ಹೊಸದಿಲ್ಲಿ: ಮಾಜಿ ಬ್ಯಾಟ್ಸ್ ಮನ್ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇದರೊಂದಿಗೆ ದ್ರಾವಿಡ್ ಅವರೇ ಭಾರತ ತಂಡದ ಕೋಚ್ ಆಗುವುದು ಬಹುತೇಕ ಖಚಿತಗೊಂಡಿದೆ.
ಇವರನ್ನು ಹೊರತುಪಡಿಸಿದರೆ ಬೇರೆ ದೊಡ್ಡ ಹೆಸರು ಇಲ್ಲಿ ಕಾಣಿಸುತ್ತಿಲ್ಲ.ಇನ್ನೊಂದು ಬೆಳವಣಿಗೆಯ ಪ್ರಕಾರ, ರಾಹುಲ್ ದ್ರಾವಿಡ್ ಅವರಿಂದ ತೆರವಾಗಲಿರುವ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥನ ಸ್ಥಾನಕ್ಕೆ ಮತ್ತೋರ್ವ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಆಯ್ಕೆಗೊಳ್ಳುವ ಸಾಧ್ಯತೆ ಇದೆ.
ರಾಹುಲ್ ದ್ರಾವಿಡ್ ನೂತನ ಕೋಚ್ ಆಗಿ ಅಧಿಕಾರ ಸ್ವೀಕರಿಸುವುದು ಕೆಲವು ವಾರಗಳ ಹಿಂದೆಯೇ ಖಾತ್ರಿಯಾಗಿತ್ತು. ಇದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಔಪಚಾರಿಕವಾಗಿ ಹೇಳಿದ್ದರು. ಆದರೆ ಕ್ರಿಕೆಟ್ ಮಂಡಳಿಯ ಸಂಪ್ರದಾಯದಂತೆ ಅರ್ಜಿ ಮೂಲಕವೇ ಈ ಪ್ರಕ್ರಿಯೆ ನಡೆಯ ಬೇಕಿತ್ತು. ದ್ರಾವಿಡ್ ಇದನ್ನು ಪಾಲಿಸುವುದರೊಂದಿಗೆ ರವಿಶಾಸ್ತ್ರಿ ಅವರ ಉತ್ತರಾಧಿಕಾರಿಯಾಗಲು ಸಜ್ಜಾದಂತಾಗಿದೆ. ಮಂಗಳವಾರ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು.
ಇದನ್ನೂ ಓದಿ:ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ
“ಹೌದು, ಇಂದು ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸಿದ್ದಾರೆ. ಇದು ಕೇವಲ ಔಪಚಾರಿಕ ಪ್ರಕ್ರಿಯೆಯಾಗಿದೆ. ಅರ್ಜಿ ಸಲ್ಲಿಸಲು ಇಂದು ಅಂತಿಮ ದಿನವಾಗಿತ್ತು. ಎನ್‌ಸಿಎಯಲ್ಲಿ ಅವರೊಂದಿಗಿದ್ದ ಪರಸ್ ಮಾಂಬ್ರೆ ಮತ್ತು ಅಭಯ್ ಶರ್ಮ ಈಗಾಗಲೇ ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ’ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲಕ್ಷ್ಮಣ್‌ಗೂ ದೊಡ್ಡ ಹುದ್ದೆ
ರಾಹುಲ್ ದ್ರಾವಿಡ್ ಅವರ ಸಮಕಾಲೀನ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಎನ್‌ಸಿಎ ಮುಖ್ಯಸ್ಥ ಸ್ಥಾನವನ್ನು ಅಲಂಕರಿಸುವ ಸಾಧ್ಯತೆ ಇದೆ. ಅವರು ಸನ್‌ರೈಸರ್ ಹೈದರಾಬಾದ್ ತಂಡದ ಮೆಂಟರ್ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.
ಒಂದು ವೇಳೆ ಲಕ್ಷ್ಮಣ್ ಎನ್‌ಸಿಎ ಹುದ್ದೆಗೆ ಆಯ್ಕೆಯಾದದ್ದೇ ಆದರೆ ಅವರು ವರ್ಷದಲ್ಲಿ ಕನಿಷ್ಠ 200 ದಿನ ಬೆಂಗಳೂರಿನಲ್ಲಿ ಉಳಿಯಬೇಕಾಗುತ್ತದೆ.