ಬೆಂಗಳೂರು: ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದಲ್ಲದೆ, ಟೈಯರ್ ಇಲ್ಲದೆ ಕೇವಲ ರಿಮ್‌ನಲ್ಲಿಯೇ ಸುಮಾರು ಒಂದೂವರೆ ಕಿ.ಮೀ ಕಾರು ಓಡಿಸಿದ ಯುವಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ವ್ಯಾಪ್ತಿಯ ಮಾಳಗಾಳ ಮುಖ್ಯರಸ್ತೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಹಾಸನ ಮೂಲದ ನಿಖೀಲ್ (23) ಬಂಧಿತ ಯುವಕ. ನಗರದಲ್ಲಿ ಕೆಲ ವರ್ಷಗಳಿಂದ ಕಾರು ಚಾಲಕನಾಗಿರುವ ನಿಖೀಲ್, ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಬಾರೊಂದರಲ್ಲಿ ಮದ್ಯ ಸೇವಿಸಿದ್ದಾನೆ. ಬಳಿಕ ಸುಂಕದಕಟ್ಟೆಯಿಂದ ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಸುಮನಹಳ್ಳಿ ಜಂಕ್ಷನ್ ಬಳಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ನಿಲ್ಲಿಸಿದ್ದ ಸುಮಾರು 20ಕ್ಕೂ ಹೆಚ್ಚು ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಕಾರಿನ ಎಡಭಾಗದ ಮುಂದಿನ ಒಂದು ಟೈಯರ್ ಕಳಚಿಕೊಂಡಿವೆ. ಆದರೂ ನಿಖೀಲ್ ಮದ್ಯದ ಅಮಲಿನಲ್ಲಿ ರಿಮ್‌ನಲ್ಲಿಯೇ ಮಾಳಗಾಳ ಮುಖ್ಯರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀಟರ್‌ನಷ್ಟು ದೂರ ವೇಗವಾಗಿ ಕಾರ ಚಾಲನೆ ಮಾಡಿದ್ದಾನೆ. ಈ ವೇಳೆ ರಸ್ತೆಯಲ್ಲಿ ಬೆಂಕಿಯ ಕಿಡಿ ಉಂಟಾಗಿ ಇದನ್ನು ಗಮನಿಸಿದ ಕಾರು ಚಾಲಕರೊಬ್ಬರು ಸ್ಥಳೀಯರ ಸಹಾಯದಿಂದ ನಿಖೀಲ್ ಕಾರನ್ನು ಹಿಂಬಾಲಿಸಿ ಕಾರನ್ನು ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಪ್ರಶ್ನಿಸಿದ ಸಾರ್ವಜನಿಕರ ಮೇಲೆಯೇ ನಿಖೀಲ್ ಕೂಗಾಡಿದ ಎಂದು ಹೇಳಲಾಗಿದೆ. ಕೂಡಲೇ ಸ್ಥಳೀಯರು ನಮ್ಮ-100ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ. ವಿಷಯ ತಿಳಿದ ರಾತ್ರಿ ಗಸ್ತಿನಲ್ಲಿದ್ದ ಹೊಯ್ಸಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನಿಖೀಲ್‌ನನ್ನು ಅನ್ನಪೂರ್ಣೇಶ್ವರನಗರ ಠಾಣೆಗೆ ಕರೆದೊಯ್ದಿದ್ದಾರೆ.
ನಂತರ ಮಾಹಿತಿ ಪಡೆದ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಆರೋಪಿ ನಿಖೀಲ್‌ನನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಮದ್ಯ ಸೇವಿಸಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ಕುಡಿದು ವಾಹನ ಚಾಲನೆ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು, ಕಾರನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ನಿಖೀಲ್‌ಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ನಿಖೀಲ್ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಕೆಲ ಕಾರುಗಳಿಗೆ ತಗುಲಿರುವುದರಿಂದ ಸುಮಾರು 20ಕ್ಕೂ ಹೆಚ್ಚು ಕಾರುಗಳಿಗೆ ಹಾನಿಯಾಗಿವೆ. ಆದರೆ, ಈ ಬಗ್ಗೆ ಯಾರೂ ದೂರು ನೀಡಿಲ್ಲ ಎಂದು ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಹೇಳಿದರು.