Advertisement

ದ್ರೌಪದಿಯ ಬಣ್ಣವೂ ಕಪ್ಪೇ!

06:00 AM Nov 30, 2018 | Team Udayavani |

ತಿಂಗಳು ತಿಂಗಳೂ ಲಕ್ಷ ರೂಪಾಯಿ ಸಂಬಳ ಎಣಿಸುವ ಗಂಡು ನಾನು. ಅಂಥವನು ಕಪ್ಪು ಬಣ್ಣದ ಹುಡುಗೀನ ನೋಡೋಕೆ ಇಷ್ಟಪಡ್ತೀನಾ? ನೆವರ್‌. ನನ್ನ ಹೆಂಡ್ತಿ ಬೆಳ್ಳಗೇ ಇರಬೇಕು!! 

Advertisement

ಅಣ್ಣಾ ಹೇಗೂ ಅರೇಂಜ್ಡ್ ಮದುವೆ ಆಗ್ತಿನಿ ಅಂತಿದ್ದೀ. ಹಾಗಿದ್ರೆ ನನ್ನ ಫ್ರೆಂಡ್‌ ಮೈತ್ರಿ ಆಗಬಹುದಾ? ಅವಳು ತುಂಬಾ ಬುದ್ಧಿವಂತೆ, ಯಾವಾಗ್ಲೂ ಕ್ಲಾಸ್‌ಗೆ ಫ‌ಸ್ಟ್‌ ಬರಿ¤ದ್ದವಳು. ಅಲ್ಲದೆ, ಒಳ್ಳೆಯ ಸ್ವಭಾವ, ಅಮ್ಮನಿಗೆ ಕೂಡಾ ಅವಳಂದ್ರೆ ಬಹು ಪ್ರೀತಿ. ಅವಳಿಗೂ ನಮ್ಮಮ್ಮನ್ನ ಕಂಡರೆ ಅತಿಯಾದ ಮಮತೆ ಇದೆ. ನಮ್ಮನೆಗೆ ಆಕೆ ಒಳ್ಳೆಯ ಸೊಸೆ ಆಗ್ತಾಳೆ. ಸಿವಿಲ್‌ ಸರ್ವಿಸ್‌ ಪರೀಕ್ಷೆನೂ ಬರೆದಿದ್ದಾಳೆ. ಯಾರಿಗೆ ಗೊತ್ತು? ನಾಳೆ ಅವಳು ಸೆಲೆಕ್ಟ್ ಆದ್ರೂ ಆಗಬಹುದು…”

“”ಇಂಥವರೆಲ್ಲ ಸಿವಿಲ್‌ ಸರ್ವಿಸ್‌ ಎಕ್ಸಾಮ್‌ ಪಾಸಾದರೆ, ನಾನು ಮೀಸೆ ಬೋಳಿಸಿಕೊಳ್ತೀನಿ. ಎಲ್ಲಾ ಸರಿ. ಆದರೆ, ಆ ಕರಿ ಬಣ್ಣವನ್ನು ತೆಗೆಯುವುದು ಹ್ಯಾಗೆ? ಆ ಕಪ್ಪು ಹುಡುಗಿ ನನಗೆ ಬೇಡ”
“”ಛೆ! ಛೆ! ಅವಳು ಅಂಥಾ ಕಪ್ಪೇನಿಲ್ಲ. ತುಸು ಬಣ್ಣ ಕಡಿಮೆ. ಆದರೆ ತುಂಬಾ ಲಕ್ಷಣವಾಗಿದ್ದಾಳೆ. ಹಾಗೆ ನೋಡಿದ್ರೆ ನೀನೂ ಸ್ವಲ್ಪ ಕಪ್ಪೇ”
“”ನಾನು ಕಪ್ಪಾದರೇನೀಗ? ವಿದ್ಯಾವಂತ, ಲಕ್ಷದ ಸಂಬಳ ಎಣಿಸಿಕೊಳ್ಳುವ ಹೆಲ್ದೀ ಕ್ವಾಲಿಫೈಡ್‌ ಮದುವೆ ಗಂಡು. ಕರಿ ಹುಡುಗಿಯನ್ನು ಮದುವೆ ಆಗಬೇಕಾದ ಅಗತ್ಯ ನನಗೆ ಏನೇನೂ ಇಲ್ಲ. ನಾನು ಒಪ್ಪುವ ಹುಡುಗಿಗೆ ಹಾಲಿನಂಥ ಮೈಬಣ್ಣ ಇರಬೇಕು”
“ಪ್ರಶ್ನೋತ್ತರ’ ಈ ರೀತಿ ಮುಕ್ತಾಯವಾದಾಗ, ಸ್ವಪ್ನಾ ಸುಮ್ಮನಾಗಿದ್ದಳು. ತನ್ನಣ್ಣ ತುಸು ಕಂದು  ಚರ್ಮದವನು. ಮೈತ್ರಿ ನಮ್ಮ ಮನೆಗೆ ಹೊಂದಿಕೊಳ್ತಾಳೆ. ಪ್ರೀತಿ, ಪ್ರೇಮ, ಸಲಿಗೆ ಅಂತ ಯಾರನ್ನೂ ಹತ್ತಿರ ಬಿಟ್ಟುಕೊಂಡ ಹುಡುಗಿ ಅಲ್ಲ. ಸರಳ ಸ್ವಭಾವದ, ಪ್ರೇಮಮಯಿ ಹುಡುಗಿ ಆಕೆ. ಅಣ್ಣನಿಗೆ ಬಿಳಿ ಹುಡುಗಿಯೇ ಬೇಕೆಂಬ ಭ್ರಮೆಯಲ್ಲಿ ಬೇರೇನೂ ಕಾಣಿ¤ಲ್ಲ. ಬ್ಯಾಡ್‌ಲಕ್‌… ಎಂದೆಲ್ಲಾ ಯೋಚಿಸಿ, ಸ್ವಪ್ನಾ ಸುಮ್ಮನಾದಳು.

