ನಾನು ಕಾಲೇಜಿಗೆ ಬೇಗ ಬರುವುದೇ ನಿನ್ನನ್ನು ನೋಡಲಿಕ್ಕೆ ಎಂಬಂತಾಗಿದೆ. ನಿನ್ನೊಡನೆ ನಿಧಾನವಾಗಿ ನಡೆಯುತ್ತಾ, ಕ್ಯಾಂಪಸ್‌ನಲ್ಲಿ ತಿರುಗಾಡಬೇಕೆಂಬ ಹೊಸ ಕನಸಿಗೆ ಕಾವು ಕೊಡುತ್ತಾ ಕೂತಿದ್ದೇನೆ.
ನೀರಿನಷ್ಟೇ ನಿರ್ಮಲಳು, ಹೂವಿನಷ್ಟೇ ಕೋಮಲಳು ನೀನು. ನಿನ್ನ ನಿಷ್ಕಲ್ಮಷ ಮನಸ್ಸಿಗೆ, ನಿನ್ನ ನೋಟಕ್ಕೆ, ತಕರಾರಿಲ್ಲದೆ ಸೋತು ಹೋದವನು ನಾನು. ಅರಿವಳಿಕೆಯಷ್ಟೇ ಮತ್ತು ಬರಿಸಿತ್ತು ನಿನ್ನ ಕಿರುಲಜ್ಜೆ. ಏಕೋ ಏನೋ ಆ ವಾರೆಗಣ್ಣಿನ ನೋಟ ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದೆ. ನೀನು ಬೇಕೇ ಬೇಕೆಂದು ಮನಸ್ಸು ಹಠ ಮಾಡಿದೆ.
ಮೊದಲ ದಿನ ತರಗತಿಯಲ್ಲಿ ನಿನ್ನನ್ನು ಕಂಡಾಗ ಮನಸಲ್ಲಿ ಉಲ್ಲಾಸದ ಜಡಿಮಳೆ ಸುರಿದ ಅನುಭವ. ಸ್ನೇಹಿತೆಯರ ಜೊತೆ ಮಾತನಾಡುತ್ತಾ, ನಿನ್ನ ಪಾಡಿಗೆ ನೀನು ಯಾರಿಗೂ ಕೇರ್ ಮಾಡದೆ ಓಡಾಡುವ ರೀತಿ, ಯಾರೇ ಮಾತಾಡಿಸಿದರೂ ನಸುನಗುತ್ತಾ ಉತ್ತರಿಸುವ ನಿನ್ನ ತಾಳ್ಮೆಯ ಕಂಡು ಸೋತು ಹೋಗಿದ್ದೇನೆ. ಅಂದಿನಿಂದ ಮನಸ್ಸು ನಿನ್ನದೇ ತಿಲ್ಲಾನ ಹಾಡುತ್ತಿದೆ. ಹೃದಯವು ನಿನ್ನ ಸನಿಹ ಬಯಸುತ್ತಾ, ಕನಸಲ್ಲೂ ನಿನ್ನನ್ನೇ ಕನವರಿಸುತ್ತಿದೆ.
ನೀನು ಕಿರುಗಣ್ಣಲ್ಲಾದರೂ ನನ್ನನ್ನು ನೋಡಲಿ, ನಸುನಗಲಿ ಅಂತ ಹಾತೊರೆಯುತ್ತಿದ್ದ ನನಗೆ, ಆವತ್ತು ನೀನು ಇದ್ದಕ್ಕಿದ್ದಂತೆ ಬಂದು “ಹಾಯ್’ ಎಂದು ಹೇಳಿದಾಗ, ಗಾಳಿಯಲ್ಲಿ ತೇಲುವುದೊಂದು ಬಾಕಿ. ನಿನಗೆ ಸರಿಯಾಗಿ “ಹಾಯ್’ ಮಾಡಲೂ ಆಗಲಿಲ್ಲ ಆವತ್ತು. ಆ ದಿನಪೂರ್ತಿ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಈಗಂತೂ ನಾನು ಕಾಲೇಜಿಗೆ ಬೇಗ ಬರುವುದೇ ನಿನ್ನನ್ನು ನೋಡಲಿಕ್ಕೆ ಎಂಬಂತಾಗಿದೆ. ನಿನ್ನೊಡನೆ ನಿಧಾನವಾಗಿ ನಡೆಯುತ್ತಾ, ಕ್ಯಾಂಪಸ್‌ನಲ್ಲಿ ತಿರುಗಾಡಬೇಕೆಂಬ ಹೊಸ ಕನಸಿಗೆ ಕಾವು ಕೊಡುತ್ತಾ ಕೂತಿದ್ದೇನೆ. ಹಾಗೆ ನಡೆಯುತ್ತ ನಡೆಯುತ್ತಲೇ ನೀನು ನನ್ನ ಬದುಕಿಗೆ ಪ್ರವೇಶಿಸಬೇಕು, ಜೀವನಪೂರ್ತಿ ಜೊತೆಯಾಗಿ ಇರಬೇಕು… ಅಬ್ಟಾ, ನನ್ನ ಕನಸುಗಳಿಗೆ ಮಿತಿಯೇ ಇಲ್ಲ!
ನಿನ್ನೊಡನೆ ಮನಬಿಚ್ಚಿ ಮಾತನಾಡಬೇಕು, ನಿನ್ನ ಸ್ನೇಹ ಪಡೆಯಬೇಕು ಅಂತೆಲ್ಲಾ ಅನ್ನಿಸುತ್ತಲೇ ಇರುತ್ತದೆ. ಆದರೆ, ನಿನ್ನ ಮುಂದೆ ನಿಲ್ಲಲೂ ಅಂಜಿಕೆ. ನೀನು ಮಾತನಾಡಿದರೆ ನನಗೆ ಮಾತೇ ನಿಂತು ಹೋಗುತ್ತದೆ.
ನಿನಗಾಗಿ ಹೃದಯದಲ್ಲಿ ರಂಗಸಜ್ಜಿಕೆಯೊಂದು ಸಜಾಗಿದೆ. ನೀನು ಕಾಲ್ಗೆಜ್ಜೆ ಕಟ್ಟಿ ನಲಿಯಬೇಕಿದೆ. ನಿನ್ನ ಆಗಮನಕ್ಕಾಗಿ ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ಈ ಪ್ರೇಮಿಯ ಮೇಲೆ ಪ್ರೀತಿಯ ಮಳೆ ಸುರಿಸಲು ಬಾ.
ಇಂತಿ ಹೃದಯ ಕಳೆದುಕೊಂಡವ!
ಚಂದ್ರಶೇಖರ್ ಬಿ.ಎನ್