Advertisement
ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ಇಲ್ಲದೆ ಇರುವು ದರಿಂದ ಮಳೆ ನೀರು ಸಂಪೂರ್ಣವಾಗಿ ರಸ್ತೆಯಲ್ಲಿಯೇ ಹರಿಯುವಂತಾಗಿದೆ.2008ನೇ ಸಾಲಿನಲ್ಲಿ ಸುಮಾರು 100 ಮೀಟರ್‌ನಷ್ಟು ಭಾಗಕ್ಕೆ ಅಜೆಕಾರಿನಲ್ಲಿ ಚರಂಡಿ ನಿರ್ಮಾಣ ಮಾಡಲಾಗಿದ್ದು ಇದು ಪೇಟೆ ಮಧ್ಯ ಭಾಗದಲ್ಲಿದೆ. ಚರಂಡಿಯ ಎರಡು ಕಡೆ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ಇರುವುದರಿಂದ ಈ ಚರಂಡಿಯಲ್ಲಿ ಮಳೆಗಾಲದಲ್ಲಿ ನೀರು ಶೇಖರಣೆಗೊಂಡು ಅನಂತರ ರಸ್ತೆ ಮುಖಾಂತರ ಹರಿಯುತ್ತದೆ. ಅಲ್ಲದೆ ಇದರಲ್ಲಿ ನೀರು ಶೇಖರಣೆಗೊಳ್ಳುವ ಜತೆಗೆ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳು ಇದರಲ್ಲಿ ಸೇರಿಕೊಂಡು ಪರಿಸರ ದುರ್ನಾತ ಬೀರುತ್ತವೆ. ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗುತ್ತಿದೆ.
ಅಜೆಕಾರು ಮಾರುಕಟ್ಟೆ ರಸ್ತೆ ಅಭಿವೃದ್ಧಿ ಸಂದರ್ಭ ಈ ಭಾಗದಲ್ಲಿದ ಮೋರಿಯನ್ನು ಮುಚ್ಚಲಾಗಿದ್ದು ನೀರು ಹರಿಯದಂತಾಗಿದೆ. ಈ ಮೋರಿ ಮೂಲಕವೇ ಅಜೆಕಾರು ಪೇಟೆಯ ನೀರು ಸರಾಗವಾಗಿ ಹರಿಯುತ್ತಿತ್ತು. ಮೋರಿ ಇಲ್ಲದೆ ಇರುವುದರಿಂದ ಸಮಸ್ಯೆಗೆ ಕಾರಣವಾಗಿದೆ. ಕಸದ ರಾಶಿ
ಈಗ ಇರುವ ಚರಂಡಿಯಲ್ಲಿ ಪ್ಲಾಸ್ಟಿಕ್ ಸಹಿತ ತ್ಯಾಜ್ಯಗಳ ರಾಶಿ ಇದ್ದು ಮಳೆ ಬರುವ ಸಂದರ್ಭ ಇದು ರಸ್ತೆಯ ಮೇಲೆಯೇ ಬಂದು ಬೀಳುತ್ತದೆ. ಪರಿಸರವಿಡೀ ತ್ಯಾಜ್ಯದಿಂದ ಆವೃತವಾಗುತ್ತದೆ. ಬೆಳೆಯುತ್ತಿರುವ ಅಜೆಕಾರು ಪೇಟೆ ತ್ಯಾಜ್ಯಮಯವಾಗುವುದು ಸ್ಥಳೀಯರಿಗೆ ಸಂಕಷ್ಟ ತಂದೊಡ್ಡಿದೆ.