ಅಂತೂ ಇಂತೂ ಅಣ್ಣ ಒಂದು ಕನ್ಯೆಯನ್ನು ಹುಡುಕಿ, ಒಪ್ಪಿಗೆ ಕೊಟ್ಟಾಗ ಅವಳಿಗೆ ಅಚ್ಚರಿ. ಬಿಳಿಚಿಕೊಂಡ ಮೈಬಣ್ಣದ, ಆಗಷ್ಟೇ ಕಾಯಿಲೆಯಿಂದ ಎದ್ದ ಕಳೆಯ, ಮೈಲಿ ರಕ್ತವೇ ಇಲ್ಲವೇನೋ ಎನ್ನುವ ತ್ವಚೆಯ ಹುಡುಗಿ ಅವಳು. ಆದರೂ, ಅಣ್ಣನಿಗೆ ಹಿಗ್ಗು. ತಾನು ಮದುವೆ ಆಗುವ ಹುಡುಗಿ ಬೆಳ್ಳಗೆ, ಚೆನ್ನಾಗಿದ್ದಾಳೆ ಅನ್ನುವ ಸಂಭ್ರಮ ಅವನದು.

ಸ್ವಪ್ನಾಳಿಗೆ ಅವಳ ಮೈಬಣ್ಣಕ್ಕಿಂತ ಎದ್ದು ಕಾಣಿಸಿದ್ದು ಆಕೆಯ ಅಹಂ, ದುಡುಕಿನ ವರ್ತನೆ, ಹಣದೆದುರು ತನ್ನ ಸೌಂದರ್ಯದೆದುರು ಸಮಾನ ಯಾರಿಲ್ಲ ಎಂಬ ಭಾವನೆ. ಮದುವೆಯಾದ ಗಂಡನನ್ನು ಬಿಟ್ಟರೆ, ಆತನ ತಾಯ್ತಂದೆ, ತಂಗಿಯ ಜೊತೆ ತನಗೇನೂ ಸಂಬಂಧವಿಲ್ಲವೆಂಬ ಧೋರಣೆ. ಆಕೆ ಮೈಬಣ್ಣವನ್ನು ಕಾಪಾಡಿಕೊಳ್ಳಲು ಬಳಸುತ್ತಿದ್ದ ತರಹೇವಾರಿ ಫೇಸ್‌ವಾಶ್‌, ಕ್ರೀಮುಗಳು, ತ್ವಚೆಯನ್ನು ಬೆಳ್ಳಗಾಗಿಸುವ ವಿವಿಧ ಬಗೆಯ ಸೌಂದರ್ಯವರ್ಧಕಗಳು, ಬೆಳಗ್ಗೆ ಎದ್ದ ಕೂಡಲೇ ಹಚ್ಚುವ ಫೇರ್‌, ಅಲ್ಟ್ರಾ ಫೇರ್‌ ಕ್ರೀಮುಗಳು, ಮಧ್ಯಾಹ್ನ ಬಳಿಯುವ ಚರ್ಮದ ಬಣ್ಣ ಬದಲಾಯಿಸುವ ವಿಚಿತ್ರ ಬಣ್ಣ, ವಿವಿಧ ವಿನ್ಯಾಸದ ಟ್ಯೂಬ್‌ಗಳಲ್ಲಿ ತುಂಬಿರುವ ರಾಸಾಯನಿಕಗಳು… ಹೀಗೆ ಹತ್ತಾರು ಕ್ರೀಮ್‌ಗಳನ್ನು ಉಪಯೋಗಿಸಿ, ಕಡೆಗೊಮ್ಮೆ ಘಮ ಘಮಿಸುತ್ತ ಕೋಣೆಯ ಹೊರಗೆ ಕಾಲಿಡುತ್ತಿದ್ದ ಈಕೆಯ ಮೂಲ ತ್ವಚೆಯ ಬಣ್ಣ ಯಾವುದೆಂದೇ ತಿಳಿಯುತ್ತಿರಲಿಲ್ಲ. ಆಕೆ ಮನೆಯಲ್ಲಿಯೂ ಅತಿಥಿಯ ಹಾಗೆಯೇ ಇದ್ದಳು. ಕುಡಿದ ಲೋಟ ಎತ್ತಿಟ್ಟವಳಲ್ಲ. ಗಂಡ ಮನೆಯಲ್ಲಿ  ಇಲ್ಲದ ವೇಳೆ, ಮುಖ ಊದಿಸಿಕೊಂಡೇ ಇರುತ್ತಿದ್ದ ಆಕೆ, ಒಮ್ಮೆಯೂ ಸ್ವಪ್ನಾಳತ್ತ ಸ್ನೇಹದ ನಗೆ ಬೀರಿದವಳೇ ಅಲ್ಲ.

Advertisement

ಈ ಬೆಳವಣಿಗೆಗಳ ಮಧ್ಯೆ ಸ್ವಪ್ನಾಳ ಸ್ನೇಹಿತೆ ಮೈತ್ರಿ ಸಿವಿಲ್‌ ಸರ್ವಿಸ್‌ ಎಕ್ಸಾಮ್‌ನಲ್ಲಿ ತೇರ್ಗಡೆಯಾಗಿದ್ದಳು. ತರಬೇತಿಗೆಂದು ಹೊರಡುವ ಮುನ್ನ ಸ್ವಪ್ನಾಳ ಮನೆಗೆ ಊಟಕ್ಕೆ ಬಂದಿದ್ದಳು. ಹಿರಿಯರ ಕಾಲ್ಮುಟ್ಟಿ ನಮಸ್ಕರಿಸಿ ಸಿಹಿ ನೀಡಿದ್ದಳು. ಸ್ವಪ್ನಾಳ ಅತ್ತಿಗೆಗೂ ಸಿಹಿ ನೀಡಿದಾಗ ಆಕೆ ಮುಟ್ಟಲೇ ಇಲ್ಲ. “ಬೇಡ, ನನಗೆ ಸಿಹಿ ಹಿಡಿಸಲ್ಲ’ ಅಂದುಬಿಟ್ಟಳು. ಉಣ್ಣುವಾಗಲೂ ಆಕೆ ಎಲ್ಲರ ಜೊತೆಗೂಡಲೇ ಇಲ್ಲ. ಸಾತ್ವಿಕ ಚೆಲುವು, ಬುದ್ಧಿಮತ್ತೆಯಿಂದ ಕಳೆಕಳೆಯಾಗಿ ಕಾಣುತ್ತಿದ್ದ ಮೈತ್ರಿ, ಊಟ ಮುಗಿಸಿ ತೆರಳಿದ್ದಳು. ವರ್ಷದ ಹಿಂದಷ್ಟೇ “ಅವಳು ಕಪ್ಪಗಿದ್ದಾಳೆ, ಅಂಥ ಹುಡುಗೀನ ನಾನು ನೋಡೋದಾ?’ ಎಂದು ಉಡಾಫೆ ಮಾಡಿದ್ದ ಅಣ್ಣ , ಇವತ್ತು ಆಗಾಗ ಅವಳತ್ತ ಕುತೂಹಲದಿಂದ ನೋಡುತ್ತಿದ್ದುದನ್ನು ಸ್ವಪ್ನಾ ಗಮನಿಸಿದ್ದಳು.

