Advertisement

ಕುಡಿವ ನೀರಿಗೆ ಅನುದಾನ ಕೊರತೆಯಾದಲ್ಲಿ ಕೊಡುವೆ

01:19 PM Mar 01, 2017 | |

ದಾವಣಗೆರೆ: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಸಮರೋಪಾದಿ ಕೆಲಸ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ್‌ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಂಗಳವಾರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಬರದ ಹಿನ್ನೆಲೆಯಲ್ಲಿ ಜನರು ಮತ್ತು ಜಾನುವಾರುಗಳಿಗೆಸಮರ್ಪಕವಾಗಿ ನೀರು   ಒದಗಿಸುವಂತಾಗಬೇಕು. ಕುಡಿಯುವ ನೀರಿನ ಯೋಜನೆಗೆ ಅನುದಾನದ ಕೊರತೆ ಇದ್ದಲ್ಲಿ ಸಂಸದರ ನಿಧಿಯಿಂದ ನೀಡುವುದಾಗಿ ತಿಳಿಸಿದರು. ಉಪ ಕಾರ್ಯದರ್ಶಿ ಜಿ.ಎಸ್‌. ಷಡಕ್ಷರಪ್ಪ, ಕುಡಿಯುವ ನೀರಿಗಾಗಿ ಶಾಸಕರ ಅಧ್ಯಕ್ಷತೆಯ ಟಾಸ್ಕ್ರ್ಸ್‌ಗೆ 40 ಲಕ್ಷ ಅನುದಾನ ಬಿಡುಗಡೆಯಾಗಿದೆ.

ಜಿಲ್ಲಾ ಪಂಚಾಯತ್‌ ಅಧ್ಯಕ್ಷರ ವಿವೇಚನಾ ನಿಧಿಯಡಿ 50 ಲಕ್ಷ ಅನುದಾನ ನೀಡಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ದಾವಣಗೆರೆ ತಾಲೂಕು ಪಂಚಾಯತ್‌ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ತಮ್ಮ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿವ ನೀರಿನ ಸಮಸ್ಯೆ ತುಂಬಾ ಇದೆ.

ಹೆಮ್ಮನಬೇತೂರಿನಲ್ಲಿ ಸಹಕಾರಿ ಸಂಘದಿಂದ ಕೈಗೊಂಡಿರುವ ಶುದ್ಧ ಕುಡಿಯುವ ನೀರಿನ ಘಟಕ ಅರ್ಧದಲ್ಲೇ ನಿಂತಿವೆ ಎಂದು ದೂರಿದರು. ತಮ್ಮ ಅನುದಾನದಲ್ಲಿ 5 ಲಕ್ಷ ನೀಡಲಾಗುವುದು. ಆದಷ್ಟು ಬೇಗ ಕೆಲಸ ಮುಗಿಸಿ, ನೀರು ಒದಗಿಸಬೇಕು ಎಂದು ಸಂಸದ ಸಿದ್ದೇಶ್ವರ್‌ ಭೂ ಸೇನಾ ನಿಗಮದ ಅಧಿಕಾರಿ ಶಿವಶಂಕರ್‌ಗೆ ಸೂಚಿಸಿದರು. ಚನ್ನಗಿರಿ ತಾಲೂಕಿನಲ್ಲಿ ಅನುಮೋದನೆ ದೊರೆತ 206 ಬೋರ್‌ವೆಲ್‌ಗ‌ಳಲ್ಲಿ 170 ಬೋರ್‌ ಕೊರೆಸಲಾಗಿದ್ದು, 136 ಯಶಸ್ವಿಆಗಿವೆ.

