Advertisement

ಮದ್ದೂರು ತಾಲೂಕಲ್ಲಿ ಕುಡಿವ ನೀರಿಗೆ ಹಾಹಾಕಾರ

11:25 AM Feb 28, 2019 | Team Udayavani |

ಮದ್ದೂರು: ತಾಲೂಕಾದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು ಜನ ಜಾನುವಾರುಗಳಿಗೆ ನೀರಿಲ್ಲದೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸ್ಥಳೀಯ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.

Advertisement

ಆತಗೂರು, ಕೊಪ್ಪ, ಬೆ‌ಸಗರಹಳ್ಳಿ ಹೋಬಳಿ ಕೇಂದ್ರಗಳೂ ಸೇರಿದಂತೆ ಸೋಮನಹಳ್ಳಿ ಜಿಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಗ್ರಾಮಸ್ಥರು ಖಾಸಗಿ ಕೊಳವೆ ಬಾವಿಗಳ ಮಾಲೀಕರ ಮೊರೆಹೋಗಿ ಕಿ.ಮೀ.ನಷ್ಟು ಕಾಲ್ನಡಿಗೆಯಲ್ಲಿ ಮಕ್ಕಳು, ವೃದ್ಧರು, ಮಹಿಳೆಯರು ಹಗಲು, ರಾತ್ರಿ ಎನ್ನದೆ ವಿದ್ಯುತ್‌ ಇರುವ ವೇಳೆ ನೀರು ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. 

ಅಧಿಕಾರ ದಾಹ: ಗ್ರಾಪಂ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಯಾವುದೇ ಕ್ರಮಕ್ಕೆ ಮುಂದಾಗದೆ ಕೇವಲ ತಮ್ಮ ಅಧಿಕಾರ ಉಳಿಸಿಕೊಳ್ಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಕೇವಲ ಸಭೆ ಸಮಾರಂಭಗಳಲ್ಲಿ ಮಾತ್ರ ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಸೂಚನೆ, ಎಚ್ಚರಿಕೆ, ಆದೇಶ ನೀಡುತ್ತಾ ಸಭೆಯಿಂದ ಹೊರಬಂದ ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಕಿಂಚಿತ್ತು ಬೆಲೆ ಕೊಡದೆ ನಿರ್ಲಕ್ಷಿಸಿದ್ದಾರೆ.

ಅಂತರ್ಜಲ ಮಟ್ಟ ಕುಸಿತ: ತಾಲೂಕಿನ 42 ಗ್ರಾಪಂಗಳ ಪೈಕಿ ಹಲವಾರು ಗ್ರಾಮಗಳಲ್ಲಿ ಅಂತರ್ಜಲಮಟ್ಟ ಕುಸಿದಿದೆ. ಒಂದು ಸಾವಿರ ಅಡಿಗೂ ಹೆಚ್ಚು ತಳಮಟ್ಟಕ್ಕೆ ಕುಸಿದಿರುವ ಜತೆಗೆ ಕುಡಿಯುವ ನೀರಿಗಾಗಿ ಕೊರೆಸಿದ್ದ ಕೊಳವೆ ಬಾವಿಗಳು ಅಂತರ್ಜಲ ಕುಸಿತದಿಂದಾಗಿ ಬರಿದಾಗಿವೆ. ಆತಗೂರು ಹೋಬಳಿ ವ್ಯಾಪ್ತಿಯ ಮಲ್ಲನಕುಪ್ಪೆ, ಕೆಸ್ತೂರು, ಆತಗೂರು, ಕದಲೂರು, ನಿಡಘಟ್ಟ, ಕೊಪ್ಪ ಹೋಬಳಿಯ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ನೀರಿಗೆ ಆಹಾಕಾರ ಉಂಟಾಗಿರುವ ಪರಿಸ್ಥಿತಿ ಎಲ್ಲೆಡೆ ಕಂಡು ಬರುತ್ತಿದೆ. ಮುಂಗಾರು ಆರಂಭವಾಗುವವರೆಗೂ ಬದುಕುವುದಾದರೂ ಹೇಗೆಂಬುದು ಗ್ರಾಮೀಣರಿಗೆ ಚಿಂತೆಯಾಗಿದೆ. ವಿದ್ಯುತ್‌ ಕ್ಷಾಮ ಮತ್ತು ನೀರಿನ ಕೊರತೆ ನೀಗಿಸಿಕೊಳ್ಳಲು ಅಸಾಧ್ಯವಾಗಿದೆ.

