Advertisement
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರು ಪೂರೈಕೆ ಸಂಪರ್ಕ ಸುಲಭವಾಗಿ ಪಡೆ ಯಲು ಅನುಕೂಲವಾಗುವಂತೆ ನಿಯಮಾವಳಿ ಸರಳಗೊಳಿಸಲು ಪೌರಾಡಳಿತ ಇಲಾಖೆ ತೀರ್ಮಾನಿಸಿದೆ. ಈ ಕುರಿತ ಪ್ರಸ್ತಾವನೆಯನ್ನು ಇಲಾಖೆ ಸಿದ್ಧಪಡಿಸಿದ್ದು, ಸದ್ಯದಲ್ಲೇ ಸಂಪುಟದ ಅನುಮತಿ ಪಡೆಯಲು ಮುಂದಾಗಿದೆ.ಕುಡಿಯುವ ನೀರು ಪೂರೈಕೆ ಸಂಪರ್ಕ ಪಡೆಯಲು ಹಲವು ನಿಬಂಧನೆಗಳಿದ್ದು, ನಾನಾ ದಾಖಲೆ ಒದಗಿಸಲು ನಗರ ಸ್ಥಳೀಯ ಸಂಸ್ಥೆಗಳು ಕಡ್ಡಾಯ ಮಾಡಿವೆ. ಆದರೆ, ದಾಖಲೆ ಒದಗಿಸಲು ಮನೆ ಮಾಲಕರು, ಬಾಡಿಗೆದಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿಯಮಾವಳಿ ಸರಳ ಗೊಳಿಸಲು ಪ್ರಸ್ತಾವನೆ ಸಿದ್ಧಪಡಿಸಲಾಗಿದೆ ಎಂದು ಪೌರಾಡಳಿತ ಇಲಾಖೆ ಮೂಲಗಳು ತಿಳಿಸಿವೆ.
ರಾಜ್ಯದ ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸಲು ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಹಲವು ಯೋಜನೆ ರೂಪಿಸಿದ್ದರೂ, ನೀರಿನ ಸಂಪರ್ಕ ಪಡೆಯಲು ಷರತ್ತು ವಿಧಿಸಿರುವುದರಿಂದ ಲಕ್ಷಾಂತರ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಹೀಗಾಗಿ, ನಿಗದಿತ ಶುಲ್ಕ ಪಡೆದು ಸ್ವಯಂ ಘೋಷಣೆಯ ಪ್ರಮಾಣ ಪತ್ರ ಹಾಗೂ ಆಧಾರ್ ಸಂಖ್ಯೆ ಪಡೆದು ಸಂಪರ್ಕ ಕಲ್ಪಿಸಿದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಶ್ಚಿತ ಆದಾಯವೂ ಬರಲಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಮುಂದಿನ ಮಾರ್ಚ್ ವೇಳೆಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದ್ದು, ಅದಕ್ಕೆ ಪೂರಕವಾಗಿ ಸಂಪರ್ಕ ಪಡೆಯಲು ಇರುವ ಅಡೆ ತಡೆ ನಿವಾರಿಸ ಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Related Articles
Advertisement
9 ಸಾವಿರ ಕೋಟಿ ರೂ. ಕ್ರಿಯಾ ಯೋಜನೆನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು ಮತ್ತು ಸ್ವತ್ಛತೆ ಕಾಪಾಡಲು 9 ಸಾವಿರ ಕೋಟಿ ರೂ. ಬೃಹತ್ ಮೊತ್ತದ ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗಿದೆ. ಜಲಾಗಾರ, ನೀರಿನ ಟ್ಯಾಂಕ್ ನಿರ್ಮಾಣವೂ ಇದರಲ್ಲಿ ಒಳಗೊಂಡಿದೆ. ಇದನ್ನು ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅಮೃತ್-2 ಅಡಿ ಒಪ್ಪಿಗೆ ನೀಡಲು ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮನೆ ಮಾಲಕರು, ಬಾಡಿಗೆದಾರರು, ಕೃಷಿ ಜಮೀನುಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸ ಮಾಡುತ್ತಿರುವವರು ಕುಡಿಯುವ ನೀರು ಸಂಪರ್ಕ ಪಡೆಯಲು ಹಲವು ದಾಖಲೆ ಸಲ್ಲಿಸಬೇಕಾಗಿದೆ. ಹೀಗಾಗಿ ನಿಯಮಾವಳಿಗೆ ತಿದ್ದುಪಡಿ ತಂದು ಸ್ವಯಂ ಘೋಷಿತ ಪ್ರಮಾಣ ಪತ್ರ, ಆಧಾರ್ ಸಂಖ್ಯೆ ಪಡೆದು ಸುಲಭವಾಗಿ ಅನುಮತಿ ನೀಡಲು ನಿಯಮಾವಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿದೆ.
-ಎಂ.ಟಿ.ಬಿ.ನಾಗರಾಜ್, ಪೌರಾಡಳಿತ ಸಚಿವ -ಎಸ್.ಲಕ್ಷ್ಮೀನಾರಾಯಣ