Advertisement

ಮತದಾರರಲ್ಲಿ ಜಾಗೃತಿ ಮೂಡಿಸಲು ಕ್ರಮ: ಡಾ|ಎಂ.ಆರ್‌. ರವಿ

10:29 AM Apr 04, 2018 | |

ಲಾಲ್‌ಬಾಗ್‌ : ಮತದಾನದ ಕುರಿತು ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್‌ ಸಮಿತಿಯು ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಎಲ್ಲ ಮತದಾರರನ್ನು ಪರಿಣಾಮಕಾರಿಯಾಗಿ ತಲುಪಿ ಮತದಾನದ ಕುರಿತು ಪ್ರಚಾರ ಕೈಗೊಳ್ಳಲು ಇದೀಗ ವಾಹನವನ್ನೂ ಆರಂಭಿಸಲಾಗಿದೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಡಾ| ಎಂ. ಆರ್‌. ರವಿ ಹೇಳಿದರು. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನಗರದ ಲಾಲ್‌ ಭಾಗ್‌ನ ಮಹಾನಗರ ಪಾಲಿಕೆ ಕಚೇರಿ ಮುಂಭಾಗದಲ್ಲಿ ಜಿಲ್ಲಾ ಸ್ವೀಪ್‌ ಸಮಿತಿ ವತಿಯಿಂದ ನಡೆದ ಮತದಾರರ ಜಾಗೃತಿ ಪ್ರಚಾರ ವಾಹನಕ್ಕೆ ಚಾಲನೆ ಸಂದರ್ಭ ಅವರು ಮಂಗಳವಾರ ಮಾತನಾಡಿದರು.

Advertisement

ಮತದಾರರ ಜಾಗೃತಿ ರಥ ಮಂಗಳೂರು, ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕ್ಷೇತ್ರದಲ್ಲಿ ಸಂಚರಿಸಲಿದೆ. ಈ ಪ್ರಚಾರ ವಾಹನದಲ್ಲಿ ತುಳುನಾಡಿನ ಜನಪ್ರಿಯ ವ್ಯಕ್ತಿಗಳು ಮತದಾನ ಮಾಡುವಂತೆ ವಿನಂತಿಸುವ ಸಂದೇಶವನ್ನು ಧ್ವನಿವರ್ಧಕದ ಮೂಲಕ ಪ್ರಸಾರ ಮಾಡಲಾಗುವುದು. ಮತದಾನದ ಆವಶ್ಯಕತೆ, ಮತದಾರರ ಪಟ್ಟಿ ಸೇರ್ಪಡೆ ಮುಂತಾದ ವಿಚಾರಗಳ ಕುರಿತು ಈ ವೇಳೆ ಜನರಿಗೆ ಮಾಹಿತಿ ನೀಡಲಾಗುವುದು ಎಂದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲ್ಲನಗೌಡ ಪ್ರಚಾರ ವಾಹನಕ್ಕೆ ಚಾಲನೆ ನೀಡಿದರು.

ಮಹಾನಗರ ಪಾಲಿಕೆಯ ಆಯುಕ್ತ ಮಹಮದ್‌ ನಝೀರ್‌, ಮಂಗಳೂರು ನಗರ ದಕ್ಷಿಣದ ಚುನಾವಣಾಧಿಕಾರಿ ಆ್ಯಂಟನಿ ಮರಿಯಾ ಇಮಾನ್ಯುವೆಲ್‌, ಮಂಗಳೂರು ನಗರ ಉತ್ತರದ ಚುನಾವಣಾಧಿಕಾರಿ ಎಸ್‌. ಬಿ. ಪ್ರಶಾಂತ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಮಂ. ದಕ್ಷಿಣಕ್ಕೆ ವಿಶೇಷ ಗಮನ
2013ರ ಚುನಾವಣೆಯಲ್ಲಿ ಜಿಲ್ಲೆಯಲ್ಲೇ ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂದರೆ ಕೇವಲ ಶೇ. 35ರಷ್ಟು ಮತದಾನವಾಗಿತ್ತು. ಈ ಬಾರಿ ಮಂಗಳೂರು ನಗರ ದಕ್ಷಿಣ ಕ್ಷೇತ್ರಕ್ಕೆ ವಿಶೇಷ ಗಮನ ಹರಿಸಲಾಗಿದ್ದು, ಪ್ರತಿ ವಾರ್ಡ್‌ನಲ್ಲಿ ವಾಹನ ಸಂಚರಿಸಲಿದೆ ಎಂದು ಡಾ| ರವಿ ತಿಳಿಸಿದರು.

ಧ್ವನಿ ಸಂದೇಶ
 ‘ನನ್ನ ಮತ..ನನ್ನ ಧ್ವನಿ, ದೇಶದ ಭವಿಷ್ಯಕ್ಕಾಗಿ ಪ್ರತಿ ಮತವೂ ಅಮೂಲ್ಯ..’ ಎಂಬ ಸಂದೇಶ ಹೊತ್ತ ಬ್ಯಾನರ್‌ನ್ನು ವಾಹನದಲ್ಲಿ ಅಳವಡಿಸಲಾಗಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ವೈದ್ಯ ಡಾ| ಬಿ.ಎಂ. ಹೆಗ್ಡೆ, ನಟ, ನಿರ್ದೇಶಕ ದೇವದಾಸ್‌ ಕಾಪಿಕಾಡ್‌, ಹಾಸ್ಯನಟ ನವೀನ್‌ ಡಿ. ಪಡೀಲ್‌, ಭಾಗವತ ಪಟ್ಲ ಸತೀಶ್‌ ಶೆಟ್ಟಿ, ಜಾದೂಗಾರ ಕುದ್ರೋಳಿ ಗಣೇಶ್‌, ಸಾಹಿತಿಗಳಾದ ಸಾರಾ ಅಬೂಬಕ್ಕರ್‌, ಲಲಿತಾ ರೈ ಅವರ ಧ್ವನಿ ಮುದ್ರಿತ ಸಂದೇಶಗಳನ್ನು ಜಾಗೃತಿ ಪ್ರಚಾರ ವಾಹನದಲ್ಲಿ ಧ್ವನಿ ಮುದ್ರಿಸಿ ಬಿತ್ತರಿಸಲಾಗುತ್ತದೆ.

