ಮೈಸೂರು: ಆದಾಯ ತೆರಿಗೆ ಇಲಾಖೆ ದಾಳಿ ಮುಂದಿಟ್ಟುಕೊಂಡು ಅನುಕಂಪ ಗಿಟ್ಟಿಸಲು ಜೆಡಿಎಸ್‌ನವರು ಮಂಡ್ಯದಲ್ಲಿ ಡ್ರಾಮಾ ಮಾಡುತ್ತಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ತಿಳಿಸಿದರು.
ಮೈಸೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದವರು ಐಟಿ ದಾಳಿ ಮಾಡುತ್ತಾರೆ. ನಾನೊಬ್ಬ ಅಭ್ಯರ್ಥಿ, ನನಗೆ ಐಟಿ ದಾಳಿ ಬಗ್ಗೆ ಏನು ಗೊತ್ತಿರುತ್ತೆ ನೀವೇ ಹೇಳಿ ಎಂದು ಪ್ರಶ್ನಿಸಿದರು.
ಅವರ ಸಚಿವರೇ ಧಮಕಿ ಹಾಕಿದ್ದು, ಇಂತಹ ರಾಜಕಾರಣ ಅವರದ್ದು, ಅನುಮಾನವಿದ್ದವರ ಬಗ್ಗೆ ಮಾತನಾಡಲಿ, ಪುಟ್ಟರಾಜು ಅವರ ಬಗ್ಗೆ ನನಗೆ ಗೌರವವಿದೆ, ನಾನು ಅವರಂಥೆ ಮಾತನಾಡುವುದಿಲ್ಲ. ನಾನು ನನ್ನ ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ಪುಟ್ಟರಾಜು ಅವರು ಏನಾದರೂ ನನ್ನ ಬಗ್ಗೆ ಮಾತನಾಡುವ ಮುನ್ನ ಅಂಬರೀಶ್ ಅವರನ್ನು ಕಣ್ಣುಮುಚ್ಚಿಕೊಂಡು ಒಮ್ಮೆ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ನೀವು ನಿಮ್ಮ ಪಕ್ಷದ ಪರ ಪ್ರಚಾರ ಮಾಡಿಕೊಳ್ಳಿ, ಅದನ್ನು ಬಿಟ್ಟು ಅಂಬರೀಶ್ ಕುಟುಂಬದವರ ಬಗ್ಗೆ ಮಾತನಾಡುವುದನ್ನು ದೇವರು ಒಪ್ಪಲ್ಲ. ಪುಟ್ಟರಾಜು ಅವರಿಗೆ ಮನಃಸಾಕ್ಷಿ ಎಂಬುದು ಸ್ವಲ್ಪವಾದರೂ ಉಳಿದಿದ್ದರೆ, ನಮ್ಮ ಕುಟುಂಬದ ಬಗ್ಗೆ ಮಾತನಾಡುವ ಮುನ್ನ ಯೋಚನೆ ಮಾಡಲಿ ಎಂದರು.
ಅವರ ಅಭ್ಯರ್ಥಿ ಗೆಲ್ಲಿಸಿದರೆ ಮಾತ್ರ ಮಂಡ್ಯ ಅಭಿವೃದ್ಧಿ, ಇದುವರೆಗೂ ಏನು ಮಾಡಿಲ್ಲ, ಇಷ್ಟು ದಿನ ಏನು ಮಾಡಿದರು, ಅವರಿಗೆ ಅನುಕಂಪ ಇಲ್ಲ, ಇದರ ಮೂಲಕ ಅನುಕಂಪ ಗಿಟ್ಟಿಸಲು ಪ್ರಯತ್ನ, ಐಟಿ ದಾಳಿ ನಾನೇ ಮಾಡಿಸಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ಜನ ಇದನ್ನು ಒಪ್ಪಲ್ಲ.
ನಾನು ಅಂಬರೀಶ್ ಅವರ ಪತ್ನಿ, ಅವರೆಂದು ಇಂತಹ ಕುತಂತ್ರದ ರಾಜಕಾರಣ ಮಾಡಿದವರಲ್ಲ, ನಾನು 25 ವರ್ಷದಿಂದ ಅಂಬರೀಶ್ ಅವರ ರಾಜಕೀಯವನ್ನು ನೋಡಿದ್ದೇನೆ. ನನಗೂ ನಿಖಿಲ್ ಹೆಸರಿನವರಿಂದ ನಾಮಪತ್ರ ಸಲ್ಲಿಸಲು ಹೇಳಿದ್ದರು. ನಾನು ಬೇಕಿದ್ದರೆ 9 ಜನ ನಿಖಿಲ್ ಹೆಸರಿನವರನ್ನು ನಿಲ್ಲಿಸಬಹುದಿತ್ತು. ಆದರೆ, ನಾನೇ ಬೇಡ ನೇರ ಹೋರಾಟ ಮಾಡುತ್ತೇನೆ.
ಹಿಂಬಾಗಿಲ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದೇನೆ. ಅವರು ಮೂರು ಜನ ಸುಮಲತಾ ಹೆಸರಿನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದರು. ನಾನು ಅಷ್ಟೊಂದು ಕೀಳುಮಟ್ಟಕ್ಕೆ ಇಳಿದು ರಾಜಕಾರಣ ಮಾಡಲ್ಲ ಎಂದು ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಜೆಡಿಎಸ್ ನಾಯಕರ ವಿರುದ್ಧ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದರು.