ಹಾವೇರಿ: ಮುಂಗಾರು ಬಿತ್ತನೆ ಪೂರ್ವದಲ್ಲಿ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ರೈತರಿಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ವಿಧಾನಸಭಾ ಚುನಾವಣೆಯ ಮತದಾನ ಜಾಗೃತಿಗಾಗಿ ಜಿಲ್ಲೆಯ 224 ಗ್ರಾಮ ಪಂಚಾಯತಿಗಳಲ್ಲೂ ಅಭಿಯಾನ ಹಮ್ಮಿಕೊಳ್ಳಲಾಗಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ್ ಕರೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಆವರಣದಲ್ಲಿ ಬುಧವಾರ ಕೃಷಿ ಜಾಗೃತಿ ಅಭಿಯಾನದ ವಾಹನಗಳಿಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು. ಮುಂಗಾರು ಬಿತ್ತನೆ ಪೂರ್ವದಲ್ಲಿ ಮಣ್ಣಿನ ಗುಣಮಟ್ಟ ಕಾಯ್ದುಕೊಳ್ಳುವುದು, ತಾಂತ್ರಿಕ ವಿವರಗಳು, ಬೇಸಾಯ ಪದ್ಧತಿ, ಬೆಳೆ ಪದ್ಧತಿ, ಬೀಜ ಹದ ಮಾಡುವುದು ಸೇರಿದಂತೆ ಸವಿವರ ಮಾಹಿತಿ ಒಳಗೊಂಡಂತೆ ರೈತರಿಗೆ ಜಾಗೃತಿ ಮೂಡಿಸಲಾಗುವುದು. ಈ ಉದ್ದೇಶಕ್ಕಾಗಿ ಏಳು ವಾಹನಗಳು ಜಿಲ್ಲೆಯ ಏಳು ತಾಲೂಕಿನಲ್ಲಿ ಸಂಚರಿಸಿ ರೈತರಿಗೆ ಮಾಹಿತಿ ನೀಡಲಿವೆ ಎಂದರು.
ವಾಹನಗಳನ್ನು ಕೃಷಿ ಚಟುವಟಿಕೆಗಳು, ಕೃಷಿ ಯೋಜನೆಗಳ ಮಾಹಿತಿ ಫಲಕದಿಂದ ಅಳವಡಿಸಲಾಗಿದೆ. ಕೃಷಿಯ ಮಾಹಿತಿಯೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಮತದಾನದ ಮಹತ್ವ ಕುರಿತಂತೆ ಸಂದೇಶವುಳ್ಳ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ ಎಂದರು.
ವಾಹನದಲ್ಲಿ ಮತದಾನ ಜಾಗೃತಿ ಹಾಗೂ ಕೃಷಿ ಜಾಗೃತಿಯ ಮಾಹಿತಿಯ ಕರಪತ್ರಗಳನ್ನು ರೈತರಿಗೆ ವಿತರಣೆ ಮಾಡಲಾಗುವುದು. ತಾಂತ್ರಿಕ ಸಿಬ್ಬಂದಿಗಳಿಂದ ವಿವರ ನೀಡಲಾಗುವುದು. ವಿಡಿಯೋಗಳ ಮೂಲಕ ಕೃಷಿ ಮತ್ತು ಮತದಾನ ಜಾಗೃತಿ ಕಿರುಚಿತ್ರ ಪ್ರದರ್ಶನ ಸಹ ನಡೆಯಲಿದೆ. ಪ್ರತಿ ಹೋಬಳಿ ಮಟ್ಟದಲ್ಲಿ ಮೂರು ದಿನ ನಡೆಯುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿದರು.
ಕೃಷಿ ಇಲಾಖೆಯ ಕಾರ್ಯಕ್ರಮದ ಜೊತೆಗೆ ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಅರಣ್ಯ, ಜಿಲ್ಲಾ ಅಗ್ರಣೀಯ ಬ್ಯಾಂಕ್, ನಬಾರ್ಡ್, ಸಹಕಾರಿ ಸಂಘಗಳ ಇಲಾಖೆ ಪ್ರತಿನಿ ಧಿಗಳು ಸಹ ಮಾಹಿತಿ ನೀಡಲಿದ್ದಾರೆ. ಮೇ 9ರ ವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗದ ಅನುಮತಿ ಸಹ ಪಡೆಯಲಾಗಿದೆ ಎಂದು ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ ಅಪರ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ, ಕೃಷಿ ಇಲಾಖೆ ಉಪನಿರ್ದೇಶಕ ಹುಲಿರಾಜ್ ಹಾಗೂ ಕೃಷಿ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.