ಬಂಟ್ವಾಳ: ತುಳು ಭಾಷೆಯನ್ನು ಭಾರತ ಸಂವಿಧಾನನದ 8ನೇ ಪರಿಚ್ಛೇದಕ್ಕೆ ಸೇರ್ಪಡಿಸಬೇಕೆಂದು ಸರಕಾರದ ಗಮನಸೆಳೆಯಲು ನಡೆಸುತ್ತಿರುವ ಈ ಸಹಿ ಸಂಗ್ರಹ ಅಭಿಯಾನ ಅಭಿನಂದನಾರ್ಹ. ತುಳುವರೆಲ್ಲರೂ ಈ ಅಭಿಯಾನಕ್ಕೆ ಬೆಂಬಲ ನೀಡಬೇಕು ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ತಿಳಿಸಿದರು.
ಅವರು ವಿಶ್ವ ತುಳುವೆರೆ ಆಯನೊ ಕೂಟ, ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ ಇವರ ನೇತೃತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆ ಹಾಗೂ ಸುಮನಸಾ ಕೊಡವೂರು ಉಡುಪಿ ಇವರ ಸಹಕಾರದೊಂದಿಗೆ ನಡೆಯುತ್ತಿರುವ ಸಹಿ ಸಂಗ್ರಹ ಅಭಿಯಾನವನ್ನು ತುಳುವಿನಲ್ಲೇ ಸಹಿ ಹಾಕುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಪ್ರದೀಪ್ ಕುಮಾರ್ ಕಲ್ಕೂರ ಮುಖ್ಯ ಅತಿಥಿಯಾಗಿ ಮಾತನಾಡಿ, ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸಾಮರಸ್ಯ ಮೆರೆಸುವಲ್ಲಿ ತುಳು ಪ್ರಮುಖ ಪಾತ್ರ ವಹಿಸುತ್ತಿದೆ. ಮನೆ ಭಾಷೆ ಯಾವುದೇ ಆಗಿದ್ದರೂ ಅವರ ವ್ಯವಹಾರ ಭಾಷೆ ತುಳುವೇ ಆಗಿದೆ. ಇಂತಹ ಪ್ರಬುದ್ಧ ಭಾಷೆ 8ನೇ ಪರಿಚ್ಛೇದಕ್ಕೆ ಸೇರಲು ಎಲ್ಲ ಅರ್ಹತೆ ಹೊಂದಿದೆ. ಈ ಅಭಿಯಾನದ ಮೂಲಕ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಲಿ ಎಂದರು.
ಉಡುಪಿ ತುಳು ಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಡಿ.23,24 ರಂದು ಪಿಲಿಕುಳದಲ್ಲಿ ನಡೆಯಲಿರುವ ತುಳುನಾಡೋಚ್ಚಯ-2017 ಕಾರ್ಯಕ್ರಮದ ಪೂರ್ವಭಾವಿಯಾಗಿ ಈ ಸಹಿ ಸಂಗ್ರಹ ಅಭಿಯಾನವು ನಡೆಯುತ್ತಿದ್ದು ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು. ತುಳು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ,ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ, ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕು ಮೊದಲಾದ ಬೇಡಿಕೆಗಳನ್ನು ಕೇಂದ್ರ, ರಾಜ್ಯ ಸರಕಾರದ ಮುಂದಿಡಲು ಒಂದು ಲಕ್ಷಕ್ಕಿಂತಲೂ ಹೆಚ್ಚು ಸಹಿ ಸಂಗ್ರಹಿಸಲು ತೀರ್ಮಾನಿಸಲಾಗಿದೆ ಎಂದರು. ತುಳುನಾಡೋಚ್ಚಯ ಉಡುಪಿ ಸಮಿತಿ ಅಧ್ಯಕ್ಷೆ ಡಾ| ನಿಕೇತನ ಅಧ್ಯಕ್ಷತೆ ವಹಿಸಿದ್ದರು. ಡಾ| ರಾಜೇಶ್ ಆಳ್ವ ಮಾತನಾಡಿದರು.
ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಶ್ರೀ ಕ್ಷೇತ್ರ ಮುದ್ರಾಡಿಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಉಡುಪಿ ಮಠದ ವಾಸು ದೇವ ಭಟ್, ಪ್ರಕಾಶ್ ಜಿ. ಕೊಡವೂರು, ಸುರೇಶ್ ರಾವ್, ಸಿರಾಜ್ ಅಡ್ಕರೆ, ಯಶೋದಾ ಕೇಶವ್, ತು.ರ.ವೇ ಉಡುಪಿ ಘಟಕದ ಅಜರುದ್ದೀನ್, ತುಳುನಾಡೋಚ್ಚಯ ಉಡುಪಿ ಸಮಿತಿ ಕಾರ್ಯದರ್ಶಿ ದಯಾನಂದ ಕರ್ಕೇರ, ತಾರಾ ಆಚಾರ್ಯ, ಜ್ಯೋತಿ ಎಸ್. ದೇವಾಡಿಗ, ಯಾದವ್ ಕರ್ಕೇರ, ಸರೋಜಾ ಯಶವಂತ್, ವಾಣಿ ಸುಕುಮಾರ್ ಮುದ್ರಾಡಿ, ಸುಗಂಧಿ ಉಮೇಶ್ ಕಲ್ಮಾಡಿ, ಚಂದನ್ ಮೊದಲಾದವರಿದ್ದರು. ಸಹಿಸಂಗ್ರಹ ಅಭಿಯಾನದ ಸಂಚಾ ಲಕ ಸುಕುಮಾರ್ ಮೋಹನ್ ಮುದ್ರಾಡಿ ಸ್ವಾಗತಿಸಿ, ಭಾಸ್ಕರ ಭಟ್ ವಂದಿಸಿದರು.
ಧ್ಯೇಯೋದ್ದೇಶ ಈಡೇರಲಿ
ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಹಕ್ಕೊತ್ತಾಯ ಮಂಡಿಸುತ್ತೇನೆ. ಮಧ್ವಾಚಾರ್ಯರ ಪುಣ್ಯದ ಮಣ್ಣಿನಿಂದ ಈ ಅಭಿಯಾನವು ಆರಂಭಗೊಂಡಿದ್ದು ಯಶಸ್ವಿಯಾಗಿ ಸಾಗಿ ಯಾತ್ರೆಯ ಧ್ಯೇಯೋದ್ದೇಶಗಳು ಈಡೇರಲಿ.
–
ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು,
ಪರ್ಯಾಯ ಶ್ರೀ ಪೇಜಾವರ ಮಠ