ಎಲ್ಲರೂ ಊಟ ಮುಗಿಸಿ, ಕೋಣೆ ಸೇರಿದಾಗ ಅತ್ತಿಗೆ ಅಣ್ಣನೊಡನೆ, ಮೈತ್ರಿಯನ್ನು ಕರಿಯ ಹುಡುಗಿ ಎಂದು ಟೀಕಿಸಿದ್ದು ಕೇಳಿಸಿತ್ತು. ಆಗ ಅಣ್ಣ ನಗುತ್ತ ಕೇಳಿದ, “”ಹಾಗೆ ನೋಡಿದರೆ ನಿನಗಿಂತ ನಾನು ತುಸು ಕಪ್ಪೇ ತಾನೆ? ಅದು ಹ್ಯಾಗೆ ನೀನು ಒಪ್ಪಿಕೊಂಡೆ ನನ್ನ?”
“”ನೀವು ಕಪ್ಪು ಅಂತ ಮೊದಲು ನಾನು ಮದುವೆಗೆ ಒಪ್ಪಿರಲೇ ಇಲ್ಲ. ಈ ಹುಡುಗ ಬೇಡ ಅಂತ ರಚ್ಚೆ ಹಿಡಿದಿದ್ದೆ. ನನ್ನದು ಹಾಲಿನಂಥ ಮೈಬಣ್ಣ , ಅದಕ್ಕೆ ಸರಿಯಾಗಿ ಬೆಳ್ಳಗಿರುವ ಪತಿಯೇ ಬೇಕು ಅಂತ ಉಪವಾಸ ಕೂತಿದ್ದೆ. ಆದರೆ, ನನ್ನ ಮಾತಿಗೆ ಅಪ್ಪ ಒಪ್ಪಲೇ ಇಲ್ಲ. ಹುಡುಗನ ಕಡೆಯವರು ವರದಕ್ಷಿಣೆ, ವರೋಪಚಾರ, ಚಿನ್ನ ಕೇಳಿಲ್ಲ. ಭರ್ಜರಿಯಾಗಿ ಲಗ್ನ ಮಾಡ್ಕೊಡಿ ಅಂತ ಕೂಡಾ ಡಿಮ್ಯಾಂಡ್‌ ಇಟ್ಟಿಲ್ಲ. ಗ್ರ್ಯಾಂಡ್‌ ಆಗಿ ಮದುವೆ ಮಾಡಿಕೊಡಿ ಎಂದು ಕೇಳಿದ್ರೆ ಆ ಎಲ್ಲಾ ಖರ್ಚು ನಿಭಾಯಿಸಲು ನನಗೆ ಸಾಧ್ಯವೇ ಇಲ್ಲ, ನೀನು ಒಪ್ಪದೇ ಇದ್ದರೆ ನಿನ್ನ ತಂಗಿಯನ್ನು ಕೊಟ್ಟು ಮದುವೆ ಮುಗಿಸ್ತೇನೆ ಅಂತ ಗದರಿಸಿದ್ದರು. ಅಮ್ಮನೂ ಬೈದಳು, ಬಣ್ಣ ಏನು ಅರೆದು ಕುಡಿಯಬೇಕಾ? ಉದ್ಯೋಗ, ಮನೆತನ ಚೆನ್ನಾಗಿದೆ ಅಂತ ಒಪ್ಪಿಸಿದ್ದರು. ಈಗ ನೋಡಿ ನಮ್ಮ ಪೇರ್‌ ಹ್ಯಾಗಿದೆ? ನನ್ನ ಫ್ರೆಂಡ್ಸ್‌ ಎಲ್ಲಾ “ಬ್ಲ್ಯಾಕ್‌ ಆ್ಯಂಡ್‌ ವೈಟ್‌’ ಎಂದು ಗೇಲಿ ಮಾಡ್ತಾರೆ ಅನ್ನುತ್ತ ಮೂತಿ ಊದಿಸಿದ್ದಳು ಅಣ್ಣನ ಮುದ್ದಿನ ಮಡದಿ.

ಕೃಷ್ಣವೇಣಿ ಎಂ.

Advertisement

Udayavani is now on Telegram. Click here to join our channel and stay updated with the latest news.

Next