ಪಣಜಿ: ರಾಜ್ಯದಲ್ಲಿ ಮುಂಗಾರು ಘೋಷಣೆಯಾಗಿದ್ದರೂ ಇನ್ನೂ ಚುರುಕುಗೊಂಡಿಲ್ಲ, ಇನ್ನೂ ನಾಲ್ಕು ದಿನಗಳ ಕಾಲ ಮುಂಗಾರು ದುರ್ಬಲತೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏತನ್ಮಧ್ಯೆ, ರಾಜ್ಯದಲ್ಲಿನ ಅಣೆಕಟ್ಟುಗಳು ತಳಕ್ಕೆ ತಲುಪಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಆತಂಕ ಎದುರಾಗಿದೆ. ಅದರಲ್ಲೂ ಅಂಜುನೆ, ಪಂಚವಾಡಿ ಭಾಗದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಲಕ್ಷಣ ಕಂಡುಬರುತ್ತಿದೆ ಎನ್ನಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಬೀಪರ್‍ಜಾಯ್ ಚಂಡಮಾರುತ ಮತ್ತು ಪೆಸಿಫಿಕ್ ಸಾಗರದಲ್ಲಿ ಸಕ್ರಿಯವಾಗಿರುವ ಅಲ್‍ನಿನೊದಿಂದ ಈ ವರ್ಷ ಮುಂಗಾರು ದುರ್ಬಲವಾಗಲಿದೆ ಎಂದು ಹವಾಮಾನ ತಜ್ಞರು ಭವಿಷ್ಯ ನುಡಿದಿದ್ದಾರೆ. ರಾಜ್ಯದ ಪಂಚವಾಡಿ, ಅಂಜುನೆ, ಸಾಳಾವಳಿ ಅಣೆಕಟ್ಟುಗಳು ಸಂಪೂರ್ಣ ಖಾಲಿಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಆತಂಕಕ್ಕೆ ಒಳಗಾಗಿದೆ.
ಅಂಜುಣೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತಗ್ಗಿದ ಪರಿಣಾಮ ಕುಡಿಯುವ ನೀರಿನ ಯೋಜನೆಗಳು ಸ್ಥಗಿತಗೊಂಡಿವೆ. ಮುಂದಿನ ವಾರದಲ್ಲಿ ನೀರಿಗಾಗಿ ಹಾಹಾಕಾರ ಎದುರಾಗುವ ಆತಂಕ ಮನೆಮಾಡಿದೆ. ಪ್ರಸ್ತುತ ವಾಲ್ಪೈ-ಸತ್ತಾರಿ ಭಾಗದ ಹಲವು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸದ್ಯ ರಾಜ್ಯದಲ್ಲಿನ ಅಣೇಕಟ್ಟುಗಳ ನೀರಿನ ಮಟ್ಟ ಇಂತಿದೆ-ಸಾಲಾವಳಿ-ಶೇ21, ಅಂಜುನೆ-ಶೇ 3, ಚಾಪೋಲಿ-ಶೇ 41, ಆಮಠಾಣೆ-ಶೇ 41, ಗಾವಣೆ-ಶೇ36.
ಲೊಕೋಪಯೋಗಿ ಇಲಾಖೆಯ ಮುಖ್ಯ ಎಂಜಿನೀಯರ್ ಪ್ರಮೋದ ಬಾದಾಮಿ ಸುದ್ಧಿಗಾರರೊಂದಿಗೆ ಮಾತನಾಡಿ- ರಾಜ್ಯದಲ್ಲಿ ಕುಡಿಯುವ ನೀರು ಲಭ್ಯವಿದೆ,ಖಂಡೇಪರ್, ಓಪಾ ಮತ್ತು ಮಹದಾಯಿಯಲ್ಲಿ ಸಾಕಷ್ಟು ನೀರಿದೆ. ಆದರೆ, ಅಂಜುಣೆ ಅಣೆಕಟ್ಟೆಯ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಅಂದರೆ ಶೇ.3ರಷ್ಟು ಮಾತ್ರ ಬಾಕಿ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ನೀರಿನ ಯೋಜನೆಗಳನ್ನು ರೂಪಿಸುವುದು ಅನಿವಾರ್ಯವಾಗಿದೆ. ತಿಲಾರಿ, ಸಲಾವಲಿ, ಆಮಠಾಣೆ ಮತ್ತು ಚಾಪೋಲಿ ಅಣೆಕಟ್ಟುಗಳಲ್ಲಿ ಜೂನ್ ತಿಂಗಳ ಅಂತ್ಯದವರೆಗೆ ಸಾಕಷ್ಟು ನೀರಿದೆ. ರಾಜ್ಯದಲ್ಲಿ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆಗೆ ಅಧ್ಯಯನ ಆರಂಭಿಸಲಾಗಿದೆ ಎಂಬ ಮಾಹಿತಿ ನೀಡಿದರು.