ಬೆಂಗಳೂರು: ಭೀಕರ ಬರಗಾಲ ಮತ್ತು ಬೇಸಗೆ ಹಿನ್ನೆಲೆಯಲ್ಲಿ ಇತ್ತೀಚೆಗೆ ತಾನೇ ಶಾಸಕರ ನೇತೃತ್ವದ ಟಾಸ್ಕ್ಫೋರ್ಸ್‌ಗೆ (ಪ್ರತಿ ವಿಧಾನಸಭಾ ಕ್ಷೇತ್ರ) ತಲಾ 40 ಲಕ್ಷ ರೂ. ಹಾಗೂ ಜಿ.ಪಂ. ಅಧ್ಯಕ್ಷರಿಗೆ ತಲಾ 50 ಲಕ್ಷ ರೂ. ಒದಗಿಸಿರುವ ಸರಕಾರ ಇದೀಗ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಒದಗಿಸಲು 65 ಕೋಟಿ ರೂ. ಬಿಡುಗಡೆ ಮಾಡಿದೆ.
ರಾಜ್ಯ ಹಣಕಾಸು ಆಯೋಗದಿಂದ (ಎಸ್‌ಎಫ್ಸಿ ಅನುದಾನ) ರಾಜ್ಯದ 271 ನಗರ ಸ್ಥಳೀಯ ಸಂಸ್ಥೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ 150 ಕೋಟಿ ರೂ. ನಿಗದಿಪಡಿಸಲಾಗಿದ್ದು, ಈ ಪೈಕಿ ತುರ್ತಾಗಿ 37.50 ಕೋಟಿ ರೂ. ಬಿಡುಗಡೆ ಮಾಡುವಂತೆ ಪೌರಾಡಳಿತ ನಿರ್ದೇಶನಾಲಯ ಮನವಿ ಮಾಡಿತ್ತು. ಆದರೆ, ಪರಿಸ್ಥಿತಿ ಜಟಿಲವಾಗಿರುವ ಹಿನ್ನೆಲೆಯಲ್ಲಿ ಸರಕಾರ 65 ಕೋಟಿ ರೂ. ಬಿಡುಗಡೆ ಮಾಡಿದೆ.
ಈ ಅನುದಾನವನ್ನು ನಗರ ಸ್ಥಳೀಯ ಸಂಸ್ಥೆವಾರು ಹಂಚಿಕೆಯನ್ನೂ ಮಾಡಿರುವ ಪೌರಾಡಳಿತ ಇಲಾಖೆ, ಅನುದಾನ ಬಳಕೆಗೆ ಸಂಬಂಧಿಸಿದಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿದೆ. ಕುಡಿಯುವ ನೀರಿನ ಯೋಜನೆಗಳಿಗೆ ಮಾತ್ರ ಬಳಸಿಕೊಳ್ಳಬೇಕು. ಅಲ್ಲದೆ, ಈ ಕುರಿತ ಬಳಕೆ ಪ್ರಮಾಣಪತ್ರವನ್ನು ಕಾಲ ಕಾಲಕ್ಕೆ ಪೌರಾಡಳಿತ ನಿರ್ದೇಶನಾಲಯದ ಮೂಲಕ ಸರಕಾರಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ.
ನಿಗದಿಪಡಿಸಿರುವ ಅನುದಾನಕ್ಕೆ ನಗರ ಸ್ಥಳೀಯ ಸಂಸ್ಥೆಗಳು ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ಫೋರ್ಸ್ ರಚಿಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ತುರ್ತಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಲಾಗಿದೆ.
ಅಲ್ಲದೆ, ಈ ಅನುದಾನವನ್ನು ಕೊಳವೆಬಾವಿ ಆಳಗೊಳಿಸುವುದು, ಸ್ವತ್ಛಗೊಳಿಸುವುದು, ಹೈಡ್ರೋಫ್ರಾಕ್ಚರಿಂಗ್, ನೀರು ಸರಬರಾಜು ಪೈಪ್‌ಗ್ಳ ದುರಸ್ತಿ ಮತ್ತು ಬದಲಾವಣೆಗೆ ಬಳಸಿಕೊಳ್ಳಬೇಕು. ತೀರಾ ಅಗತ್ಯ ಬಿದ್ದರೆ ಮಾತ್ರ ಹೊಸ ಕೊಳವೆಬಾವಿಗಳನ್ನು ಕೊರೆಯಬೇಕು ಮತ್ತು ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಮಾತ್ರ ಬಳಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಲಾಗಿದೆ.
3 ಕಡೆ ಅನುದಾನವೇ ಇಲ್ಲ
ಕೊಡಗು ಜಿಲ್ಲೆಯ ಸೋಮವಾರಪೇಟೆ, ಬಾಗಲಕೋಟೆ ಜಿಲ್ಲೆಯ ಇಳಕಲ್ ಮತ್ತು ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರ ಸ್ಥಳೀಯ ಸಂಸ್ಥೆಗಳಿಗೆ ಎಸ್‌ಎಫ್ಸಿ ನಿಧಿಯಿಂದ ಈ ಬಾರಿ ಯಾವುದೇ ಅನುದಾನ ಒದಗಿಸಿಲ್ಲ. ಹಾಸನ ಜಿಲ್ಲೆಯ ಅರಸೀಕೆರೆ ಮತ್ತು ದ.ಕ. ಜಿಲ್ಲೆಯ ಬೆಳ್ತಂಗಡಿಗೆ ತಲಾ 1.85 ಲಕ್ಷ ರೂ., ಕೊಪ್ಪಳ ಜಿಲ್ಲೆಯ ಕನಕಗಿರಿಗೆ 2.46 ಲಕ್ಷ ರೂ., ತುಮಕೂರು ಜಿಲ್ಲೆಯ ತುರುವೇಕೆರೆ, ಚಿಕ್ಕಮಗಳೂರಿನ ಕೊಪ್ಪ, ದ.ಕ.ದ ಸುಳ್ಯ, ಉಡುಪಿಯ ಸಾಲಿಗ್ರಾಮ, ಗದಗ ಜಿಲ್ಲೆಯ ಮುಳಗುಂದ, ಕಲಬುರಗಿ ಜಿಲ್ಲೆಯ ವಾಡಿ ನಗರ ಸ್ಥಳೀಯ ಸಂಸ್ಥೆಗಳಿಗೆ ತಲಾ 3.71 ಲಕ್ಷ ರೂ., ತುಮಕೂರು ಜಿಲ್ಲೆಯ ಮಧುಗಿರಿಗೆ 4.08 ಲಕ್ಷ ರೂ. ಹಾಗೂ ಚಾಮರಾಜನಗರ ಜಿಲ್ಲೆಯ ಯಳಂದೂರು ನಗರ ಸ್ಥಳೀಯ ಸಂಸ್ಥೆಗೆ 4.83 ಲಕ್ಷ ರೂ. ಮಾತ್ರ ಬಿಡುಗಡೆ ಮಾಡಲಾಗಿದೆ.