ಕಾಸರಗೋಡು: ಓರ್ವ ನಾಯಕ ಪರಿಪೂರ್ಣನಾಗಬೇಕಾದರೆ ಆತನಲ್ಲಿ ಉನ್ನತ ಮಟ್ಟದ ಕನಸು ಮನೆ ಮಾಡಿರಬೇಕು. ಜೀವನದಲ್ಲಿ ನಾವು ಕಾಣುವ ಕನಸು ನಮ್ಮನ್ನು ಎತ್ತರಕ್ಕೊಯ್ಯಬಲ್ಲದು. ‘ಟೈಮ್, ಎನರ್ಜಿ, ಮನಿ’ ಉಪಯೋಗಿಸಲು ನಾಯಕನಾದವ ಸಿದ್ಧನಿರಬೇಕು ಎಂದು ಪ್ರಸಿದ್ಧ ತರಬೇತುದಾರರಾದ ಹಂಸ ಪಾಲಕ್ಕಿ ತಿಳಿಸಿದರು. ಅವರು ಮಂಗಳವಾರ ಬದಿಯಡ್ಕದಲ್ಲಿ ವ್ಯಾಪಾರಿಗಳ ನೇತೃತ್ವ ಪರಿಶೀಲನಾ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ನಾಯಕನಾಗಬೇಕೆಂಬ ಹಂಬಲ ಎಲ್ಲರಲ್ಲೂ ಮನೆಮಾಡಿರುತ್ತದೆ. ನಮ್ಮ ಕುಟುಂಬಕ್ಕೆ, ನಮ್ಮ ಸಂಸ್ಥೆಗೆ ನಾವು ಲೀಡರ್ ಆಗಿರದಿದ್ದರೆ ನಮ್ಮನ್ನು ಲೀಡ್ ಮಾಡಲು ಬೇರೊಬ್ಬ ಬರುತ್ತಾನೆ. ಸಮಯ, ಶಕ್ತಿ, ಯುಕ್ತಿ ನಮ್ಮಲ್ಲಿರಬೇಕು. ಅಗತ್ಯಕ್ಕೆ ತಕ್ಕಂತಹ ಹಣವನ್ನು ಖರ್ಚುಮಾಡುವಲ್ಲಿ ನಾವು ಎಡವಬಾರದು. ನಮ್ಮೊಳಗಿನ ಸಂಘಟನಾತ್ಮಕ ಶಕ್ತಿಯನ್ನು ಹೊರತರಬೇಕು. ಸಂಘಟನೆಗಳನ್ನು ಅಳೆಯುವುದು ಅದರ ಉನ್ನತ ಕಾರ್ಯಗಳಿಂದ. ಪ್ರತಿ ಯೂನಿಟ್ ಸದಸ್ಯರೂ ಸಭೆ ಸೇರುವುದು, ಭಾಷಣ ಕಲೆಯನ್ನು ಕರಗತಮಾಡಿಕೊಳ್ಳಬೇಕು. ಸಂಘಟನೆಯ ಪ್ರಧಾನ ಆಧಾರ ಸ್ತಂಭವಾದ ಅಧ್ಯಕ್ಷನು ಆತನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದರೆ ಸಂಘಟನೆಯು ಬಲಗೊಳ್ಳುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪದಾಧಿಕಾರಿಗಳಿಗೆ ಅಭಿನಂದನ ಸಮಾರಂಭವೂ ನಡೆಯಿತು. ವಲಯ ಅಧ್ಯಕ್ಷ ಕುಂಜಾರ್ ಮುಹಮ್ಮದ್ ಹಾಜಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಅಧ್ಯಕ್ಷ ಅಹಮ್ಮದ್ ಶರೀಫ್ ಅಭಿನಂದನೆಯನ್ನು ಸ್ವೀಕರಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ತರಬೇತುದಾರರು ನಮಗೆ ಉತ್ತಮ ಮಾರ್ಗದರ್ಶಕರೂ ಆಗಿದ್ದಾರೆ. ಇದರಿಂದ ನಮ್ಮ ಸದಸ್ಯರಿಗೆ ಅನುಕೂಲವಾಗಲಿದೆ. ಎಲ್ಲರೂ ಉತ್ತಮ ನಾಯಕರಾಗಿ ಸಂಘಟನೆಯನ್ನು ಮುನ್ನಡೆಸೋಣ ಎಂದು ಕರೆಯಿತ್ತರು. ಜಿಲ್ಲಾ ಕಾರ್ಯದರ್ಶಿ ಜೋಸ್ ತಯ್ಯಿಲ್ ಮಾತನಾಡುತ್ತಾ ಬದಲಾವಣೆಯು ನಮ್ಮನ್ನು ಪುರೋಗತಿಯತ್ತ ಕೊಂಡೊಯ್ಯುತ್ತದೆ. ತಾನೋರ್ವ ನಾಯಕನಾದರೆ ಮಾತ್ರ ನಿಜ ಜೀವನದಲ್ಲಿಯೂ ಜಯ ಸಾಧಿಸಲು ಸಾಧ್ಯ ಎಂದರು.
ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ಜಿಲ್ಲಾ ಉಪಾಧ್ಯಕ್ಷ ಎಸ್.ಎನ್.ಮಯ್ಯ ಬದಿಯಡ್ಕ, ಪೈಕ ಅಬ್ದುಲ್ಲ ಕುಂಞಿ ಹಾಗೂ ತರಬೇತುದಾರ ಹಂಸ ಪಾಲಕ್ಕಿಯವರನ್ನು ಶಾಲು ಹೊದೆಸಿ ಅಭಿನಂದಿಸಲಾಯಿತು. ಅಬ್ದುಲ್ ರಹಿಮಾನ್ ಪೆರ್ಲ, ಬಾಲಕೃಷ್ಣ ರೈ ಮುಳ್ಳೇರಿಯ, ದಿವಾಕರ ಮಾವಿನಕಟ್ಟೆ, ಬಾಲಸುಬ್ರಹ್ಮಣ್ಯ ಭಟ್ ನೀರ್ಚಾಲು ಮಾತನಾಡಿದರು. ಮೊದು ಅಡೂರು ಸ್ವಾಗತಿಸಿ, ಗಣೇಶ ವತ್ಸ ಮುಳ್ಳೇರಿಯ ವಂದಿಸಿದರು. ಯೂತ್ ವಿಂಗ್ ಹಾಗೂ ವನಿತಾ ವಿಂಗ್‌ನ ಪದಾಧಿಕಾರಿಗಳೂ ಹಾಜರಿದ್ದರು.
ಚಿತ್ರ : ಅಶ್ವಿನಿ ಸ್ಟುಡಿಯೋ ಬದಿಯಡ್ಕ