Related Articles
Advertisement
ಆಗಬೇಕಿದೆ ಸಮಗ್ರ ಅಭಿವೃದ್ಧಿಅಜೆಕಾರು ಪೇಟೆಯಿಂದ ಪಂಚಾಯತ್ ಕಟ್ಟಡದವರೆಗೆ, ಪೇಟೆಯಿಂದ ಚರ್ಚ್ ದ್ವಾರದ ವರೆಗೆ ಹಾಗೂ ಪೇಟೆಯಿಂದ ನೂಜಿವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ, ಅಗತ್ಯ ಇರುವಲ್ಲಿ ಮೋರಿ ನಿರ್ಮಾಣದ ಕಾರ್ಯ ನಡೆದರೆ ಮಾತ್ರ ಅಜೆಕಾರಿನ ಪೇಟೆಯ ಸಮಗ್ರ ಅಭಿವೃದ್ಧಿ ಆಗಲು ಸಾಧ್ಯ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿದ್ದರೆ ಕೆಲವೇ ವರ್ಷಗಳಲ್ಲಿ ಬೃಹತ್ ವಾಣಿಜ್ಯ ಮಳಿಗೆ, ವಸತಿ ನಿವೇಶನಗಳ ತ್ಯಾಜ್ಯ ಎಲ್ಲೆಂದರಲ್ಲಿ ಹರಿದು ಪರಿಸರ ದುರ್ನಾತ ಬೀರುವ ಜತೆಗೆ ಪೇಟೆ ಸಮೀಪದಲ್ಲಿರುವ ತೆರೆದ ಬಾವಿಗಳ ನೀರು ಮಲಿನ ಆಗುವ ಭಯ ಸ್ಥಳೀಯರನ್ನು ಕಾಡುತ್ತಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಜೆಕಾರು ಪೇಟೆಯ ಅಭಿವೃದ್ಧಿಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಚರಂಡಿಯಲ್ಲೇ ನೀರಿನ ಪೈಪ್
ಪೇಟೆಯಲ್ಲಿರುವ ಅಸಮರ್ಪಕ ಚರಂಡಿ ಯಲ್ಲಿಯೇ ಗ್ರಾಮ ಪಂಚಾಯತ್‌ನ ಕುಡಿಯುವ ನೀರು ಸರಬರಾಜಿನ ಪೈಪ್ ಲೈನ್ ಇದ್ದು ಚರಂಡಿಯಲ್ಲಿ ತುಂಬಿರುವ ಹೂಳನ್ನು ಸಮರ್ಪಕವಾಗಿ ತೆಗೆಯಲಾಗುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಕುಡಿಯುವ ನೀರಿನ ಪೈಪ್ ಸ್ಥಳಾಂತರಗೊಳಿಸಿ ಈಗ ಇರುವ ಚರಂಡಿಯ ಹೂಳನ್ನು ಸಂಪೂರ್ಣ ತೆಗೆದು ಮಾರುಕಟ್ಟೆ ಬಳಿ ಹಾಗೂ ಅಜೆಕಾರು ಪೇಟೆ ಅಂಗನವಾಡಿ ಬಳಿ ಮೋರಿಯನ್ನು ಸುವ್ಯವಸ್ಥೆ ಮಾಡಿದಲ್ಲಿ ಸ್ವಲ್ಪ ಮಟ್ಟಿಗಾದರೂ ನೀರು ಹರಿದು ಹೋಗಲು ಸಾಧ್ಯ ಇದೆ ಎಂದು ಸ್ಥಳೀಯರು ಹೇಳುತ್ತಾರೆ. ಹೆಚ್ಚಿನ ಅನುದಾನದ ಅಗತ್ಯ
ಪ್ರಸ್ತುತ ಇರುವ ಚರಂಡಿಯ ಹೂಳನ್ನು ಮಳೆಗಾಲದ ಮೊದಲು ತೆಗೆಯಲಾಗುತ್ತದೆ. ಪೇಟೆಯಲ್ಲಿ ಸಮರ್ಪಕ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಅನುದಾನದ ಅಗತ್ಯ ಇರುವುದರಿಂದ ಪಂಚಾಯತ್ ಆಡಳಿತದೊಂದಿಗೆ ಚರ್ಚಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
– ತಿಲಕ್‌ರಾಜ್, ಪಿಡಿಒ, ಮರ್ಣೆ ಗ್ರಾ.ಪಂ. ಸೂಕ್ತ ಕ್ರಮ
ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿರುವ ಅಜೆಕಾರು ಪೇಟೆಯಲ್ಲಿ ಸುವ್ಯವಸ್ಥಿತವಾಗಿ ಚರಂಡಿ ನಿರ್ಮಾಣ ಮಾಡುವ ಬಗ್ಗೆ ಶಾಸಕ ಸುನಿಲ್ ಕುಮಾರ್ ಅವರ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. – ಜ್ಯೋತಿ ಪೂಜಾರಿ, ಅಧ್ಯಕ್ಷರು, ಮರ್ಣೆ ಗ್ರಾಮ ಪಂಚಾಯತ್ – ಜಗದೀಶ್ ಅಂಡಾರು