ಸಿರುಗುಪ್ಪ: ಬಗ್ಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಗ್ಗೂರು, ಚಾಣಕನೂರು, ಕರ್ಚಿಗನೂರು, ಶ್ರೀನಗರ ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್‌ಗೆ ಶುದ್ಧ ಕುಡಿಯುವ ನೀರೊದಗಿಸುವ ಉದ್ದೇಶದಿಂದ ಬಹುಗ್ರಾಮ ಕುಡಿಯುವ ನೀರಿನಯೋಜನೆಯಡಿ ಕುಡಿಯುವ ನೀರಿನ ಕೆರೆ ನಿರ್ಮಾಣ ಮಾಡಲಾಗಿದೆ.
ಆದರೆ ಜನರಿಗೆ ಕೆರೆಯಿಂದ ಶುದ್ಧ ಕುಡಿಯುವ ನೀರೊದಗಿಸಲು ಪ್ರತಿವರ್ಷ ಲಕ್ಷಾಂತರ ರೂಗಳನ್ನು ಸರ್ಕಾರ ವೆಚ್ಚಮಾಡುತ್ತಿದೆ. ಕಳೆದ 2 ತಿಂಗಳಹಿಂದೆಯೇ ಈ ಕೆರೆಯಲ್ಲಿ ನೀರು ಖಾಲಿಯಾಗಿದ್ದು, ಇಲ್ಲಿವರೆಗೂ ಕೆರೆಗೆ ನೀರು ತುಂಬಿಸುವಕಾರ್ಯಕ್ಕೆ ಅ ಧಿಕಾರಿಗಳು ಮುಂದಾಗಿಲ್ಲ.ಇದರಿಂದಾಗಿ ನಾಲ್ಕು ಕಿ.ಮೀ. ದೂರವಿರುವರಾರಾವಿ ಗ್ರಾಮದಲ್ಲಿ ಬರುವ ಕೆರೆಯ ನೀರನ್ನು ತಂದು ಕುಡಿಯಬೇಕಾದ ಅನಿವಾರ್ಯ ಪರಿಸ್ಥಿತಿ ಗ್ರಾಮಸ್ಥರದ್ದಾಗಿದೆ.
ತಾಲೂಕಿನ ಬಗ್ಗೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಿರ್ಮಿಸಲಾದ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಿದ್ದು,ಬಗ್ಗೂರು, ಚಾಣಕನೂರು, ಕರ್ಚಿಗನೂರು, ಶ್ರೀನಗರ ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್‌ನ ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರೂ ಅಧಿಕಾರಿಗಳು ಮಾತ್ರ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಕೆರೆಯನ್ನು ತುಂಬಿಸುವುದು ವಾಡಿಕೆಯಾಗಿದೆ. ಆದರೆ ಮಳೆಗಾಲದಲ್ಲಿಯೇ ಈ ಕೆರೆಯು ಖಾಲಿ ಖಾಲಿಯಾಗಿದ್ದು, ಬಗ್ಗೂರು ಗ್ರಾಮಸ್ಥರು ತಮ್ಮ ಗ್ರಾಮದಿಂದ 4 ಕಿಮೀ ದೂರವಿರುವ ರಾರಾವಿ ಗ್ರಾಮದಲ್ಲಿ ಬರುವಕೆರೆ ನೀರನ್ನು ತಂದು ಕುಡಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನುಳಿದ ಗ್ರಾಮಗಳ ಜನರಿಗೆ ಹಗರಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳೇ ಆಸರೆಯಾಗಿವೆ.
ಬಗ್ಗೂರು, ಚಾಣಕನೂರು, ಕರ್ಚಿಗನೂರು, ಶ್ರೀನಗರ ಕ್ಯಾಂಪ್, ವೆಂಕಟೇಶ್ವರ ಕ್ಯಾಂಪ್‌ನ ಜನರಿಗೆ ಶುದ್ಧ ಕುಡಿಯವು ನೀರೊದಗಿಸುವಉದ್ದೇಶದಿಂದ ಕೋಟ್ಯಾಂತರ ರೂ. ವೆಚ್ಚಮಾಡಿ ಕುಡಿಯುವ ನೀರಿನ ಕೆರೆಯನ್ನು ನಿರ್ಮಾಣ ಮಾಡಿದ್ದಾರೆ. ಆದರೆ ಕೆರೆಗೆ ನೀರು ತುಂಬಿಸಲು ಗ್ರಾಪಂ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮತ್ತು ಗ್ರಾಪಂ ಆಡಳಿತ ಮಂಡಳಿಯವರು ನಿರ್ಲಕ್ಷ್ಯವಹಿಸಿದ ಕಾರಣ ಮಳೆಗಾಲದಲ್ಲಿಯೇ ಕೆರೆ ಖಾಲಿಯಾಗಿದೆ.
ಬಗ್ಗೂರು ಬಹುಗ್ರಾಮ ಕುಡಿಯುವ ನೀರಿನ ಕೆರೆ ಖಾಲಿಯಾಗಿದ್ದು. ಶೀಘ್ರವೇ ಕಾಲುವೆಯಿಂದ ನೀರು ಹರಿಸಿ ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. –
ರವೀಂದ್ರನಾಯ್ಕ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ
ಕುಡಿಯುವ ನೀರಿನ ಕೆರೆ ಖಾಲಿಯಾಗಿ 2 ತಿಂಗಳಾಗಿದ್ದರೂ ಕೆರೆಗೆ ನೀರು ತುಂಬಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿಲ್ಲ. ಇದರಿಂದಾಗಿ ನಮ್ಮ ಊರಿನವರು ನೀರಿಗಾಗಿ 8 ಕಿಮೀ ಸವೆಸಿ ರಾರಾವಿ ಗ್ರಾಮದಿಂದ ಕುಡಿಯುವ ನೀರನ್ನು ತರಬೇಕಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.
ವಾ. ಹುಲುಗಯ್ಯ, ಗ್ರಾಮಸ್ಥ
ಜಲ್‌ಜೀವನ್ ಮಿಷನ್ ಯೋಜನೆಯಡಿ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಕೆರೆಗೆ ನೀರು ತುಂಬಿಸುವಂತೆ ತಿಳಿಸಲಾಗಿದೆ. ಕೆರೆಯಲ್ಲಿ ಹೊಸದಾಗಿ ಬಂಡೆಗಳನ್ನು ಅಳವಡಿಸಿದ ನಂತರ ಕೆರೆಗೆ ನೀರು ಹರಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
– ಆದೆಪ್ಪ, ಪಿಡಿಒ
-ಆರ್.ಬಸವರೆಡ್ಡಿ ಕರೂರು