Advertisement

ಹೊಸ ವರ್ಷದ ಮದ್ಯಾರಾಧನೆಗೆ ಭರ್ಜರಿ ಸಿದ್ಧತೆ

01:34 PM Dec 30, 2021 | Team Udayavani |

ದಾವಣಗೆರೆ: ಕಳೆದು ಹೋಗುತ್ತಿರುವ 2021ಕ್ಕೆ ವಿದಾಯ ಹೇಳಿ ಹೊಸ ವರ್ಷ 2022ನ್ನು ಸಾರಾಯಿ ಸೀಸೆಯ ನಶೆಯಲ್ಲೇ ಸ್ವಾಗತ ಕೋರಲು ಮದ್ಯಪ್ರಿಯರು ಸಜ್ಜಾಗಿದ್ದು, ಇದಕ್ಕಾಗಿ ಎರಡು ದಿನ ಮುನ್ನವೇ ಭರದ ಸಿದ್ಧತೆ ನಡೆಸಿದ್ದಾರೆ.

Advertisement

ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ರಾತ್ರಿ ಕರ್ಫ್ಯೂ ಸೇರಿದಂತೆ ವಿವಿಧ ಷರತ್ತುಗಳು ಮದ್ಯಾರಾಧನೆಗೆ ಅಡ್ಡಿಯಾಗದಂತೆ “ಸಮಗ್ರ ಕ್ರಿಯಾ ಯೋಜನೆ’ ರೂಪಿಸಿಕೊಳ್ಳುತ್ತಿದ್ದಾರೆ. ರಾತ್ರಿ 10 ಗಂಟೆಯೊಳಗೆ ಮುಖ್ಯವಾಗಿ ಹೊಟೇಲ್‌ ಗಳು, ಮದ್ಯದ ಮಳಿಗೆ, ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಗಳು ಮುಚ್ಚುವುದರಿಂದ ಬಹುತೇಕ ಮದ್ಯಪ್ರಿಯರು ಡಿ.31ರಂದು ಮನೆಗಳನ್ನೇ “ಮದ್ಯಾರಾಧನೆ’ಯ ಕೇಂದ್ರಗಳನ್ನಾಗಿಸಿಕೊಳ್ಳಲು ಯೋಜನೆ ಹಾಕಿಕೊಂಡಿದ್ದಾರೆ.

ಡಿಸೆಂಬರ್‌ 31ರ ವಿಶೇಷ ಸಂಭ್ರಮಾಚರಣೆಗಾಗಿ ಮದ್ಯ ಪ್ರಿಯರು ಖಾಲಿ ಮನೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ತಮ್ಮ ಮನೆಯ ಅಕ್ಕ ಪಕ್ಕ ಯಾವುದಾದರೂ ಖಾಲಿ ಮನೆ ಇದೆಯೇ, ತಮ್ಮ ಸ್ನೇಹಿತರಲ್ಲಿ ಯಾರದ್ದಾದರೂ ಒಂದು ಖಾಲಿ ಮನೆ ಇರಬಹುದೇ, ಹತ್ತಿರದಲ್ಲಿ ಯಾವುದಾದರೂ ತೋಟದ ಮನೆ ಸಿಕ್ಕರೂ ಒಳ್ಳೆಯದಾದೀತು, ಕೊನೆ ಪಕ್ಷ ನಿರ್ಮಾಣ ಹಂತದಲ್ಲಿರುವ ಯಾವುದಾದರೂ ಕಟ್ಟಡವಾದರೂ ರಾತ್ರಿ ಸಂಭ್ರಮಾಚರಣೆಗಾಗಿ ಸಿಗಬಹುದೇ ಎಂದು ಹುಡುಕಾಡುತ್ತಿದ್ದಾರೆ.