Advertisement

ಸಂಚಾರಿ ವಾಹನಕ್ಕೆ ಮಾರ್ಗಸೂಚಿ
ಸಂಚಾರಿ ಪ್ರಚಾರ ವಾಹನವು ಮುಂದಿನ ಒಂದು ವಾರ ಕಾಲ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸಿ ಪ್ರಚಾರ ಕಾರ್ಯ ನಡೆಸಲಿದೆ.  ಮಂಗಳವಾರದಂದು ಲಾಲ್‌ಬಾಗ್‌ ನಿಂದ ಹೊರಟು ಉರ್ವಸ್ಟೋರ್‌, ಕೊಟ್ಟಾರ, ಚೌಕಿ, ಅಶೋಕನಗರ, ಉರ್ವಮಾರ್ಕೆಟ್‌, ಸುಲ್ತಾನ್‌ಬತ್ತೇರಿ, ಬೊಕ್ಕಪಟ್ಣ, ಕುದ್ರೋಳಿ ಮಾರ್ಗವಾಗಿ ಅಳಕೆಗೆ ತಲುಪಿ ಮತದಾನ ಪ್ರಚಾರ ಕಾರ್ಯ ಕೈಗೊಂಡಿದೆ. 

ಬುಧವಾರದಂದು ರಥಬೀದಿ, ಬಂದರು, ಸೆಂಟ್ರಲ್‌ ಮಾರ್ಕೆಟ್‌, ಪೋರ್ಟ್‌, ಪಾಂಡೇಶ್ವರ, ರೈಲ್ವೇ ಸ್ಟೇಶನ್‌, ಸ್ಟೇಟ್‌ಬ್ಯಾಂಕ್‌, ಪುರಭವನ, ಅತ್ತಾವರ, ಮಂಗಳಾದೇವಿಯಲ್ಲಿ ಸಂಚರಿಸಲಿದೆ. ಗುರುವಾರದಂದು ಮಾರ್ಗನ್ಸ್‌ ಗೇಟ್‌, ಹೊಗೆ ಬಜಾರ್‌, ಬೋಳಾರ, ವೆಲೆನ್ಸಿಯಾ, ಕಂಕನಾಡಿ, ಫಳ್ನೀರ್‌, ಮಿಲಾಗ್ರಿಸ್‌, ಹಂಪನಕಟ್ಟೆಯಲ್ಲಿ ಪ್ರಚಾರ ನಡೆಸಲಿದೆ. ಶುಕ್ರವಾರದಂದು ಕೆ.ಎಸ್‌.ರಾವ್‌ ರಸ್ತೆ, ಪಿವಿಎಸ್‌, ಬಂಟ್ಸ್‌ಹಾಸ್ಟೆಲ್‌, ಜ್ಯೋತಿ, ಬಲ್ಮಠ, ಬೆಂದೂರ್‌ವೆಲ್‌, ಬೆಂದೂರು, ಕದ್ರಿ ಮಲ್ಲಿಕಟ್ಟೆ, ಶಿವಭಾಗ್‌ ಮಾರ್ಗವಾಗಿ ನಂತೂರಿನಲ್ಲಿ ಸಂಚಾರ ನಡೆಸಲಿದೆ.

ಶನಿವಾರದಂದು ನಂತೂರು, ಬಿಕರ್ನಕಟ್ಟೆ, ಶಕ್ತಿನಗರ, ನೀತಿನಗರ, ಪ್ರೀತಿನಗರ, ಕುಲಶೇಖರ, ಕೈಕಂಬ, ಮರೋಳಿ, ಪಡೀಲು, ಅಳಪೆಯಲ್ಲಿ ಸಂಚರಿಸಲಿದೆ. ರವಿವಾರದಂದು ಕಣ್ಣೂರು, ವೀರನಗರ, ಬಜಾಲ್‌, ಜಪ್ಪಿನಮೊಗರು, ಎಕ್ಕೂರು, ಉಜ್ಜೋಡಿ, ಪಂಪ್‌ವೆಲ್‌, ನಾಗುರಿಯಲ್ಲಿ ಹಾಗೂ ಸೋಮವಾರದಂದು ಯೆಯ್ನಾಡಿ, ಕೆಪಿಟಿ, ಆಕಾಶವಾಣಿ, ಬಿಜೈ, ಕೆಎಸ್ಸಾರ್ಟಿಸಿ, ಕಾಪಿಕಾಡ್‌, ಕುಂಟಿಕಾನ, ಕೋಟೆಕಣಿ ರಸ್ತೆ ಹಾಗೂ ಚಿಲಿಂಬಿಯಲ್ಲಿ ಸಂಚರಿಸಿ ಪ್ರಚಾರ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next