Advertisement

ಕುಡಿಯುವ ನೀರಿನ ಯೋಜನೆಯೆಂಬ “ಬಿಳಿಯಾನೆ’ : ಪುರಸಭೆಯಿಂದ ಇನ್ನೊಂದು ದುಂದುಗಾರಿಕಾ ಯೋಜನೆ

10:49 PM Mar 16, 2021 | Team Udayavani |

ಕುಂದಾಪುರ: ಕಾಮಗಾರಿ ಪೂರ್ಣವಾಗದೆ ಸ್ಥಗಿತಗೊಂಡ 50 ಕೋ.ರೂ.ಗಳ ಒಳಚರಂಡಿ ಯೋಜನೆ ಒಂದೆಡೆಯಾದರೆ 35 ಕೋ.ರೂ.ಗಳ ನಿರಂತರ ಕುಡಿಯುವ ನೀರಿನ ಯೋಜನೆ ಜಲಸಿರಿ ಕೂಡಾ ಅದೇ ಹಾದಿಯಲ್ಲಿದೆ. ಪುರಸಭೆ ಜನರ ದುಡ್ಡಿನಲ್ಲಿ ಕೋಟಿ ಬಾಳುವ ಬಿಳಿಯಾನೆಗಳನ್ನು ಸಾಕುತ್ತಿದೆ.

Advertisement

35 ಕೋ.ರೂ. ಕಾಮಗಾರಿ ವಿವರ
ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆ, ವಾಣಿಜ್ಯ ಉಪಯೋಗಕ್ಕೆ ದಿನದ 24 ತಾಸು ನೀರು ಒದಗಿಸಲು ಯೋಜನೆಯ ಕಾಮಗಾರಿ ಆಗುತ್ತಿದೆ. 23.1 ಕೋ.ರೂ.ಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ಸಾಲದಿಂದ ಕರ್ನಾಟಕ ಸಮಗ್ರ ನಗರ ನೀರು ನಿರ್ವಹಣೆ ಹೂಡಿಕೆ ಯೋಜನೆ (ಜಲಸಿರಿ) ಮೂಲಕ ಕರ್ನಾಟಕ ನಗರ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ ಕರ್ನಾಟಕ ಸಮಗ್ರ ನೀರು ನಿರ್ವಹಣೆ ಹೂಡಿಕೆಯಲ್ಲಿ ಕಾಮಗಾರಿ ನಡೆಯುತ್ತಿದೆ. ಕೊಲ್ಕತ್ತಾದ ಮೆ| ಜಿ.ಕೆ. ಡಬ್ಲ್ಯು ಕನ್ಸಲ್ಟ್ ಸಂಸ್ಥೆ ತಾಂತ್ರಿಕ ಸಲಹೆ ನೀಡುತ್ತಿದೆ. 2017ರಲ್ಲಿ ಟೆಂಡರ್‌ ಮಂಜೂರಾಗಿದೆ. ಒಟ್ಟು ಅವಧಿ 25 ತಿಂಗಳು. 2020 ಜನವರಿಗೆ ಮುಗಿಯಬೇಕಿತ್ತು. ಅದೆಷ್ಟೇ ಸಬೂಬುಗಳನ್ನು ಹೇಳಿದರೂ ಈ
ಮಾರ್ಚ್‌ಗೆ ಮುಕ್ತಾಯಗೊಳಿಸುವ ಮಾತು ಈಡೇರುವ ಭರವಸೆ ಕಾಣುತ್ತಿಲ್ಲ. ಕಾಮಗಾರಿ ಮುಗಿದ ಅನಂತರ 96 ತಿಂಗಳು ಅಂದರೆ 8 ವರ್ಷ ಅದರ ನಿರ್ವಹಣೆ ಹೊಣೆಯೂ ಕಾಮಗಾರಿ ನಿರ್ವಹಿಸಿದ ಸಂಸ್ಥೆಯದ್ದೇ ಆಗಿರುತ್ತದೆ. ಕಾಮಗಾರಿಗೆ 23.1 ಕೋ.ರೂ. ನೀಡಿದ್ದರೆ ಅದರ ನಿರ್ವಹಣೆಗೆಂದೇ 12.4 ಕೋ. ರೂ. ನೀಡಲಾಗುತ್ತಿದೆ. ಒಟ್ಟು 35.5 ಕೋ.ರೂ. ವೆಚ್ಚದ ಕಾಮಗಾರಿ ಇದಾಗಿದೆ.

