Advertisement

12ರಿಂದ 14 ವರ್ಷದ ಮಕ್ಕಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ

02:46 AM Mar 17, 2022 | Team Udayavani |

ಮಂಗಳೂರು: 12ರಿಂದ 14 ವರ್ಷ ದೊಳಗಿನ ಮಕ್ಕಳಿಗೆ ಕೊರ್ಬೆವ್ಯಾಕ್ಸ್‌ ಲಸಿಕೆ ನೀಡುವ ಅಭಿಯಾನಕ್ಕೆ ಬುಧವಾರ ವೆನ್ಲಾಕ್ ಆಸ್ಪತ್ರೆ ಆವರಣದಲ್ಲಿರುವ ಆಯುಷ್‌ ವಿಭಾಗದಲ್ಲಿ ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಚಾಲನೆ ನೀಡಿದರು.

Advertisement

ಜಿಲ್ಲೆಯಲ್ಲಿ 2ನೇ ಡೋಸ್‌ ಲಸಿಕೆಯನ್ನು ಶೇ. 92ರಷ್ಟು ಮಂದಿ ಪಡೆದುಕೊಂಡಿದ್ದು, ಶೇ. 8ರಷ್ಟು ಮಂದಿ ಬಾಕಿ ಇದ್ದಾರೆ. ಮೊದಲ ಡೋಸ್‌ ಲಸಿಕೆ ಪಡೆದವರು ಮತ್ತು ಎಲ್ಲ ಅರ್ಹರು ಲಸಿಕೆ ಹಾಕಿಸಿಕೊಳ್ಳ ಬೇಕು. 60 ವರ್ಷ ಮೇಲ್ಪಟ್ಟವರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮುನ್ನೆಚ್ಚರಿಕೆ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. 15ರಿಂದ 18 ವರ್ಷದೊಳಗಿನವರಿಗೆ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಶೇ. 85ರಷ್ಟು ಪೂರ್ತಿಗೊಂಡಿದೆ. ಜಿಲ್ಲೆಯಲ್ಲಿ 12ರಿಂದ 14 ವರ್ಷದೊಳಗಿನ 73,365 ಮಂದಿ ಮಕ್ಕಳಿದ್ದು, ಅವರಿಗೆ ಹಂತ ಹಂತವಾಗಿ ಲಸಿಕೆ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಲಸಿಕೆ ಹಾಕುವುದರಿಂದ ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಬೆಳೆಯುತ್ತದೆ. ಕೊರೊನಾ ಸೋಂಕು ತಗಲುವುದನ್ನು ತಡೆಯಬಹುದು. ಈಗಾಗಲೇ ಜಿಲ್ಲೆಯ ಬಹುಪಾಲು ಮಂದಿ ಲಸಿಕೆ ಪಡೆದಿರುವ ಕಾರಣ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದರು.

ಮೊದಲ ದಿನ ಗಣಪತಿ ಹೈಸ್ಕೂಲಿನ 20 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಲಸಿಕೆ ಹಾಕಲಾಗಿದೆ. ಮುಂದಿನ 2 ದಿನ ಇದೇ ರೀತಿ ವಿವಿಧ ಶಾಲೆಗಳ 20 ಮಂದಿಗೆ ಲಸಿಕೆ ಹಾಕಲಾಗುವುದು. ಬಳಿಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳಲ್ಲಿ ಈ ಲಸಿಕಾ ಅಭಿಯಾನ ನಡೆಯಲಿದೆ ಎಂದು ಆರ್‌ಸಿಎಚ್‌ ಅಧಿಕಾರಿ ಡಾ| ರಾಜೇಶ್‌ ಮಾಹಿತಿ ನೀಡಿದರು. ಜಿಲ್ಲೆಯ ಎಲ್ಲ ಅರ್ಹರು ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಸಿಇಒ ಡಾ| ಕುಮಾರ್‌, ಡಿಎಚ್‌ಒ ಡಾ| ಕಿಶೋರ್‌ ಕುಮಾರ್‌, ವೆನಾÉಕ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಸದಾಶಿವ ಶಾನುಭಾಗ್‌, ಆರ್‌ಎಂಒ ಡಾ| ಸುಧಾಕರ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ| ರಾಜೇಶ್‌, ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ| ಸುಜಯ್‌, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಜ್ಯೋತಿ ಮೊದಲಾದವರು ಉಪಸ್ಥಿತರಿದ್ದರು.

