Advertisement

ದ್ರಾವಿಡ್‌ಗೆ ತಕ್ಕ ಮಗ ಸಮಿತ್‌

10:05 AM Jan 26, 2020 | Lakshmi GovindaRaj |

ಕ್ರಿಕೆಟಿಗರ ಮಕ್ಕಳು ಅಪ್ಪನ ಸರಿಸಮಾನವಾಗಿ ಬೆಳೆದ ಉದಾಹರಣೆಗಳು ಸಿಗುವುದು ಕಡಿಮೆ. ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಅವರ ಮಗ ಅರ್ಜುನ್‌ ತೆಂಡುಲ್ಕರ್‌ ಮಾಸ್ಟರ್‌ ಬ್ಲಾಸ್ಟರ್‌ಗೆ ಸರಿಸಾಟಿಯಾಗಿ ಬೆಳೆಯುವ ಸೂಚನೆ ಕಾಣುತ್ತಿಲ್ಲ. ಮಾಜಿ ಕ್ರಿಕೆಟಿಗ ಸುನಿಲ್‌ ಗವಾಸ್ಕರ್‌ ಅವರ ಮಗ ರೋಹನ್‌ ಗಾವಸ್ಕರ್‌ ಕೂಡ ಹಾಗೆಯೆ, ರೋಹನ್‌ಗೆ ಭಾರತ ಪರ ಆಡುವ ಅದೃಷ್ಟ ಸಿಕ್ಕಿದರೂ ಅವರೆಂದೂ ಅಪ್ಪನ ಸಾಧನೆಯ ಸಮೀಪಕ್ಕೂ ಬಂದಿಲ್ಲ.

Advertisement

ಖ್ಯಾತ ಕ್ರಿಕೆಟಿಗ ಕೆ.ಶ್ರೀಕಾಂತ್‌ ಪುತ್ರ ಅನಿರುದ್ಧ ಕತೆ ಕೂಡ ಇದಕ್ಕಿಂತ ಭಿನ್ನವಾಗಿಲ್ಲ. ಒಟ್ಟಾರೆ ನೋಡುವುದಾದರೆ ದಿಗ್ಗಜ ಕ್ರಿಕೆಟಿಗರ ಮಕ್ಕಳು ಅವರವರ ತಂದೆಯ ಸಾಧನೆಯನ್ನು ಮೀರಿಸಿಲ್ಲ. ಹಾಗಂತ ಮುಂದೆ ಇಂತಹ ಸಾಧನೆ ಸಾಧ್ಯವಾಗದು ಎಂದಲ್ಲ. ಈಗಿನ ಪ್ರಕಾರವಾಗಿ ನೋಡುವುದಾದರೆ ಕರ್ನಾಟಕದ ಕ್ರಿಕೆಟ್‌ ದಿಗ್ಗಜ ರಾಹುಲ್‌ ದ್ರಾವಿಡ್‌ ಅವರ ಮಗ ಸಮಿತ್‌ ದ್ರಾವಿಡ್‌ ಭವಿಷ್ಯದಲ್ಲಿ ಅಪ್ಪನ ಸರಿಸಮಾನವಾಗಿ ಬೆಳೆದು ನಿಲ್ಲುವ ನಿರೀಕ್ಷೆ ಹುಟ್ಟಿಸಿದ್ದಾರೆ.

ಹೌದು, ಎಳೆವೆಯಿಂದಲೂ ಅಪ್ಪನನ್ನೇ ಸ್ಫೂರ್ತಿಯಾಗಿಸಿ ನಿರಂತರ ಅಭ್ಯಾಸ ನಡೆಸುತ್ತಿರುವ ಸಮಿತ್‌ ದ್ರಾವಿಡ್‌ ಶಾಲಾ ಕ್ರಿಕೆಟ್‌ ಕೂಟಗಳಲ್ಲಿ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿದ್ದಾರೆ. ಇದೀಗ ಕರ್ನಾಟಕ 14 ವಯೋಮಿತಿ ತಂಡವನ್ನು ಸಮಿತ್‌ ಸೇರಿಕೊಂಡಿದ್ದಾರೆ. ದಕ್ಷಿಣ ವಲಯ ಕೂಟದಲ್ಲಿ ಆಲೂರಿನಲ್ಲಿ ನಡೆಯುತ್ತಿರುವ ಗೋವಾ ವಿರುದ್ಧದ ಪಂದ್ಯದಲ್ಲಿ ಅಜೇಯ 109 ರನ್‌ ಬಾರಿಸಿದ್ದಾರೆ. 180 ಎಸೆತ ಎದುರಿಸಿದ ಅವರ ಇನಿಂಗ್ಸ್‌ನಲ್ಲಿ 15 ಬೌಂಡರಿ ಒಳಗೊಂಡಿತ್ತು.