ನಾಲೆ, ಕೆರೆಗಳಿಗೆ ನೀರು ತುಂಬಿಸಿ: ಅನಿಯಮಿತ ವಿದ್ಯುತ್‌ ಸರಬರಾಜು, ಅಂತರ್ಜಲ ಕುಸಿತ ಜತೆಗೆ ಸೂಕ್ತ ನಿರ್ವಹಣೆ ಇಲ್ಲದ ಕಾರಣ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ತತ್ತರಿಸುತ್ತಿರುವ ಸ್ಥಿತಿ ಎದುರಾಗಿದೆ. ಆರಂಭಕ್ಕೂ ಮುನ್ನ ಉಂಟಾದ ಬೇಸಿಗೆ, ಮಳೆ ಕೊರತೆ, ಶಿಂಷಾ ನದಿ ಹಾಗೂ ವೀಸಿ ನಾಲಾ ವ್ಯಾಪ್ತಿಯ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಇಚ್ಚಾಶಕ್ತಿ ಪ್ರದರ್ಶಿಸದೆ ಚುನಾಯಿತ ಪ್ರತಿನಿಧಿಗಳು ಕಂಡು ಕಾಣದಂತೆ ಮೌನಕ್ಕೆ ಶರಣಾಗಿದ್ದಾರೆ. 

Advertisement

ಮಲ್ಲನಕುಪ್ಪೆ, ಕೆಸ್ತೂರು, ಆತಗೂರು, ಕದಲೂರು ಗ್ರಾಪಂಗೆ ಸೇರಿದ ಕೆಲ ಗ್ರಾಮಗಳಿಗೆ ಈಗಾಗಲೇ ಅಧಿಕಾರಿಗಳು ಖಾಸಗಿ ಬೋರ್‌ವೆಲ್‌ ಹಾಗೂ ಟ್ಯಾಂಕರ್‌ಗಳ ಮೂಲಕ ಜನ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಮುಂದಾಗಿದ್ದು ಎರಡು ಮೂರು ದಿನಗಳಿಗೊಮ್ಮೆ ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡಲು ಸ್ಥಳೀಯ ಗ್ರಾಪಂ ಆಡಳಿತ ಮುಂದಾಗಿದೆ. ತಾಲೂಕಿನ ಕೆಲ ಗ್ರಾಮಗಳಲ್ಲಿ ಸ್ಥಳೀಯರು ಗ್ರಾಮ ತೊರೆದು ಪಟ್ಟಣದತ್ತ ಗುಳೆ ಹೊರಟಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಆಡಳಿತ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ತಲುಪಿಸಲು ಅಗತ್ಯ ಕ್ರಮ ವಹಿಸಬೇಕಾಗಿದೆ.

ಮದ್ದೂರು ಪಟ್ಟಣದ ಕೆಲ ಬಡಾವಣೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ವಾರ್ಡ್‌ ನಂ.2ರಲ್ಲಿ 8 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದಾಗಿ ಸ್ಥಳೀಯರಿಗೆ ತೊಂದರೆ ಉಂಟಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮರ್ಪಕ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ವಹಿಸಬೇಕಾಗಿದೆ.
ಅಭಿಷೇಕ್‌, ಎಚ್‌.ಕೆ.ನಗರ ನಿವಾಸಿ

ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿರುವುದು ತಮ್ಮ ಗಮನಕ್ಕೆ ಬಂದಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಮುಂಜಾಗ್ರತಾ ಕ್ರಮ ವಹಿಸಲಾಗುವುದು. ಜತೆಗೆ ಅವಶ್ಯವಿರುವೆಡೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲು ಮುಂದಾಗುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಜಯಲಕ್ಷ್ಮಮ್ಮ, ತಾಪಂ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next