Advertisement
ಸಜೀಪ ಮುನ್ನೂರಿನ ಆಲಾಡಿಯ ನೇತ್ರಾವತಿ ನದಿಯಿಂದ ಆಧುನಿಕ ತಂತ್ರಜ್ಞಾನದ ಗೇಟ್ ಸಿಸ್ಟಮ್‌ನ ಜಾಕ್‌ವೆಲ್‌ನಿಂದ ನೀರನ್ನು ಪೈಪ್‌ಲೈನ್‌ಗಳ ಮೂಲಕ ಉಳ್ಳಾಲ ಸಹಿತ ಮಂಗಳೂರು ವಿಧಾನಸಭೆ ಕ್ಷೇತ್ರದ ಗ್ರಾಮಗಳಿಗೆ ನಿರಂತರ ಕುಡಿಯುವ ನೀರು ಒದಗಿಸಲು ರಸ್ತೆ ಬದಿಗಳಲ್ಲಿ ಅಗೆದು ಪೈಪ್‌ಲೈನ್ ಜೋಡಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಸಜಿಪ, ಚೇಳೂರು, ಬೋಳಿಯಾರ್, ಮುಡಿಪು ಕಂಬಳಪದವು, ಅಸೈಗೋಳಿ, ನಾಟೆಕಲ್, ದೇರಳಕಟ್ಟೆ ಮಾರ್ಗವಾಗಿ ಉಳ್ಳಾಲ ನಗರಸಭೆ ವ್ಯಾಪ್ತಿಯ ಪಂಡಿತ್‌ಹೌಸ್‌ವರೆಗೆ ಕಾಮಗಾರಿ ನಡೆಯುತ್ತಿದೆ. ಒಂದು ವರ್ಷದಿಂದ ನಡೆಯುತ್ತಿರುವ ಕಾಮಗಾರಿ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶ ಸಂಪರ್ಕಿಸುವ ಅನೇಕ ರಸ್ತೆಗಳ ಕಾಮಗಾರಿಗಳು ಅಪೂರ್ಣವಾಗಿ ಉಳಿದಿವೆ.
ಇನ್ಫೋಸಿಸ್ ಫೌಂಡೇಶನ್‌ನಿಂದ ಸುಮಾರು 30 ಕೋಟಿ ರೂ.ಗಳಿಗೂ ಅಧಿಕ ವೆಚ್ಚದಲ್ಲಿ ಜಿಲ್ಲೆಯಲ್ಲೇ ಮಾದರಿ ರಸ್ತೆಯಾಗಿ ಕಂಬಳಪದವಿನಿಂದ ಮುಡಿಪು ಜಂಕ್ಷನ್, ಮುಡಿಪು ಬೆಟ್ಟದವರೆಗೆ ರಸ್ತೆ ಅಭಿವೃದ್ಧಿ ನಡೆದಿದ್ದು, ಈ ನಡುವೆ ಬೋಳಿಯಾರ್, ಕುರ್ನಾಡು, ಕಾಯರ್ ಗೋಳಿ ಮಾರ್ಗವಾಗಿ ಕಂಬಳಪದವು ಸಂಪರ್ಕಿಸುವ ರಸ್ತೆ ಬದಿಯಲ್ಲಿ ಪೈಪ್‌ಲೈನ್ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಕಾಯರ್ ಗೋಳಿ ಬಳಿ ರಸ್ತೆಯ ಬಲ ಬದಿಯಲ್ಲಿ ಕಾಮಗಾರಿ ನಡೆಯುತ್ತಿದ್ದರೆ, ಇನ್ಫೋಸಿಸ್ ಬಳಿ ಕಾಮಗಾರಿಯನ್ನು ಎಡಬದಿಗೆ ತಿರುಗಿಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದ್ದು, ಇದರಿಂದ ಕೋಟ್ಯಾಂತರ ರೂ. ಖರ್ಚು ಮಾಡಿ ನಿರ್ಮಿಸಿರುವ ರಸ್ತೆ, ಫುಟ್‌ಪಾತ್‌ಗಳಿಗೆ ಹಾನಿಯಾಗುವ ಸಾಧ್ಯತೆ ಇದೆ. ಮಾರ್ಗಸೂಚಿ ಬದಲು
ನೂತನವಾಗಿ ನಿರ್ಮಾಣಗೊಂಡ ದ್ವಿಪಥ ರಸ್ತೆಯ ಬಲಭಾಗದಲ್ಲಿ ಲೋಕೋಪಯೋಗಿ ಇಲಾಖೆಯ ಖಾಲಿ ಜಾಗವಿದ್ದು, ಪೈಪ್‌ಲೈನ್ ಕಾಮ ಗಾರಿಗೆ ಮೊದಲು ಈ ಪ್ರದೇಶವನ್ನೇ ಗುರುತಿಸಲಾಗಿತ್ತು ಎನ್ನಲಾಗುತ್ತಿದೆ. ಆದರೆ ಏಕಾಏಕಿ ಮಾರ್ಗಸೂಚಿ ಬದಲಾಗಿದ್ದು, ಇನ್ಫೋಸಿಸ್ ಸಂಸ್ಥೆಯ ಕಾಂಪೌಂಡ್ ವಾಲ್ ಇರುವ ಎಡಬದಿಯಲ್ಲೇ ಕಾಮಗಾರಿ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿರುವ ಬಗ್ಗೆ ಆರೋಪ ಕೇಳಿಬಂದಿದೆ. ಬಲಬದಿಯಲ್ಲಿ ಲೋಕೋಪಯೋಗಿ ಇಲಾಖೆಯ ಸ್ಥಳದಲ್ಲಿ ಕಾಮಗಾರಿ ನಡೆದರೆ ರಸ್ತೆಗೆ ಯಾವುದೇ ತೊಂದರೆಯಾಗದು, ಅಲ್ಲದೆ ರಸ್ತೆ¤ ಬದಿಯಲ್ಲಿರುವ ಗಿಡ ಮರಗಳನ್ನು ಉಳಿಸಲು ಸಾಧ್ಯವಿದೆ.
Related Articles
ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಕಂಬಳಪದವಿನಿಂದ ಮುಡಿಪು ವರೆಗೆ ಸುಂದರವಾಗಿ, ಮಾದರಿ ರಸ್ತೆ ನಿರ್ಮಾಣ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಕಾಮಗಾರಿ ಸಂದರ್ಭ ಇಂತಹ ಸುಂದರವಾದ ರಸ್ತೆಯನ್ನು ಹಾಳುಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಮತ್ತು ಸಂಸದರ ಗಮನಕ್ಕೂ ಬಂದಿದ್ದು, ನನ್ನ ಗಮನಕ್ಕೂ ಈ ವಿಚಾರ ಬಂದಿದೆ. ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ.
-ಯು.ಟಿ.ಖಾದರ್, ಶಾಸಕರು, ಮಂಗಳೂರು ವಿಧಾನಸಭೆ ಕ್ಷೇತ್ರ
Advertisement