ವಿಜಯಪುರ: ನಾಟಕಗಳು ಸಾಮಾಜಿಕ ಸೌಹಾರ್ದತೆ ಬೆಳೆಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ನಾಟಕಗಳಿಗೆ ಪ್ರೇಕ್ಷಕನೇ ಜೀವಾಳ. ಹೀಗಾಗಿ ಪ್ರಸ್ತುತ ಸಂದರ್ಭದಲ್ಲಿ ಯುವಕರ ಆಸಕ್ತಿದಾಯಕ ವಿಷಯ ವಸ್ತುಗಳನ್ನು ಅಳವಡಿಸಿಕೊಂಡು ರಂಗಭೂಮಿಯತ್ತ ಆಕರ್ಷಿಸುವ ಕೆಲಸವಾಗಬೇಕಿದೆ ಎಂದು ಉಪನ್ಯಾಸಕ ಯು.ಎನ್. ಕುಂಟೋಜಿ ಹೇಳಿದರು.
ನಗರದ ಸರ್ಕಾರಿ ಬಾಲಕರ ವಸತಿ ನಿಲಯದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಧಾರವಾಡದ ರಂಗಾಯಣ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚನ್ನಮ್ಮ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಂಗ ಸಂಸ್ಥೆಗಳು ನಾಟಕೋತ್ಸವ, ರಂಗ ಶಿಬಿರ ಹಮ್ಮಿಕೊಳ್ಳುವ ಮೂಲಕ ನಾಟಕ ಪರಂಪರೆ ಮುಂದುವರಿಸಬೇಕು. ಜನತೆಗೆ ಮನರಂಜನೆ ಜೊತೆಗೆ ಇತಿಹಾಸ ಪರಂಪರೆ ನೀತಿ ಬೋಧಿ ಸಬೇಕು. ಚನ್ನಮ್ಮನ ಪಾತ್ರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿ, ರಂಗ ಚಟುವಟಿಕೆಗಳ ಮೂಲಕ ನಾಟಕ ಪರಂಪರೆ ಜೀವ ನೀಡಿದ ಕೀರ್ತಿ ಜಿಲ್ಲೆಯದ್ದು. ಪ್ರತಿ ನಾಟಕವೂ ಸಂದೇಶ ನೀಡುತ್ತವೆ. ನಾಟಕ ಸಂಸ್ಕೃತಿ ಬೆಳೆಸುವಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ. ರಂಗಭೂಮಿ, ರಂಗ ಚಟುವಟಿಕೆಗಳಿಗೆ ಪ್ರೋತ್ಸಾಹಿಸಬೇಕು ಎಂದರು.
ನಂತರ ಕಿತ್ತೂರು ಚನ್ನಮ್ಮ ನಾಟಕ ಪ್ರದರ್ಶಿಸಿದ ಧಾರವಾಡದ ರಂಗಾಯಣ ತಂಡದ ಕಲಾವಿದರಾದ ಚನ್ನಮ್ಮ ಪಾತ್ರಧಾರಿ ಬಿಂದು ಡಿ., ಕಲಾವಿದರಾದ ಸುಮತಿ, ಪ್ರಸನ್ನ, ಶ್ರೀಕಾಂತ, ಯೋಗೇಶ, ಭಾಸ್ಕರ, ಸೋಮಶೇಖರ, ಚಂದ್ರಶೇಖರ, ಪ್ರಿಯಾಂಕಾ, ಪೂರ್ಣಿಮಾ, ವಿಠ್ಠಲ, ಹರೀಶ ನಾಟಕ ನಿರ್ದೇಶನ ರಮೇಶ, ಪರಿಕಲ್ಪನೆ ರಂಗವಿನ್ಯಾಸ ವಿಶ್ವರಾಜ ಸಂಗೀತ ರಾಘವ ಕಮ್ಮಾರ ಬೆಳಕು ಮರಳಾರಾಧ್ಯ ಮನೋಜ್ಞವಾಗಿ ಅಭಿನಯಿಸಿದರು. ಈ ವೇಳೆ ರಂಗ ನಿರ್ದೇಶಕ ಸಂಗಮೇಶ ಬದಾಮಿ, ರವೀಂದ್ರನಾಥ ಮಹಾರಾಜರು, ಗುರುಶಾಂತ ನಿಡೋಣಿ, ಶರಣಗೌಡ ಪಾಟೀಲ, ಸೋಮಶೇಖರ ಕುರ್ಲೆ, ಆಯುಬ ದ್ರಾಕ್ಷಿ ಹಾಗೂ ಉಪನ್ಯಾಸಕರು ಇದ್ದರು.