ಒಂದು ಕಡೆ ಭಯ, ಇನ್ನೊಂದು ಕಡೆ ಬುದ್ಧಿವಂತಿಕೆ… ಈ ಎರಡರ ಸಮ್ಮಿಲನ “ದೃಶ್ಯ’. “ದೃಶ್ಯ’ ಚಿತ್ರದ ಮೊದಲ ಭಾಗದಲ್ಲಿ, ಅನಿರೀಕ್ಷಿತವಾಗಿ ನಡೆದ ಕೊಲೆ ಪ್ರಕರಣದಲ್ಲಿ ಚಾಣಾಕ್ಷತೆಯಿಂದ ತನ್ನ ಕುಟುಂಬವನ್ನು ಕಾಪಾಡಿಕೊಂಡಿದ್ದ ರಾಜೇಂದ್ರ ಪೊನ್ನಪ್ಪ, ಮತ್ತೆಎದುರಾಗುವ ಆ ಕೊಲೆಯ ಮರುತನಿಖೆಯಲ್ಲಿ ಹೇಗೆ ತನ್ನ ಕುಟುಂಬವನ್ನು ಕಾಪಾಡಿಕೊಳ್ಳುತ್ತಾನೆ ಎಂಬುದು “ದೃಶ್ಯ-2’ನಲ್ಲಿ ಮುಂದುವರೆದಿದೆ.
“ದೃಶ್ಯ’ ಚಿತ್ರದ ಕಥೆಯ ಎಳೆ ಮತ್ತು ಹಲವು ಪಾತ್ರಗಳು “ದೃಶ್ಯ-2′ ಚಿತ್ರದಲ್ಲೂ ಮುಂದುವರೆದಿರುವುದರಿಂದ, ಈ ಹಿಂದೆ ದೃಶ್ಯ’ ನೋಡಿದವರಿಗೆ ದೃಶ್ಯ-2′ ಕಥೆ ಮತ್ತು ಪಾತ್ರಗಳ ಹಿನ್ನೆಲೆ ಬಹುಬೇಗ ಅರ್ಥವಾಗುತ್ತದೆ. ಆದರೆ ಚಿತ್ರದ ಮೊದಲರ್ಧ ಚಿತ್ರಕಥೆ ಮಂದಗತಿಯಲ್ಲಿ ಸಾಗುವಂತಿದೆ. ಇಲ್ಲಿ ಮೂಲಕಥೆಗೆ ಸಂಬಂಧವೇ ಇಲ್ಲದಂತಹ ಒಂದಷ್ಟು ದೃಶ್ಯಗಳಿವೆ. ಚಿತ್ರಮಂದಿರ ಆರಂಭಿಸುವ ಕನಸು, ಕಥೆಗಾರನ ಜೊತೆ ಚರ್ಚೆ… ಇಂತಹ ಅಂಶಗಳ ಮೂಲಕ ಮೊದಲರ್ಧವನ್ನು ತುಂಬಿಸಲಾಗಿದೆ. ಚಿತ್ರದಲ್ಲಿ ಯಾವುದೇ ಅಚ್ಚರಿಯ ತಿರುವುಗಳನ್ನು ಮಧ್ಯಂತರದವರೆಗೂ ನಿರೀಕ್ಷಿಸುವಂತಿಲ್ಲ. ಹೀಗಾಗಿ ಇಡೀ ಚಿತ್ರದ ಕಥೆಯ ಪ್ರಮುಖ ಘಟ್ಟ ತಲುಪಿ, ಕಥೆಗೊಂದು ತಾರ್ಕಿಕ ಅಂತ್ಯ ಸಿಗುವುದು ಚಿತ್ರದ ದ್ವಿತಿಯಾರ್ಧದಲ್ಲಿ, ಅದರಲ್ಲೂ ಕೊನೆಯ ಹತ್ತು ನಿಮಿಷಗಳಲ್ಲಿ ಎನ್ನಬಹುದು.
