತಿನ ಮೊದಲ ಪಂದ್ಯಗಳನ್ನು ಸುಲಭವಾಗಿ ಗೆದ್ದು ಮುಂದಿನ ಸುತ್ತಿಗೆ ಪ್ರವೇಶಿಸಿದರು. ಅಗ್ರ ಶ್ರೇಯಾಂಕ ಪಡೆದಿರುವ ವಿಷ್ಣುವರ್ಧನ ತಮ್ಮ ಎದುರಾಳಿ ಪಾರ್ಥ ಅಗರವಾಲ್‌ ಅವರನ್ನು 6-3, 6-2 ರಿಂದ ಸುಲಭವಾಗಿ ಪರಾಭವಗೊಳಿಸಿದರು. ಇನ್ನೊಂದು ಪಂದ್ಯದಲ್ಲಿ ಸೂರಜ ಪ್ರಬೋಧ ಆರನೇ ಶ್ರೇಯಾಂಕಿತ ಅಥರ್ವ ಶರ್ಮಾ ವಿರುದ್ಧ 6-2, 6-3ರ ಸುಲಭ ಜಯ ಸಾಧಿಸಿದರು.
ಅರ್ಹತಾ ಪಂದ್ಯಗಳಿಗೆ ನೇರವಾಗಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದ ಸ್ಥಳೀಯ ಯುವ ಆಟಗಾರ ಅಮರ ಧರೆಣ್ಣವರ ಆರಂಭದಲ್ಲಿ ಉತ್ತಮ ಪ್ರತಿರೋಧ ತೋರಿದರೂ ನಂತರ ಎದುರಾಳಿ ವಿಯೆಟ್ನಾಂದ ಹಾ ಮಿನ್ಹ್‌ ಡುಕ್ ವು ಅವರ ಬಿರುಸಿನ ಆಟಕ್ಕೆ ಮಣಿಯಬೇಕಾಯಿತು. ಹಾ ಮಿನ್ಹ್‌ 6-2, 6-0 ಅಂಕಗಳಿಂದ ಜಯಶಾಲಿಯಾದರು.

ದೀಪಕ ಅನಂತರಾಮು ಇತ್ತೀಚೆಗೆ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದು, 3ನೇ ಶ್ರೇಯಾಂಕಿತ ಫೈಸಲ್‌ ಕಮರ್‌ ಅವರಿಗೆ 6-0, 6-4 ರಿಂದ ಸುಲಭದ ತುತ್ತಾದರು.

ಮಧ್ಯಾಹ್ನ 2ರಿಂದ ಸುರಿದ ಮಳೆಯಿಂದಾಗಿ ಪಂದ್ಯಗಳಿಗೆ ವ್ಯತ್ಯಯ ಉಂಟಾಗಿ ರವಿವಾರ ನಡೆಯಬೇಕಿದ್ದ ಐದು ಪಂದ್ಯಗಳು ಸೋಮವಾರಕ್ಕೆ ಮುಂದೂಡಲ್ಪಟ್ಟವು. ಮುಖ್ಯ ಡ್ರಾ ಪಂದ್ಯಗಳು ಮಂಗಳವಾರದಿಂದ ಆರಂಭವಾಗಲಿವೆ. ಅರ್ಹತಾ ಸುತ್ತಿನಿಂದ ಎಂಟು ಆಟಗಾರರು, ವೈಲ್ಡ್‌ ಕಾರ್ಡ್‌ ಪ್ರವೇಶ ಮೂಲಕ ನಾಲ್ವರು ಹಾಗೂ ಈಗಾಗಲೇ ಮುಖ್ಯ ಡ್ರಾದಲ್ಲಿರುವ 20 ಆಟಗಾರರು ಮೇನ್‌ ಡ್ರಾನಲ್ಲಿ ಪಾಲ್ಗೊಳ್ಳಲಿದ್ದಾರೆ.