ಇವರ ಬ್ಯಾಟಿಂಗ್‌ ಸಾಹಸದಿಂದಲೇ ಆತಿಥೇಯ ಕರ್ನಾಟಕ ಡ್ರಾ ಸಾಧಿಸಿಕೊಂಡಿತು ಎನ್ನುವುದು ವಿಶೇಷ. ಇದಕ್ಕೂ ಮೊದಲು ಸಮಿತ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿದ್ದ ಬಿಟಿಆರ್‌ ಅಂಡರ್‌ 14 ಕ್ರಿಕೆಟ್‌ ಕೂಟದಲ್ಲಿ ಭರ್ಜರಿ 150 ರನ್‌ ಬಾರಿಸಿದ್ದರು. ಮಾತ್ರವಲ್ಲ ಕೆಎಸ್‌ಸಿಎ 14 ವಯೊಮಿತಿಯೊಳಗಿನ ಅಂತರ ವಲಯ ಕ್ರಿಕೆಟ್‌ ಕೂಟದಲ್ಲಿ ಧಾರವಾಡ ವಿರುದ್ಧ ವೈಸ್‌ ಪ್ರಸಿಡೆಂಟ್‌ ತಂಡದ ಪರವಾಗಿ ಆಡಿ 22 ಬೌಂಡರಿ ಒಳಗೊಂಡ 201 ರನ್‌ ದ್ವಿಶತಕವನ್ನೂ ಬಾರಿಸಿದ್ದರು.

ಭವಿಷ್ಯದ ಭಾರತ ತಂಡದ ಪ್ರತಿಭೆ: ಸದ್ಯದ ಪರಿಸ್ಥಿತಿಯಲ್ಲಿ ಸಮಿತ್‌ ಬ್ಯಾಟಿಂಗ್‌ ಪರಿಯನ್ನು ನೋಡುತ್ತಿದ್ದರೆ ಮುಂದೆ ಇವರೊಬ್ಬರು ಸಮರ್ಥ ಕ್ರಿಕೆಟಿಗರಾಗಿ ರೂಪುಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಹಂತ ಹಂತವಾಗಿ ರಾಜ್ಯದ ವಿವಿಧ ತಂಡದೊಳಗೆ ಸ್ಥಾನ ಪಡೆದು ನಂತರ ರಣಜಿ ಆಡಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಮಿತ್‌ ಮುಂದೆ ಅವಕಾಶವಿದೆ.

Advertisement

ನಿರೀಕ್ಷೆ ಹುಸಿಗೊಳಿಸಿದ ದಿಗ್ಗಜರ ಮಕ್ಕಳು
ಅರ್ಜುನ್‌ ತೆಂಡುಲ್ಕರ್‌: 20 ವರ್ಷದ ಅರ್ಜುನ್‌ ತೆಂಡುಲ್ಕರ್‌ ತಂದೆಗೆ ತಕ್ಕ ಎನಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಆ ಹಾದಿಯಲ್ಲಿ ವೈಫ‌ಲ್ಯ ಅನುಭವಿಸಿದ್ದಾರೆ. ಸಚಿನ್‌ ದಾಖಲೆಗಳ ಸರದಾರನಾದರೂ ಅರ್ಜುನ್‌ ಫಾರ್ಮ್ಗಾಗಿ ಒದ್ದಾಟ ನಡೆಸುತ್ತಿದ್ದಾರೆ. ಮೆಲ್ಬರ್ನ್ ಕ್ರಿಕೆಟ್‌ ಕ್ಲನ್‌ ಯಂಗ್‌ ಕ್ರಿಕೆಟರ್, 14 ವಯೋಮಿತಿಯೊಳಗಿನ ಮುಂಬೈ ತಂಡ, 16 ವಯೊಮಿತಿಯೊಳಗಿನ ಮುಂಬೈ ತಂಡ, 19 ವಯೊಮಿತಿಯೊಳಗಿನ ಮುಂಬೈ ತಂಡದ ಪರವಾಗಿ ಆಲ್‌ರೌಂಡರ್‌ ಅರ್ಜುನ್‌ ಆಡಿದರೂ ವ್ಯಕ್ತಿಗತ ದಾಖಲೆಗಳ ಆಟವನ್ನು ಆಡಲು ಸಾಧ್ಯವಾಗಿಲ್ಲ.

