ಹನೂರು: ಕುಟುಂಬದಲ್ಲಿ ಮಹಿಳೆ ಆರೋಗ್ಯವಾಗಿದ್ದರೆ ಕುಟುಂಬವೇ ಆರೋಗ್ಯವಾಗಿರುತ್ತದೆ ಎಂದು ಗ್ರಾಮೀಣ ಕೂಟದ ಹಣಕಾಸು ನಿರ್ವಹಣಾ ಸಂಸ್ಥೆಯ ಅಂಗ ಸಂಸ್ಥೆಯಾದ ದಿಶಾ ಸಂಸ್ಥೆ ಹಿರಿಯ ಯೋಜನಾ ಸಂಯೋಜನಾಧಿಕಾರಿ ರೋಹನ್ ಮಲ್ಲಿಕ್ ತಿಳಿಸಿದರು.
ಹನೂರಿನ ಬೆಟ್ಟಳ್ಳಿ ಮಾರಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ನೀರು, ನೈರ್ಮಲ್ಯ, ಸ್ವಚ್ಛತೆ ಕುರಿತು ಗ್ರಾಮೀಣ ಕೂಟದ ಸಂಘದ ಸದಸ್ಯರ ಕಾರ್ಯಾಗಾರವನ್ನು ಉದ್ಘಾಟಿಸಿದ ಅವರು ಮಾತನಾಡಿ, ಪ್ರತಿ ಕುಟುಂಬದ ಆದಾಯ ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆಗೆ ಹೆಚ್ಚು ವ್ಯಯವಾಗುತ್ತಿದೆ. ಕುಡಿಯುವ ನೀರು, ನೈರ್ಮಲ್ಯ, ಸ್ವಚ್ಛತೆಗೆ ಆದ್ಯತೆ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು.
ಮೂರು ರಾಜ್ಯದಲ್ಲಿ ಕಾರ್ಯನಿರ್ವಹಣೆ: ಗ್ರಾಮೀಣ ಕೂಟ ಸಂಸ್ಥೆಯು ಕರ್ನಾಟಕ, ಮಧ್ಯಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. 8.55 ಲಕ್ಷ ಶೌಚಾಲಯ ಮತ್ತು 2.72 ಲಕ್ಷಜನರಿಗೆ ಕುಡಿಯವ ನೀರಿನ ಸೌಲಭ್ಯ ಒದಗಿಸಿದೆ. ಗ್ರಾಮೀಣ ಕೂಟದ ಸದಸ್ಯರು ಶೌಚಾಲಯಗಳ ಸರ್ವೆ ನಡೆಸಿದಾಗ ಶೇ.90ರಷ್ಟು ಜನರು ಶೌಚಾಲಯ ಹೊಂದಿದ್ದಾರೆ. ಇವರಲ್ಲಿ ಶೇ.70ರಷ್ಟು ಪುರುಷರು ಶೌಚಾಲಯ ಬಳಸುತ್ತಿದ್ದಾರೆ.
ಇನ್ನು ಶೇ.10ರಷ್ಟು ಜನರು ಶೌಚಾಲಯ ಇದ್ದರೂ ಬಳಸುತ್ತಿಲ್ಲ ಎಂದು ಹೇಳಿದರು. ಸಾಂಕ್ರಾಮಿಕ ಮಾರಣಾಂತಕ ಕಾಯಿಲೆಗಳು ಅಶುದ್ಧ ನೀರು, ಅನೈರ್ಮಲ್ಯ ಮತ್ತು ಬಯಲು ಶೌಚದಿಂದ ಬರುತ್ತವೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಇಲ್ಲವಾದರೆ ನಿಮ್ಮ ಜೀವಮಾನದ ದುಡಿಮೆ ಹಣ ಆಸ್ಪತ್ರೆಗೆ ಕಟ್ಟಬೇಕಾಗುತ್ತದೆ ಎಂದು ಹೇಳಿದರು.
ಶೌಚಾಲಯ ನಿರ್ಮಾಣಕ್ಕೆ ಅನುದಾನ: ಲೊಕ್ಕನಹಳ್ಳಿ ಪಿಡಿಒ ಸುರೇಶ್ ಮಾತನಾಡಿ, ಶೌಚಾಲಯ ನಿರ್ಮಾಣ ಮಾಡಿಕೊಳ್ಳಲು 15 ಸಾವಿರ ಅನುದಾನ ಗ್ರಾಮ ಪಂಚಾಯ್ತಿಯಿಂದ ನೀಡಲಾಗುವುದು. ಸ್ವಾಭಿಮಾನ, ಮರ್ಯಾದೆಗಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕಾಗಿದೆ. ಬಯಲು ಮಲ ಮಾಡುವುದು ನಿಮ್ಮ ಗುಂಡಿ ನೀವೆ ತೊಡಿಕೊಂಡಂತೆ, ಹಲವು ಕಾಯಿಲೆಗಳು ಬರಲು ನೀವೇ ಕಾರಣಕರ್ತರಾಗುತ್ತೀರಿ.
ನಿಮಗೆ ಕಾಯಿಲೆಗಳು ಬರುವುದಲ್ಲದೇ ಬೇರೆಯವರಿಗೂ ಕಾಯಿಲೆ ಬರುವಂತೆ ಮಾಡುತ್ತೀರಿ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಗ್ರಾಮೀಣ ಕೂಟ ಸಂಘದ ಸದಸ್ಯರಿಗೆ 300 ಉಚಿತ ಸಸಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎಎಸ್‌ಐ ರಾಜಶೇಖರ್, ಗ್ರಾಮೀಣ ಕೂಟದ ಪ್ರಾಂತೀಯ ವ್ಯವಸ್ಥಾಪಕ ಮುತ್ತುರಾಜ್, ಸಿಬ್ಬಂದಿ ಸಂತೋಷ್, ಜಗದೀಶ್, ಹರೀಶ್, ಶಶಿಧರ್ ಹಾಗೂ ಸಂಘದ ಸದಸ್ಯರು ಹಾಜರಿದ್ದರು.