Advertisement

ಅರ್ಹತಾ ಸುತ್ತಿನ ಪ್ರಥಮ ಪಂದ್ಯಗಳ ಫಲಿತಾಂಶಗಳು: (ವಿಜೇತರ ಹೆಸರು ಮೊದಲು-ಹೆಸರಿನ ಮೊದಲು ಕಾಣುವ ಸಂಖ್ಯೆ ಆಟಗಾರರ ಶ್ರೇಯಾಂಕ)

1-ವಿಷ್ಣುವರ್ಧನ ವಿರುದ್ಧ ಪಾರ್ಥ ಅಗರವಾಲ್‌ 6-3, 6-2

3-ಫೈಸಲ್‌ ಕಮರ್‌ ವಿರುದ್ಧ ದೀಪಕ ಅನಂತರಾಮು 6-0, 6-4

12-ಹಾ ಮಿನ್ಹ್ ಡುಕ್‌ ವು (ವಿಯೆಟ್ನಾಂ) ವಿರುದ್ಧ ಅಮರ ಧರೆಣ್ಣವರ 6-2, 6-0

5- ರಣಜೀತ ವಿರಾಳಿ ಮುರುಗೇಶನ್‌ ವಿರುದ್ಧ ಯಶ್‌ ಚೌರಾಸಿಯಾ 6-1, 6-2

2- ಲೂಕ್‌ ಸೋರೆನ್‌ಸೆನ್‌ (ಆಸ್ಟ್ರೇಲಿಯಾ) ವಿರುದ್ಧ ಅರ್ಜುನ್‌ ಮಹಾದೇವನ್‌ 7-6 (4), 6-3

4-ಜಾಕ್‌ ಕಾರ್ಲಸನ್‌ ವಿಸ್ಟ್ರಾಂಡ (ಸ್ವೀಡನ್‌) ವಿರುದ್ಧ ಧೀರಜ್‌ ಕೋಡಂಚಾ ಶ್ರೀನಿವಾಸನ್‌ 6-2, 6-3

9-ಎನ್ರಿಕೋ ಗೀಯಾಕೋಮೆನಿ (ಇಟಲಿ) ವಿರುದ್ಧ ಜೇಕ್‌ ಭಾಂಗಡಿಯಾ (ಅಮೇರಿಕಾ) 6-1, 6-3

11-ಮಾಧ್ವಿನ್‌ ಕಾಮತ್‌ ವಿರುದ್ಧ ಮ್ಯಾಥ್ಯೂ ಓರ್ಯಾಂಡಲ್‌ (ಆಸ್ಟ್ರೇಲಿಯಾ) 7-6 (2), 6-1
ಸೂರಜ್‌ ಪ್ರಬೋಧ ವಿರುದ್ಧ ಅಥರ್ವ ಶರ್ಮಾ 6-2, 6-3

ಧಾರವಾಡ ಪೇಡಾ ಸವಿದರು ಈ ಪಂದ್ಯಾಟಗಳಿಗೆ ವಿದೇಶಗಳಿಂದ ವಿದ್ಯಾಕಾಶಿಗೆ ಬಂದಿಳಿದ ಟೆನಿಸ್ ಕ್ರೀಡಾಪಟುಗಳಿಗೆ ನೋಂದಣಿ ಸಮಯದಲ್ಲಿ ಅಗತ್ಯ ಕಿಟ್ ಜತೆಗೆ ಧಾರವಾಡ ಪೇಡಾ ಬಾಕ್ಸ್ ನೀಡಲಾಗಿದೆ. ಈ ಬಾಕ್ಸ್ ತೆರೆದು ಪೇಡೆ ಸವಿದ ಕ್ರೀಡಾಪಟುಗಳು ಇದರ ರುಚಿಗೆ ಮನ ಸೋತಿಸಿದ್ದಾರೆ. ಇದರ ಬಗ್ಗೆ ಕೆಲ ಕ್ರೀಡಾಪಟುಗಳು ಮಾಹಿತಿ ಪಡೆದು, ಪೇಡೆಯ ರುಚಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next