Advertisement

ದಕ್ಷಿಣ ಕನ್ನಡ : ಬಹುಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಕ್ಕೆ ಕಾಯುತ್ತಿವೆ 112 ಗ್ರಾಮಗಳು

02:15 AM Apr 25, 2022 | Team Udayavani |

ಮಂಗಳೂರು : ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಬಹುದಾದ ಏಳು ಬಹುಗ್ರಾಮಗಳ ಯೋಜನೆಗಳ ಅನುಷ್ಠಾನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 112 ಗ್ರಾಮಗಳ ಕಾಯುತ್ತಿವೆ. ಅವು ಕಾರ್ಯಗತಗೊಂಡರೆ 5 ತಾಲೂಕುಗಳಿಗೆ ನದಿ ನೀರು ನಳ್ಳಿಗಳಲ್ಲಿ ಹರಿಯಲಿದೆ.

Advertisement

5 ತಾಲೂಕುಗಳ 70 ಗ್ರಾ.ಪಂ.ಗಳನ್ನು ಗುರಿಯಾಗಿಸಿಕೊಂಡು ಏಳು ಬಹುಗ್ರಾಮ ಯೋಜನೆಯಲ್ಲಿ ಒಟ್ಟು 1,348 ಜನವಸತಿ ಪ್ರದೇಶಗಳಿಗೆ ನದಿ ನೀರು ಪೂರೈಕೆಯಾಗಲಿದ್ದು, 4,53,989 ಮಂದಿಗೆ ಪ್ರಯೋಜನವಾಗಲಿದೆ.

ಯೋಜನೆಗಳು
ಮಂಗಳೂರು ಮತ್ತು ಮೂಡುಬಿದಿರೆಯ 21 ಗ್ರಾ.ಪಂ.ಗಳಿಗೆ ಸೇರಿದ 39 ಗ್ರಾಮಗಳ 583 ಜನವಸತಿ ಪ್ರದೇಶಗಳಿಗೆ ನೀರುಣಿಸುವ ಬಹುಗ್ರಾಮ ಯೋಜನೆಯನ್ನು ಅಂದಾಜು 145.48 ಕೋ.ರೂ. ವೆಚ್ಚದಲ್ಲಿ ರೂಪಿಸಲಾಗಿದೆ. ಯೋಜನೆ ಕಾರ್ಯಗತಗೊಂಡರೆ 1,54,000 ಮಂದಿಗೆ ಪ್ರಯೋಜನವಾಗಲಿದೆ. ಗುರುಪುರ ನದಿಯನ್ನು ಗುರಿಯಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ.
ಬಂಟ್ವಾಳ, ಮಂಗಳೂರು ತಾಲೂಕಿನ ಉಳಾçಬೆಟ್ಟು ಸೇರಿದಂತೆ 11 ಗ್ರಾ.ಪಂ.ಗಳಿಗೆ ಸೇರಿದ 15 ಗ್ರಾಮಗಳ 132 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ, 73.10 ಕೋ.ರೂ. ವೆಚ್ಚದಲ್ಲಿ ನೇತ್ರಾವತಿ ನದಿಯನ್ನು ಮೂಲವಾಗಿಸಿಕೊಂಡು ರೂಪಿಸಿರುವ ಬಹುಗ್ರಾಮ ಯೋಜನೆಯಲ್ಲಿ 82,600 ಮಂದಿಗೆ ಪ್ರಯೋಜನವಾಗಲಿದೆ. ಈ ಎರಡೂ ಯೋಜನೆಗಳು ಟೆಂಡರ್‌ ಹಂತದಲ್ಲಿವೆ.

ಬಂಟ್ವಾಳ ತಾಲೂಕಿನ ಅಳಿಕೆ ಮತ್ತು 8 ಗ್ರಾ.ಪಂ.ಗಳ 11 ಗ್ರಾಮಗಳನ್ನು ಒಳಗೊಂಡು 124 ಜನವಸತಿ ಪ್ರದೇಶಗಳಿಗೆ ನೀರುಣಿಸುವ 80 ಕೋ.ರೂ. ವೆಚ್ಚದ ಯೋಜನೆಯಿಂದ 52,752 ಮಂದಿಗೆ ಪ್ರಯೋಜನವಾಗಲಿದೆ. ಬೆಳ್ತಂಗಡಿಯ ಇಳಂತಿಲ ಮತ್ತು 10 ಗ್ರಾ.ಪಂ.ಗಳ 16 ಗ್ರಾಮಗಳ 165 ಜನವಸತಿ ಪ್ರದೇಶಗಳಿಗೆ ನೀರುಣಿಸುವ 95.58 ಕೋ.ರೂ. ವೆಚ್ಚದ ಯೋಜನೆಯಿಂದ 60,900 ಮಂದಿಗೆ ಉಪಯೋಗವಾಗಲಿದೆ.

