Advertisement

‘ಬರ’ದ ಹಣೆಪಟ್ಟಿ ಕಳಚೀತೇ ನೀರಿನ ಯೋಜನೆ?

01:11 PM Apr 13, 2022 | Team Udayavani |

ಮೊಳಕಾಲ್ಮೂರು: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ಹಾಗೂ ಬರಪೀಡಿತ ತಾಲೂಕು ಎಂಬ ಹಣೆಪಟ್ಟಿಯನ್ನು ಮೊಳಕಾಲ್ಮೂರು ಹೊಂದಿದೆ. ತಾಲೂಕಿನ ಬಹುತೇಕ ಎಲ್ಲಾ ಗ್ರಾಮಗಳ ಜನರು ಫ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಬೇಸತ್ತಿದ್ದರು. ಇದೀಗ ಭದ್ರಾ ಮೇಲ್ದಂಡೆ, ತುಂಗಾ ಹಿನ್ನೀರು ಯೋಜನೆ ಹಾಗೂ ಜಲಜೀವನ ಮಿಷನ್‌ ಯೋಜನೆಗಳಿಂದ ನೀರು ಪೂರೈಕೆ ಮಾಡಲು ಉದ್ದೇಶಿಸಿರುವುದು ಜನತೆಯಲ್ಲಿ ಸ್ವಲ್ಪ ಸಮಾಧಾನ ಮೂಡಿಸಿದೆ.

Advertisement

ಮಳೆಯಾಶ್ರಿತ ಮೊಳಕಾಲ್ಮೂರು ತಾಲೂಕಿನಲ್ಲಿ 16 ಗ್ರಾಮ ಪಂಚಾಯಿತಿಗಳ 128 ಗ್ರಾಮಗಳಲ್ಲಿ 1,59,549 ಜಸಂಖ್ಯೆ ಇದೆ. ಇದುವರೆಗೂ ಶಾಶ್ವತ ಶುದ್ದ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಫ್ಲೋರೈಡ್‌ ಯುಕ್ತ ನೀರು ಕುಡಿದು ದಾಹ ತೀರಿಸಿಕೊಳ್ಳುವ ದುಸ್ಥಿತಿ ಇದೆ.

ಜನರ ಈ ಪರಿಸ್ಥಿತಿ ಗಮನಿಸಿದ ಸಾರಿಗೆ ಸಚಿವರೂ ಆಗಿರುವ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು, ಈ ಭಾಗದ ಜನತೆಗೆ ಶಾಶ್ವತ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ತುಂಗಾ ಹಿನ್ನೀರಿನ ಕುಡಿಯುವ ನೀರು ಯೋಜನೆ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯೋಜನೆಯಡಿ ಪೈಪ್‌ ಲೈನ್‌ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದ್ದು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಇನ್ನುಳಿದ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ತುಂಗಭದ್ರಾ ನದಿ ತಟದಲ್ಲಿ ಜಾಕ್‌ವೆಲ್‌ ಅಳವಡಿಕೆ ಮಾಡಲು ವಿಳಂಬವಾಗುತ್ತಿರುವುದರಿಂದ ಸ್ವಲ್ಪ ತಡವಾಗಿದೆ. ಆದಷ್ಟು ಬೇಗ ಕುಡಿಯುವ ನೀರು ಪೂರೈಕೆ ಮಾಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಹಾತ್ವಾಕಾಂಕ್ಷೆಯ ಜಲಜೀವನ್‌ ಮಿಷನ್‌ ಯೋಜನೆಯಡಿ 65 ಕೋಟಿ ರೂ. ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. 128 ಗ್ರಾಮಗಳಲ್ಲಿ ನೀರನ್ನು ಶೇಖರಿಸಲು ಹಳೆಯ 126 ಓವರ್‌ಹೆಡ್‌ ಟ್ಯಾಂಕ್‌ಗಳೊಂದಿಗೆ ಹೊಸದಾಗಿ 58 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಲಾಗಿದೆ.

Advertisement

ಜಲಜೀವನ್‌ ಮಿಷನ್‌ ಯೋಜನೆಯಡಿ ತಾಲೂಕಿನ 138 ಗ್ರಾಮಗಳ ಎಲ್ಲಾ ಮನೆಗಳಿಗೂ ನಳ ಅಳವಡಿಸಿ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲು ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿ ಶ್ರಮಿಸುತ್ತಿದ್ದಾರೆ.

ಮನೆ ಮನೆಗೆ ಕುಡಿಯುವ ನೀರಿನ ನಳ ಜೋಡಣೆಗೆ ಕಾಟನಾಯಕನಹಳ್ಳಿ ಮತ್ತು ಸೂರಮ್ಮನಹಳ್ಳಿ ಗ್ರಾಮಗಳಲ್ಲಿ ಈಗಾಗಲೇ ಪೈಪ್‌ ಗಳನ್ನು ಸರಬರಾಜು ಮಾಡಲಾಗಿದೆ. ಇದೆಲ್ಲದರ ಜತೆಗೆ ಸರ್ಕಾರಿ ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ವಸತಿ ಶಾಲೆಗಳಿಗೂ ಸಮರ್ಪಕವಾಗಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಸಚಿವ ಶ್ರೀರಾಮುಲು ಮುತುವರ್ಜಿ ವಹಿಸಲಿ ಎಂಬುದು ತಾಲೂಕಿನ ಸಾರ್ವಜನಿಕರ ಒತ್ತಾಯ.

ಮೊಳಕಾಲ್ಮೂರು ತಾಲೂಕಿನಲ್ಲಿ ಬಹು ವರ್ಷಗಳಿಂದ ಕುಡಿಯುವ ನೀರಿನ ಹಾಹಾಕಾರವಿದೆ. ಜಲಜೀವನ್‌ ಮಿಷನ್‌ ಯೋಜನೆಯಡಿ ತ್ವರಿತವಾಗಿ ಕಾಮಗಾರಿ ಕೈಗೊಂಡು ಮನೆ ಮನೆಗೆ ನಳ ಜೋಡಿಸಿ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕು. ಬೇಡರೆಡ್ಡಿಹಳ್ಳಿ – ಬಸವರೆಡ್ಡಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ

ಮೊಳಕಾಲ್ಮೂರು ತಾಲೂಕಿನ ಎಲ್ಲಾ ಗ್ರಾಮಗಳ ಜನತೆಗೆ ಸಮರ್ಪಕವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಜಲಜೀವನ್‌ ಮಿಷನ್‌ ಯೋಜನೆಯಡಿ 65 ಕೋಟಿ ರೂ.ಗಳ ಪ್ರಸ್ತಾವನೆ ಸಲ್ಲಿಸಲಾಗಿದೆ. ತ್ವರಿತವಾಗಿ ಮನೆ ಮನೆಗೆ ಪೈಪ್‌ಲೈನ್‌ ಅಳವಡಿಸಿ ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. – ಜೆ. ಪವನ್‌ಕುಮಾರ್‌, ಸಹಾಯಕ ಕಾರ್ಯಪಾಲಕ ಅಭಿಯಂತರ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ

-ಎಸ್‌. ರಾಜಶೇಖರ

Advertisement

Udayavani is now on Telegram. Click here to join our channel and stay updated with the latest news.

Next