ಹಳ್ಳಿಗಳತ್ತ ಚಿತ್ತ

ಖಾಲಿ ಮನೆ ಹುಡುಕಾಟದಲ್ಲಿ ಹಲವರು ಈಗಾಗಲೇ ಯಶಸ್ವಿಯೂ ಆಗಿದ್ದಾರೆ. ಸಿಗದೇ ಇದ್ದವರು ಪೊಲೀಸರ ಕಣ್ಣಿಗೆ ಬೀಳದ ನಗರ ಸಮೀಪದ ಹಳ್ಳಿಗಳ ಬಯಲು ಜಾಗಗಳತ್ತ ಚಿತ್ತ ಹರಿಸಿದ್ದಾರೆ. ಮಹಾನಗರ, ನಗರ, ಪಟ್ಟಣಗಳಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್ ಇರುವುದರಿಂದ ಬಹುತೇಕರು ಮದ್ಯಾರಾಧನೆಗೆ ಹಳ್ಳಿಗಳತ್ತ ಹೆಚ್ಚು ಆಸಕ್ತಿ ತೋರಿದ್ದಾರೆ. ಜತೆಗೆ ಮದ್ಯದ ದಾಸ್ತಾನು ಹಾಗೂ ಸಂಭ್ರಮಾಚರಣೆಯ ಸ್ಥಳದ ಗೌಪ್ಯತೆಯನ್ನೂ ಕಾಯ್ದುಕೊಳ್ಳುವ ಬದ್ಧತೆ ಪ್ರದರ್ಶಿಸುತ್ತಿದ್ದಾರೆ. ಈ ನಡುವೆ ಹಳ್ಳಿಗಳಲ್ಲಿರುವ ಕೆಲವು ದಿನಸಿ ಅಂಗಡಿ, ಗೂಡಂಗಡಿಕಾರರು ಸಹ ಡಿ. 31ರಂದು ಮಾರಾಟ ಮಾಡಲೆಂದು ಅಕ್ರಮವಾಗಿ ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

Advertisement

ಮದ್ಯ ವ್ಯಾಪಾರ ಜೋರು

ಪ್ರಸ್ತುತ ರಾತ್ರಿ ಕರ್ಫ್ಯೂ ಸೇರಿದಂತೆ ಇನ್ನಿತರ ಷರತ್ತುಗಳು ಇರುವುದರಿಂದ ಕೊನೆಯ ದಿನ ಅಂದರೆ ಡಿ.31ರಂದೇ ಎಲ್ಲರೂ ಖರೀದಿಗೆ ಮುಂದಾದರೆ ಮದ್ಯ ಸಿಗದೆ ಹೋಗಬಹುದು. ಇಲ್ಲವೇ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾಗಬಹುದು ಅಥವಾ ಜನದಟ್ಟಣೆ ನಿಯಂತ್ರಿಸಲು ಸರ್ಕಾರ ಅಂದು ಇನ್ನಷ್ಟು ಬೇಗನೆ ಕರ್ಫ್ಯೂ ಆರಂಭಿಸಬಹುದು ಎಂಬ ಲೆಕ್ಕಾಚಾರ ಹಾಕಿರುವ ಮದ್ಯ ಪ್ರಿಯರು, ಈಗಲೇ ತಮ್ಮ ತಂಡದ ಸದಸ್ಯರ ಲೆಕ್ಕ ಹಾಕಿ ತರಹೇವಾರಿ ಬಾಕ್ಸ್‌ಗಟ್ಟಲೆ ಮದ್ಯ ಖರೀದಿಯಲ್ಲಿ ತೊಡಗಿದ್ದಾರೆ. ಹೀಗಾಗಿ ಡಿ.31ಕ್ಕೂ ಮೊದಲೇ ಮದ್ಯದ ಮಳಿಗೆಗಳಲ್ಲಿ ಖರೀದಿ ಜೋರಾಗಿಯೇ ನಡೆದಿದೆ. ಕೇಕ್‌ ಖರೀದಿಯನ್ನು ಕೊನೆಯ ದಿನಕ್ಕೆ ಮೀಸಲಿಟ್ಟಿದ್ದಾರೆ. ಮತ್ತೆ ಕೆಲವರು ಮದ್ಯದ ಜತೆ ಬೇಕಾಗುವ ಕುರುಕಲು ತಿಂಡಿ-ತಿನಿಸುಗಳನ್ನು ಸಹ ದಾಸ್ತಾನು ಮಾಡಿಟ್ಟುಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಮದ್ಯ ಕೂಟದ ಸ್ಥಳದಲ್ಲಿಯೇ ಅಡುಗೆ ಮಾಡಿಕೊಳ್ಳಲು ಸಹ ಯೋಜನೆ ಹಾಕಿಕೊಂಡಿದ್ದು ಅಡುಗೆ ಸಾಮಗ್ರಿಗಳ ಸಂಗ್ರಹವೂ ಜೋರಾಗಿ ನಡೆದಿದೆ.