ಧರ್ಮಸ್ಥಳ ಮತ್ತು 5 ಗ್ರಾ.ಪಂ.ಗಳ 5 ಗ್ರಾಮಗಳನ್ನು ಒಳಗೊಂಡು 63 ಜನವಸತಿ ಯೋಜನೆಗಳಿಗೆ ನೀರು ಒದಗಿಸುವ 51.50 ಕೋ.ರೂ. ವೆಚ್ಚದ ಯೋಜನೆಯಿಂದ 27,400 ಮಂದಿಗೆ ಪ್ರಯೋಜನವಾಗಲಿದೆ. ಈ ಎರಡೂ ಯೋಜನೆಗಳನ್ನು ನೇತ್ರಾವತಿ ನದಿಯನ್ನು ಮೂಲವಾಗಿಸಿಕೊಂಡು ರೂಪಿಸಲಾಗಿದೆ.

Advertisement

ಪುತ್ತೂರು ತಾಲೂಕಿನ ಅಲಂಕಾರು ಮತ್ತು 7 ಗ್ರಾ.ಪಂ.ಗಳ 15 ಗ್ರಾಮಗಳನ್ನು ಒಳಗೊಂಡು 171 ಜನವಸತಿ ಪ್ರದೇಶಗಳಿಗೆ ನೀರುಣಿಸುವ 27 ಕೋ.ರೂ. ವೆಚ್ಚದ ಯೋಜನೆಯಿಂದ 42,600 ಮಂದಿಗೆ ಉಪಯೋಗವಾಗಲಿದೆ. ಕುಮಾರಧಾರಾ ನದಿಯನ್ನು ಮೂಲವಾಗಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡು ಕುಟ್ರಾಪ್ಪಾಡಿ ಮತ್ತು 7 ಗ್ರಾ.ಪಂ.ಗಳ 11 ಗ್ರಾಮಗಳನ್ನು ಒಳಗೊಂಡು 110 ಜನವಸತಿ ಪ್ರದೇಶಗಳಿಗೆ ನೀರು ಒದಗಿಸುವ 32.75 ಕೋ.ರೂ. ವೆಚ್ಚದ ಯೋಜನೆಯಿಂದ 33,600 ಮಂದಿಗೆ ಉಪಯೋಗವಾಗಲಿದೆ. ಗುಂಡ್ಯ ನದಿಯನ್ನು ಮೂಲವಾಗಿಸಿ ಈ ಯೋಜನೆ ರೂಪಿಸಲಾಗಿದೆ.

ಜಿಲ್ಲೆಯಲ್ಲಿ ಮಾಣಿ, ನರಿಕೊಂಬು, ಸರಪಾಡಿ, ಸಂಗಬೆಟ್ಟು, ಕರೋಪಾಡಿ, ಮಳವೂರು ಮತ್ತು ಕಿನ್ನಿಗೋಳಿ ಬಹುಗ್ರಾಮ ಯೋಜನೆಗಳು ಪೂರ್ಣಗೊಂಡು ಕಾರ್ಯಾರಂಭ ಮಾಡಿವೆ.

ದ.ಕ. ಜಿಲ್ಲೆಯ 7 ಬಹುಗ್ರಾಮಗಳ ಯೋಜನೆಗಳಲ್ಲಿ ಎರಡು ಯೋಜನೆಗಳಿಗೆ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ. ಉಳಿದ 5 ಯೋಜನೆಗಳಿಗೆ ಪಿಎಸ್‌ಆರ್‌ ಸಿದ್ಧಪಡಿಸಲಾಗುತ್ತಿದ್ದು, 15 ದಿನಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತರಿಗೆ ಸಲ್ಲಿಸಲಾಗುವುದು.
– ಜಿ. ನರೇಂದ್ರ ಬಾಬು, ಕಾ.ನಿ. ಎಂಜಿನಿಯರ್‌,
ದ.ಕ. ಜಿ.ಪಂ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

– ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next