ಬೆಳಗಾವಿ: ಉಡಪಿ ನಗರಕ್ಕೆ ನದಿ ಮೂಲದಿಂದ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆಯ ಲೋಪಗಳು ಮತ್ತು ಅಡೆತಡೆಗಳನ್ನು ನಿವಾರಿಸಲು ಶೀಘ್ರವೇ ಸ್ಥಳಕ್ಕೆ ಭೇಟಿ ಕೊಡುವುದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಹೇಳಿದರು.
ಮಂಗಳವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಕೆ. ಪ್ರತಾಪ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಉಡುಪಿ ನಗರಕ್ಕೆ ಈಗಾಗಲೇ ಕುಡಿಯುವ ನೀರು ಪೂರೈಸುವ ವಾರಾಹಿ ನದಿ ಮೂಲದ ಯೋಜನೆಗಳು ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನದಿಯಿಂದ 290 ಕೋಟಿ ರೂ.ಗಳ ವೆಚ್ಚದಲ್ಲಿ 39 ಕಿ.ಮೀ.ದೂರದ ನದಿಯಿಂದ ನೀರು ಪಡೆದುಕೊಳ್ಳಲು ಯೋಜಿಸಲಾಗಿದೆ. ಬರೀ ನಗರವಷ್ಟೇ ಅಲ್ಲ ದಾರಿಯಲ್ಲಿನ 23 ಗ್ರಾಮಗಳಿಗೂ ಇದೇ ಯೋಜನೆ ಮೂಲಕ ಕುಡಿಯುವ ನೀರು ಪೂರೈಕೆಯಾಗಲಿದೆ. ಇಲ್ಲಿ ಯಾವುದೇ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆ ಇಲ್ಲ ಎಂದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪ್ರತಾಪಚಂದ್ರ ಶೆಟ್ಟಿ, ರೈತರಿಗಾಗಿ ಮೀಸಲಾಗಿರುವ ನೀರನ್ನು ಕುಡಿಯಲು ಬಳಸಿಕೊಳ್ಳಲಾಗುತ್ತಿದೆ. ಅಲ್ಲದೆ, ಖಾಸಗಿ ಅವರಿಗೆ ವಿದ್ಯುತ್ ಉತ್ಪಾದನೆ ಮಾಡುವ ಖಾಸಗಿ ಘಟಕಗಳಿಗೆ ಇಲ್ಲಿಂದ ನೀರು ಪೂರೈಸಲಾಗುತ್ತಿರುವ ವಿಚಾರವನ್ನು ಅಧಿಕಾರಿಗಳು ಬಚ್ಚಿಟ್ಟಿದ್ದಾರೆ. ಈ ಬಗ್ಗೆ ಸಚಿವರಿಗೆ ಏನೂ ಗೊತ್ತಿಲ್ಲ. ದಯಮಾಡಿ ಇದನ್ನು ಸರಿಯಾಗಿ ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ:ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕೊಟ್ಟಿಲ್ಲ
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್, ಅತಿ ಶೀಘ್ರದಲ್ಲಿಯೇ ಉಡುಪಿ ಜಿಲ್ಲೆಗೆ ಭೇಟಿ ನೀಡಿ ಯೋಜನೆಯ ಕಾಮಗಾರಿಗಳು ನಡೆಯುವ ಸ್ಥಳಕ್ಕೆ ಹೋಗಿ ಮರು ಪರಿಶೀಲನೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.