Advertisement

ಉಡುಪಿ: ಕೋವಿಡ್‌-19 ವಿರುದ್ಧದ ಹೋರಾಟದಲ್ಲಿ ಮತ್ತೂಂದು ಮಹತ್ವದ ಹೆಜ್ಜೆ ಇಡಲಾಗಿದೆ. 12ರಿಂದ 14 ವರ್ಷದವರೆಗಿನ ಮಕ್ಕಳಿಗೆ ಉಚಿತವಾಗಿ ಕೊರ್ಬೆವ್ಯಾಕ್ಸ್‌ ಲಸಿಕೆ ನೀಡಲಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳಿಗೆ ಕೊಡಿಸಬೇಕು ಎಂದು ಡಿಸಿ ಕೂರ್ಮಾರಾವ್‌ ಎಂ. ಹೇಳಿದರು.

ಜಿಲ್ಲಾ ಆಯುಷ್‌ ಆಸ್ಪತ್ರೆಯಲ್ಲಿ ಜಿ.ಪಂ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಬುಧವಾರ ನಡೆದ 12ರಿಂದ 14 ವರ್ಷದವರೆಗಿನ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡುವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲೂ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಮಕ್ಕಳ ಪೋಷಕರ ಸಭೆ ನಡೆಸಿ ಅಗತ್ಯ ಮಾಹಿತಿ ನೀಡಲು ಎಲ್ಲ ಶಿಕ್ಷಕರಿಗೆ ಸೂಚಿಸಲಾಗಿದೆ. 2008ರಿಂದ 2010ರ ಮಾ. 15ರೊಳಗೆ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಮೊದಲ ಡೋಸ್‌ ಪಡೆದ 28 ದಿನಗಳ ಅನಂತರ 2ನೇ ಡೋಸ್‌ ಪಡೆಯಬೇಕು ಎಂದರು.

18 + ಶೇ. 100 ಸಾಧನೆ
ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಲ್ಲಿ ಲಸಿಕೆ ನೀಡುವಲ್ಲಿ ಶೇ. 100 ಸಾಧನೆ ಆಗಿದ್ದು, 12ರಿಂದ 14 ವರ್ಷದವರೆಗಿನ ಮಕ್ಕಳ ಲಸಿಕೆ ನೀಡುವಲ್ಲಿ ಸಹ ಶೇ. 100 ಸಾಧನೆ ಮಾಡಿ ಉಡುಪಿ ಜಿಲ್ಲೆಯನ್ನು ಕೋವಿಡ್‌ ಮುಕ್ತ ಜಿಲ್ಲೆಯಾಗಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್‌, ನಗರಸಭೆ ಸದಸ್ಯ ಬಾಲಕೃಷ್ಣ ಶೆಟ್ಟಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌, ಜಿಲ್ಲಾ ಸರ್ಜನ್‌ ಡಾ| ಮಧುಸೂದನ್‌ ನಾಯಕ್‌, ಜಿಲ್ಲಾ ಆರ್‌.ಸಿ.ಎಚ್‌. ಅಧಿಕಾರಿ ಡಾ| ಎಂ.ಜಿ. ರಾಮ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ| ವಾಸುದೇವ ಉಪಾಧ್ಯಾಯ, ಆಯುಷ್‌ ಆಸ್ಪತ್ರೆಯ ವೈದ್ಯ ಡಾ| ದಿನಕರ ಡೋಂಗ್ರೆ, ಜಿಲ್ಲಾಸ್ಪತ್ರೆಯ ವೈದ್ಯ ಡಾ| ಚಂದ್ರಶೇಖರ ಅಡಿಗ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್‌ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ ಉಡುಪ ಸ್ವಾಗತಿಸಿ, ವಂದಿಸಿದರು.

ಯಾಕೂಬ್‌ ಖಾದರ್‌ ಗುಲ್ವಾಡಿ ಅವರ ನಿರ್ದೇಶನದ “ಗೋ ಕೊರೊನಾ’ ವೀಡಿಯೋ ಗೀತೆಯನ್ನು ಬಿಡುಗಡೆಗೊಳಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next