ಬೆಳಗಾವಿ: ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿರುವುದರಿಂದ ಮಹಾರಾಷ್ಟ್ರದಿಂದ ಕೃಷ್ಣಾ ನದಿಯ ಹಿಪ್ಪರಗಿ ಬ್ಯಾರೇಜ್ ಗೆ ಎರಡು ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆಗೆ ಸರಕಾರದ ಮಟ್ಟದಲ್ಲಿ ಅಗತ್ಯ ಕ್ರಮಕೈಗೊಳಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಡಾ.ಬಗಾದಿ ಗೌತಮ್ ಅವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪ್ರಸ್ತುತ ಬೇಸಿಗೆಯಲ್ಲಿ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಕೃಷ್ಣಾ ನದಿತೀರದ ಗ್ರಾಮಗಳಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಮಹಾರಾಷ್ಟ್ರ ರಾಜ್ಯದ ವಾರಣಾ ಇಲ್ಲವೇ ಕೊಯ್ನಾ ಜಲಾಶಯಗಳಿಂದ ಎರಡು ಟಿಎಂಸಿ ಹೆಚ್ಚುವರಿಯಾಗಿ ಕೃಷ್ಣಾ ನದಿ ಮೂಲಕ ಹಿಪ್ಪರಗಿ ಬ್ಯಾರೇಜ್ ಗೆ ಶೀಘ್ರ ಬಿಡುಗಡೆಗೊಳಿಸುವ ಅಗತ್ಯವಿರುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಕುಡಿಯುವ ನೀರು ಬಿಡುಗಡೆಯ ಅಗತ್ಯತೆ ಕುರಿತು ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಅಭಿಯಂತರರು ಹಾಗೂ ಬಾಗಲಕೋಟೆ ಜಿಲ್ಲಾಧಿಕಾರಿ ನೀಡಿರುವ ವರದಿಗಳನ್ನು ತಮ್ಮ ಪತ್ರದಲ್ಲಿ ಪ್ರಸ್ತಾಪಿಸಿರುವ ಪ್ರಾದೇಶಿಕ ಆಯುಕ್ತರು, ಎರಡು ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದಾರೆ.