Advertisement

ಚಾಮರಾಜನಗರ ಜಿಲ್ಲೆಗೆ 25 ವರ್ಷ:1100 ಕೋಟಿ ರೂ. ವೆಚ್ಚದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ

06:52 PM Dec 13, 2022 | Team Udayavani |

ಚಾಮರಾಜನಗರ: ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸಲು 1390 ಕೋಟಿ ರೂ. ವೆಚ್ಚದ ಡಿಪಿಆರ್‌ ಸಿದ್ದವಾಗಿದೆ. ಜಿಲ್ಲೆಗೆ 25 ವರ್ಷಗಳು ತುಂಬಿದ್ದು ಶಕ್ತಿ ತುಂಬುವ ಕೆಲಸ ಆಗಬೇಕಿದೆ. ಇಂದು 1100 ಕೋಟಿ ರೂ. ವೆಚ್ಚದ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ ಎಂದು ವಸತಿ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದರು.

Advertisement

ನಗರದ ಡಾ. ಅಂಬೇಡ್ಕರ್‌ ಕ್ರೀಡಾಂಗಣದಲ್ಲಿ  ನಡೆದ ಚಾ.ನಗರ ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಿಲ್ಲೆಯ ಜನರ ಜೀವನ ಮಟ್ಟ ಸುಧಾರಣೆಗೆ ಕಾರ್ಖಾನೆಗಳು ಬರಬೇಕಾಗಿದೆ. ರಾಜ್ಯದ ಇನ್ನುಳಿದ ಜಿಲ್ಲೆಗಳ ರೀತಿಯೆ ಚಾಮರಾಜನಗರ ಜಿಲ್ಲೆಯೂ ಕೂಡ ಅಭಿವೃದ್ಧಿಯಾಗಬೇಕಿದೆ. ಸರ್ಕಾರದ ನಡೆ ಹಳ್ಳಿಯ ಕಡೆ ಎಂಬಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಎರಡನೇ ಬಾರಿ ಭೇಟಿ ನೀಡಿದ್ದಾರೆ. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಮುಖ್ಯಮಂತ್ರಿಯವರು ಜನಪರ, ಬಡವರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿದ್ದಾರೆ. ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಜಿಲ್ಲೆಯ ಅಭಿವೃದ್ದಿ ಬಗ್ಗೆ ಕಾಳಜಿ ಹೊಂದಿದ್ದಾರೆ ಎಂದು ವಿ. ಸೋಮಣ್ಣ  ತಿಳಿಸಿದರು.

ಸಂಸದ ವಿ. ಶ್ರೀನಿವಾಸಪ್ರಸಾದ್‌ ಮಾತನಾಡಿ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಒತ್ತು ನೀಡಬೇಕಿದೆ. ಈಗಾಗಲೇ ವಿಶ್ವ ವಿದ್ಯಾಲಯ ಮಂಜೂರಾಗಿದ್ದು ಇದಕ್ಕಾಗಿ ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ. ಜಿಲ್ಲೆಗೆ ಕಾನೂನು ಕಾಲೇಜು ಸಹ ಬರಬೇಕಿದೆ. ಈ ಸಂಬಂಧ ಉಪಕುಲಪತಿ ಅವರ ಜೊತೆ ಮಾತನಾಡಿದ್ದೇನೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ, ಕೈಗಾರಿಕೆ ಅಭಿವೃದ್ದಿಯಾಗಬೇಕಿದೆ ಎಂದು ತಿಳಿಸಿದರು.

Advertisement

ಚಾ.ನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಜಿಲ್ಲೆಯ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇಲ್ಲಿ ಅಧಿಕಾರಿಗಳು ವಾಸ ಮಾಡುತ್ತಿಲ್ಲ. ಜಿಲ್ಲಾ ಕೇಂದ್ರಕ್ಕೆ 25 ವರ್ಷಗಳ ಹಿಂದೆ ಮಾಡಿದ ನೀರಿನ ಯೋಜನೆ ನಂತರ ಎರಡನೇ ಹಂತ ಜಾರಿಗೊಳಿಸಿಲ್ಲ. ಇದಕ್ಕೆ ಮುಖ್ಯಮಂತ್ರಿಯವರು 140 ಕೋಟಿ ರೂ. ನೀಡಬೇಕು ಎಂದರು.

ಚಾಮರಾಜನಗರದಲ್ಲೂ ಸುಸಜ್ಜಿತ ಬಸ್‌ ನಿಲ್ದಾಣ ಆಗಬೇಕು. ಯುಜಿಡಿಗೆ 50 ಕೋಟಿ ರೂ. ಅನುದಾನ ನೀಡಬೇಕು.  ಎಸ್‌ಸಿ ಎಸ್‌ಟಿ ಬೀದಿಗಳಿಗೆ ಕಳೆದ 3 ವರ್ಷಗಳಿಂದ ಹೊಸ ರಸ್ತೆಗಳಾಗಿಲ್ಲ. ಅನುದಾನ ನೀಡಬೇಕು. ಅತಿವೃಷ್ಠಿಯಿಂದ ಹಾನಿಗೀಡಾಗಿರುವ ರಸ್ತೆ ಮೂಲ ಸೌಕರ್ಯಗಳಿಗೆ ವಿಶೇಷ ಅನುದಾನ ನೀಡಬೇಕು ಎಂದು ಅವರು ಮನವಿ ಮಾಡಿದರು.

ಗುಂಡ್ಲುಪೇಟೆ ಶಾಸಕ ಸಿ.ಎಸ್‌. ನಿರಂಜನಕುಮಾರ್‌ ಮಾತನಾಡಿ ಜಾನಪದ ಕಲೆಗಳ ತವರೂರಾದ ಚಾಮರಾಜನಗರ ಜಿಲ್ಲೆಗೆ ಮುಖ್ಯಮಂತ್ರಿಯವರು ಅನೇಕ ಅಭಿವೃದ್ದಿ ಕಾರ್ಯಗಳಿಗೆ ಮುಂದಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಜಿಲ್ಲೆಯ ಪ್ರಗತಿಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೊಮ್ಮನಹಳ್ಳಿಯಲ್ಲಿ ಡಾ. ಬಿ.ಆರ್‌ ಅಂಬೇಡ್ಕರ್‌ ವಸತಿ ಶಾಲೆ ನಿರ್ಮಾಣಕ್ಕಾಗಿ 18 ಕೋಟಿ ರೂ. ಅನುದಾನ ನೀಡಿದ್ದಾರೆ. 32 ಗ್ರಾಮಗಳ ನೀರಿನ ಯೋಜನೆಗೆ 22 ಕೋಟಿ ರೂ. ಅನುದಾನ ಒದಗಿಸಿದ್ದಾರೆ ಎಂದರು.

ಇದೇ ವೇಳೆ ಮುಖ್ಯಮಂತ್ರಿಯವರು ವಿಶೇಷಚೇತನರಿಗೆ ತ್ರಿಚಕ್ರ ವಾಹನ ಹಾಗೂ ಫ‌ಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next