ಬಾರ್‌-ಹೊಟೇಲ್‌ಗ‌ಳಿಗೆ ನಷ್ಟ

ತಡರಾತ್ರಿವರೆಗೆ ಅಂಗಡಿ ತೆರೆದು ಭರ್ಜರಿ ವ್ಯಾಪಾರ ಮಾಡಿಕೊಳ್ಳುತ್ತಿದ್ದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನವರು ರಾತ್ರಿ 10 ಗಂಟೆಯೊಳಗೆ ಅಂಗಡಿಗಳನ್ನು ಬಂದ್‌ ಮಾಡಬೇಕಾಗಿದೆ. ಇದರಿಂದಾಗಿ ಅವರ ಡಿ. 31ರ ವ್ಯಾಪಾರಕ್ಕೆ ಭಾರೀ ಹೊಡೆತ ಬೀಳಲಿದೆ. ಅನೇಕ ಹೊಟೇಲ್‌ ಹಾಗೂ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನವರು ಪಾರ್ಸೆಲ್‌ಗ‌ಳನ್ನು ಮಾಡಿ ಮನೆ ಬಾಗಿಲಿಗೆ ಮುಟ್ಟಿಸುವ ಯೋಜನೆ ಹಾಕಿಕೊಂಡಿದ್ದಾÃ

ದಾಖಲೆಯ ಮದ್ಯ ಮಾರಾಟ
ರಾಜ್ಯದಲ್ಲಿ ಕಳೆದ ವರ್ಷ (2020ರ ಡಿ. 31) ಕೊರೊನಾ ನಿಯಮಗಳ ನಡುವೆಯೂ ದಾಖಲೆಯ ಮದ್ಯ ವ್ಯಾಪಾರವಾಗಿತ್ತು. ಅಂದರೆ 150 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿತ್ತು. 2019ರಲ್ಲಿ 119 ಕೋಟಿ ರೂ., 2018ರಲ್ಲಿ 82.02 ಕೋಟಿ ರೂ. ಮದ್ಯ ವ್ಯಾಪಾರವಾಗಿತ್ತು.

ಕೊರೊನಾ ನಿಯಂತ್ರಣಕ್ಕೆ ವಿಧಿಸಿದ ಕರ್ಫ್ಯೂ ಸೇರಿದಂತೆ ಇತರ ನಿಯಮಾವಳಿಗಳು ಮದ್ಯ ವ್ಯಾಪಾರದ ಮೇಲೆ ಯಾವುದೇ ದುಷ್ಪರಿಣಾಮ ಬೀರಿಲ್ಲ. ಡಿ. 31ರ ಹಿನ್ನೆಲೆಯಲ್ಲಿ ಮದ್ಯ ವ್ಯಾಪಾರ ಮಾಮೂಲಾಗಿ ನಡೆಯುತ್ತಿದೆ.
ಎಂ.ಟಿ. ಸುಭಾಶ್ಚಂದ್ರ, ಉಪಾಧ್ಯಕ್ಷರು ರಾಜ್ಯ ಮದ್ಯ ಮಾರಾಟಗಾರರ ಸಂಘ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next