ರೋಹನ್‌ ಗವಾಸ್ಕರ್‌: ಒಂದು ಕಾಲದಲ್ಲಿ ಕ್ರಿಕೆಟ್‌ನಲ್ಲಿ ಹಲವಾರು ದಾಖಲೆ ಬರೆದಿರುವ ಸುನಿಲ್‌ ಗವಾಸ್ಕರ್‌ ಪುತ್ರನೇ ರೋಹನ್‌ ಗವಾಸ್ಕರ್‌. ರೋಹನ್‌ ಕ್ರಿಕೆಟ್‌ಗೆ ಆಗಮಿಸಿದ ಆರಂಭದ ದಿನಗಳಲ್ಲಿ ಒಂದಷ್ಟು ಸದ್ದು ಮಾಡಿದ್ದರು. ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಭಾರತ ಏಕದಿನ ತಂಡದಲ್ಲಿ ಜಾಗ ಪಡೆದಿದ್ದ ಅವರು 11 ಪಂದ್ಯ ಆಡಿದ್ದಾರೆ. ಕೇವಲ 151 ರನ್‌ ಅಷ್ಟೇ ಮಾಡಿದ್ದಾರೆ. ಡಿಢೀರ್‌ ಫಾರ್ಮ್ ಕಳೆದುಕೊಂಡ ಅವರು ಮತ್ತೆ ತಂಡದಲ್ಲಿ ಸ್ಥಾನ ಪಡೆಯಲೇ ಇಲ್ಲ.

ಸ್ಟುವರ್ಟ್‌ ಬಿನ್ನಿ: ಕರ್ನಾಟಕದ ಖ್ಯಾತ ಕ್ರಿಕೆಟಿಗ ರೋಜರ್‌ ಬಿನ್ನಿ ಹೆಸರು ಗೊತ್ತಿಲ್ಲದವರಿಲ್ಲ. ಹಾಲಿ ರಾಜ್ಯ ಕ್ರಿಕೆಟ್‌ ಸಂಸ್ಥೆ ಅಧ್ಯಕ್ಷರೂ ಹೌದು, ಅವರ ಪುತ್ರ ಸ್ಟುವರ್ಟ್‌ ಬಿನ್ನಿ ರಣಜಿ, ಐಪಿಎಲ್‌ಗ‌ಳಲ್ಲಿ ಆಡಿದ್ದಾರೆ, ಮಾತ್ರವಲ್ಲ ಭಾರತದ ಪರ 6 ಟೆಸ್ಟ್‌, 14 ಏಕದಿನ ಪಂದ್ಯವನ್ನಾಡಿದ್ದಾರೆ. ಆದರೆ ಅವರ ಮೇಲೆ ಇಡಲಾಗಿದ್ದ ನಿರೀಕ್ಷೆಗಳೆಲ್ಲ ಹುಸಿಯಾಗಿದ್ದಾವೆ.

ಎಸ್‌. ಅನಿರುದ್ಧ: ಅನಿರುದ್ಧ್ ಅವರು ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್‌ ಪುತ್ರ, ಇವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದಾರೆ. ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಪರ ಆಡಿದ್ದು ಜೀವನದ ಗರಿಷ್ಠ ಸಾಧನೆ.

ಪ್ರತಿಫ‌ಲಾಪೇಕ್ಷೆಯಿಲ್ಲದೆ ಮಗನ ಆಟ ನೋಡುವೆ – ರಾಹುಲ್‌: ನನ್ನ ಮಗ ಫ‌ುಟ್‌ಬಾಲ್‌ ಸೇರಿದಂತೆ ಇತರೆ ಗೇಮ್ಸ್‌ಗಳಲ್ಲಿ ಭಾಗವಹಿಸಿರುವುದನ್ನು ನೋಡಿದ್ದೇನೆ. ಅವನ ಆಟವನ್ನು ಎಂಜಾಯ್‌ ಮಾಡಿದ್ದೇನೆ. ನನ್ನ ಮಗ ಕ್ರಿಕೆಟ್‌ ಆಡುವಾಗಲೂ ನಾನು ಯಾವುದೇ ಪ್ರತಿಫ‌ಲಾಪೇಕ್ಷೆಯಿಲ್ಲದೆ ನೋಡುತ್ತಿರುತ್ತೇನೆ. ಅವನು ಅವನ ಆಟವನ್ನು ಆಡುತ್ತಾನೆ. ಒಂದಂತೂ ಹೆಮ್ಮೆ ಅನಿಸುತ್ತದೆ. ನನ್ನ ಮಗ ಟೀವಿ ಹಾಗೂ ಐ ಪ್ಯಾಡ್‌ನಿಂದ ಸಾಕಷ್ಟು ದೂರವಿದ್ದಾನೆ. ಸಂಪೂರ್ಣ ಕ್ರೀಡೆಯಲ್ಲಿ ತೊಡಗಿಕೊಂಡಿರುವುದು ತೃಪ್ತಿದಾಯಕ ಎನಿಸುತ್ತಿದೆ ಎಂದು ರಾಹುಲ್‌ ದ್ರಾವಿಡ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next