ದಾವಣಗೆರೆ ತಾಲೂಕಲ್ಲಿ 206ರಲ್ಲಿ 137, ಹರಿಹರ 140 ರಲ್ಲಿ 97, ಹರಪನಹಳ್ಳಿ 294 ರಲ್ಲಿ 223, ಹೊನ್ನಾಳಿ 145ರಲ್ಲಿ 115 ಹಾಗೂ ಜಗಳೂರು ತಾಲೂಕಿನಲ್ಲಿ 214ರಲ್ಲಿ 165 ಯಶಸ್ವಿಯಾಗಿವೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ ಶಿವಕುಮಾರ್‌ ಮಾಹಿತಿ ನೀಡಿದರು. ಈ ಕೊಳವೆಬಾವಿಗಳ ಪರಿಶೀಲನೆ ನಡೆಸುವಂತೆ ಸಂಸದ ಸಿದ್ದೇಶ್ವರ್‌ ಸಿಇಒಗೆ ಸೂಚನೆ ನೀಡಿದರು.

Advertisement

ವಲಸೆ ತಪ್ಪಿಸಲು ಕೆಲಸ ಕೊಡಿ…: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ 5,800 ಜನರು ಕೆಲಸ ಮಾಡುತ್ತಿದ್ದಾರೆ. ಚನ್ನಗಿರಿ ತಾಲೂಕಿನಲ್ಲಿ 329, ದಾವಣಗೆರೆಯಲ್ಲಿ 615, ಹರಪನಹಳ್ಳಿಯಲ್ಲಿ 2,271, ಹರಿಹರದಲ್ಲಿ 180, ಹೊನ್ನಾಳಿಯಲ್ಲಿ 484 ಮತ್ತು ಜಗಳೂರು ತಾಲೂಕಿನಲ್ಲಿ 1,129 ಜನ ಕೆಲಸ ಮಾಡುತ್ತಿದ್ದಾರೆ.

ಮಾನವ ದಿನಗಳನ್ನು 100 ರಿಂದ 150 ಕ್ಕೆ ಹೆಚ್ಚಿಸಲಾಗಿದ್ದು, ಇದಕ್ಕೆ ಹೆಚ್ಚುವರಿ ಅನುದಾನವನ್ನೂ ಬಿಡುಗಡೆ ಮಾಡಲಾಗಿದೆ. ಕೆಲಸ ಮತ್ತು ಪಾವತಿ ಸರಿಯಾಗಿ ಆಗುತ್ತಿದೆ. 169 ಕೋಟಿ ಅನುದಾನದಲ್ಲಿ 131 ಕೋಟಿ ಬಳಕೆಯಾಗಿದೆ ಎಂದರು. ಬರಗಾಲ ಇದೆ. ಜನರು ಕೆಲಸ ಹುಡುಕುತ್ತಾ ವಲಸೆ ಹೋಗುತ್ತಾರೆ.

ಜಿಲ್ಲೆಯ ಜನರು ಕೆಲಸ ಅರಸುತ್ತಾ ವಲಸೆ ಹೋಗದಂತೆ ಖಾತರಿ ಯೋಜನೆಯಡಿ ಯಾರು ಕೆಲಸ ಕೇಳುತ್ತಾರೋ ಎಲ್ಲರಿಗೂ ಕೆಲಸ ಕೊಟ್ಟು, ವಾರದಲ್ಲಿ ವೇತನ ಪಾವತಿಸಬೇಕು ಎಂದು ಸಿದ್ದೇಶ್ವರ್‌ ಸೂಚಿಸಿದರು. ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್‌, ಉಪಾಧ್ಯಕ್ಷ ಡಿ. ಸಿದ್ದಪ್ಪ, ದಿಶಾ ಸಮಿತಿ ಸದಸ್ಯರಾದ ನಾಗರತ್ನನಾಯ್ಕ, ಆರ್‌. ಲಕ್ಷ್ಮಣ್‌, ಕೆ.ಜಿ. ಪರಮಶಿವ, ತಾಲೂಕು, ಗ್ರಾಮ ಪಂಚಾಯತಿ ಅಧ್ಯಕ್ಷರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next