ಒಟ್ಟಾರೆ “ದೃಶ್ಯ’ ಚಿತ್ರದಿಂದ ಪ್ರೇರಣೆಗೊಂಡು, “ದೃಶ್ಯ-2′ ನೋಡಲು ಮುಂದಾಗಿದ್ದರೆ, ಆ ಮಟ್ಟದ ಥ್ರಿಲ್ಲಿಂಗ್ ಅನುಭವ “ದೃಶ್ಯ-2’ನಲ್ಲಿ ನಿರೀಕ್ಷಿಸುವಂತಿಲ್ಲ. ಆದರೆ, ಮುಂದುವರೆದ ಭಾಗದಲ್ಲಿ ಯಾವ ಅಂಶ ದೊಂದಿಗೆ ಕೇಸ್ ರೀ ಓಪನ್ ಆಗುತ್ತದೆ ಎಂಬ ಕುತೂಹಲವಿದ್ದವರು ಈ ಸಿನಿಮಾ ನೋಡಬಹುದು. ಆ ತರಹದ ಒಂದು ಅದ್ಭುತ ಕಲ್ಪನೆಯನ್ನು ಮೂಲಕಥೆಗಾರ ಜೀತು ಜೋಸೆಫ್ ಕಂಡಿದ್ದರ ಪರಿಣಾಮ “ದೃಶ್ಯ-2′ ಆಗಿದೆ. ಹಾಗಾಗಿ, ಅದರ ಕ್ರೆಡಿಟ್ ಮೂಲಕಥೆಗಾರರಿಗೆ ಸಲ್ಲಬೇಕು.
ತನ್ನ ಕುಟುಂಬವನ್ನು ಕಾಪಾಡಿಕೊಳ್ಳುವ ಕಥಾನಾಯಕ ರಾಜೇಂದ್ರ ಪೊನ್ನಪ್ಪನ ಪಾತ್ರದಲ್ಲಿ ನಟ ರವಿಚಂದ್ರನ್ “ದೃಶ್ಯ-2′ ಚಿತ್ರದಲ್ಲೂ ಇಷ್ಟವಾಗುತ್ತಾರೆ. ಉಳಿದಂತೆ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿ ಒಳಗೊಳಗೆ ತಳಮಳ ಅನುಭವಿಸುವ ಗೃಹಿಣಿಯಾಗಿ ನವ್ಯಾ ನಾಯರ್, ಆರೋಹಿ ತಮ್ಮ ಅಭಿನಯದಲ್ಲಿ ಇಷ್ಟವಾಗುತ್ತಾರೆ. ಉಳಿದಂತೆ ಅನಂತ್‌ನಾಗ್ ಅವರದು ತೂಕದ ನಟನೆ. ಶಿವರಾಮ್, ಪ್ರಮೋದ್ ಶೆಟ್ಟಿ, ಪ್ರಭು ಗಣೇಶ್ ಸೇರಿದಂತೆ ಬಹುತೇಕರದ್ದು ಅಚ್ಚುಕಟ್ಟು ಅಭಿನಯ. ಇನ್ನೂ ಅನೇಕ ಕಲಾವಿದರು ಚಿತ್ರದ ಪಾತ್ರಗಳಲ್ಲಿ ಅಭಿನಯಿಸಿದ್ದರೂ, ಪ್ರೇಕ್ಷಕರ ಮನಸ್ಸಿನಲ್ಲಿ ಹೆಚ್ಚು ಹೊತ್ತು ಉಳಿಯುವುದಿಲ್ಲ.
ಇನ್ನು ತಾಂತ್ರಿಕವಾಗಿ “ದೃಶ್ಯ-2′ ಚಿತ್ರದ ಛಾಯಾಗ್ರಹಣ, ಸಂಕಲನ ಮತ್ತು ಲೊಕೇಶನ್ ಗಳು ತೆರೆಮೇಲೆ ಗಮನ ಸೆಳೆಯುತ್ತದೆ. ಆದರೆ ಚಿತ್ರದ ಸಂಗೀತ, ಹಿನ್ನೆಲೆ ಸಂಗೀತ ಕಡೆಗೆ ಇನ್ನಷ್ಟು ಗಮನ ಕೊಡಬಹುದಿತ್ತು.
ಜಿ.ಎಸ್.ಕಾರ್ತಿಕ ಸುಧನ್