ಹಣ ದಂಡದ ಕಾಮಗಾರಿ
23.1 ಕೋ.ರೂ.ಗಳ ಜಲಸಿರಿ ಕುಡಿಯುವ ನೀರಿನ ಯೋಜನೆಯಲ್ಲಿ ಈ ವರೆಗೆ ಕೇವಲ 118 ಜನರಿಗಷ್ಟೇ ಸಂಪರ್ಕ ನೀಡಲಾಗಿದೆ. ಶೇ. 92 ಕೆಲಸ ಮುಗಿದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಪೈಪ್‌ಲೈನ್‌ಗಾಗಿ ಕತ್ತರಿಸಿದ ರಸ್ತೆಯ ದುರಸ್ತಿ ಆಗಿಲ್ಲ, ಡಾಮರು, ಕಾಂಕ್ರೀಟ್‌, ಇಂಟರ್‌ಲಾಕ್‌ ತೆಗೆದಲ್ಲಿ ಮರಳಿ ಹಾಕಿಲ್ಲ, ಮನೆ ಮನೆಗೆ ಸಂಪರ್ಕಕ್ಕೆ ಪೈಪ್‌ಲೈನ್‌ ಹಾಕಿಲ್ಲ, ಅರ್ಜಿ ನೀಡಿದವರಿಗೆ ನಳ್ಳಿ ಸಂಪರ್ಕವೇ ನೀಡಿಲ್ಲ. ಸಂಗಮ್‌ ಬಳಿಯ 5 ಲಕ್ಷ ಲೀ. ಸಾಮರ್ಥ್ಯದ ಟ್ಯಾಂಕ್‌ನಲ್ಲಿ ನೀರು ತುಂಬಿಸಿ ನೋಡಿದಾಗ ಸೋರುತ್ತಿತ್ತು. ಅದು ಕಳಪೆ ಕಾಮಗಾರಿ ಅಲ್ಲ, ಕಾಂಕ್ರೀಟ್‌ ಹಾಕುವಾಗ ಬರುವ ಗಾಳಿಗುಳ್ಳೆಗಳ ಪರಿಣಾಮ. ಅದನ್ನು ಸರಿಪಡಿಸಲಾಗುವುದು ಎನ್ನುತ್ತಾರೆ ಅಧಿಕಾರಿಗಳು.

ನೀರು
ಪುರಸಭೆಗೆ ಜಪ್ತಿಯಿಂದ ಜಂಬೂ ನದಿಯಿಂದ ಶುದ್ಧೀಕರಿಸಿದ ಕುಡಿಯುವ ನೀರು ಪೈಪ್‌ಲೈನ್‌ ಮೂಲಕ ಬರುತ್ತದೆ. ಹಾಗೆ ನೀರು ತರುವಾಗ ಪೈಪ್‌ಲೈನ್‌ ಹಾದು ಹೋಗುವ ಗ್ರಾ.ಪಂ.ಗಳ ಜನರಿಗೂ ನೀರು ವಿತರಿಸಲಾಗುತ್ತಿ¤ದೆ. ಪುರಸಭೆ ವ್ಯಾಪ್ತಿಯ ಜನರಿಗೆ ಈ ನೀರೇ ಸಾಕಾಗುತ್ತದೆ.

ಯೋಚನೆ ಯೋಜನೆಯಾಗಿಲ್ಲ
ಕೋಡಿ ಭಾಗದ ನೂರಾರು ಮನೆಗಳಿಗೆ ಕುಡಿಯಲು ಶುದ್ಧ ನೀರಿಲ್ಲ. ಬಾವಿ ತೆಗೆದರೆ ಉಪ್ಪುನೀರು. ಹಾಗಾಗಿ ಅವರಿಗೂ ಸೇರಿದಂತೆ ವಾಣಿಜ್ಯ ಉದ್ದೇಶಕ್ಕೂ ನೀರು ಬಯಸುವವರಿಗೆ ನಿರಂತರ 24 ತಾಸು ನೀರು ನೀಡಬೇಕೆಂಬ ಯೋಚನೆಯಲ್ಲಿ ಪುರಸಭೆ ಈ ಯೋಜನೆ ತರಿಸಿಕೊಂಡಿತು. ಆದರೆ ಅದು ಯೋಜನೆ ಮೂಲಕ ಈಡೇರಲೇ ಇಲ್ಲ. ಪ್ರಸ್ತುತ ಪುರಸಭೆ ವ್ಯಾಪ್ತಿಯಲ್ಲಿ 3 ಸಾವಿರ ನೀರಿನ ಸಂಪರ್ಕಗಳಿವೆ.

Advertisement

ಇದು ದುಪ್ಪಟ್ಟು ಆಗಬೇಕಿತ್ತು. 3,153 ನೀರಿನ ಹೊಸ ಸಂಪರ್ಕದ ಗುರಿಯಲ್ಲಿ ಸಂಪರ್ಕ ನೀಡಿದ್ದು 118 ಮನೆಗಳಿಗೆ ಮಾತ್ರ. 32 ಕಿ.ಮೀ. ಪೈಪ್‌ಲೈನ್‌ ಪೈಕಿ 30 ಕಿ.ಮೀ. ಆಗಿದೆ. 1.8 ಕಿ.ಮೀ. ಮಾತ್ರ ಬಾಕಿ, 1.5 ಕಿ.ಮೀ. ಹೈಡ್ರಾಲಿಕ್‌ ಪರೀಕ್ಷೆ ಬಾಕಿ ಎನ್ನುತ್ತಾರೆ ಅಧಿಕಾರಿಗಳು. ಆಡಳಿತದ ವತಿಯಿಂದ 10 ಕಿ.ಮೀ. ಹೆಚ್ಚುವರಿ ಪೈಪ್‌ಲೈನ್‌ಗೆ ಬೇಡಿಕೆ ಇರಿಸಲಾಗಿದೆ. ಕೋಡಿ ಭಾಗದಲ್ಲಿ 650 ಮನೆಗಳಿದ್ದು 28 ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಇನ್ನುಳಿದ ಸಂಪರ್ಕಗಳಾಗಬೇಕಿದ್ದು ಕ್ರಮವೇ ಆಗಿಲ್ಲ. ಕುಂದೇಶ್ವರ ಪರಿಸರದಲ್ಲೂ ನೀಡಿಲ್ಲ. ಸಂಬಂಧಪಟ್ಟ ಎಂಜಿನಿಯರ್‌, ಅಧಿಕಾರಿಗಳ ಅಸಡ್ಡೆಯೇ ಇದಕ್ಕೆ ಕಾರಣ ಎನ್ನುವ ಆರೋಪ ಚುನಾಯಿತ ಸದಸ್ಯರದ್ದು.

ಎಚ್ಚರಿಕೆ
ಕುಡಿಯುವ ನೀರಿನ ಕಾಮಗಾರಿ ಕುರಿತು ಅಸಮಾಧಾನ ಇದೆ. ಸಮರ್ಪಕವಾಗಿ ಆಗಿಲ್ಲ. ಮಾ.31ರೊಳಗೆ ಮುಕ್ತಾಯವಾಗುವ ಲಕ್ಷಣ ಇಲ್ಲ. ಮನೆ ಮನೆ ಸಂಪರ್ಕಕ್ಕೆ ಅರ್ಜಿ ನೀಡಿದರೂ ಸಂಪರ್ಕ ನೀಡಿಲ್ಲ. ಆದ್ದರಿಂದ ಎಂಜಿನಿಯರ್‌ ವಿರುದ್ಧ ಮೇಲಧಿಕಾರಿಗೆ ಬರೆಯಲಾಗುವುದು, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಬರೆಯಲಾಗುವುದು ಎಂದು ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಎಚ್ಚರಿಸಿದ್ದಾರೆ.

ಭರವಸೆಯಿದೆ
ಬಾಕಿ ಇಟ್ಟ ಸಂಪರ್ಕವನ್ನು ಕೊಡಲು ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ಮನವಿ ನೀಡಲಾಗಿದೆ. ಮಾರ್ಚ್‌ ಅಂತ್ಯಕ್ಕೆ ಅವಧಿ ಮುಗಿದರೂ ನಿಗದಿತ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
-ವೀಣಾ ಭಾಸ್ಕರ್‌ ಮೆಂಡನ್‌ , ಪುರಸಭೆ ಅಧ್ಯಕ್ಷೆ

– ಲಕ್ಷ್ಮೀ ಮಚ್ಚಿನ

Advertisement

Udayavani is now on Telegram. Click here to join our channel and stay updated with the latest news.

Next