Advertisement

“ಡ್ರಾಮಾ’ಜನ್ಮಭೂಮಿ

11:30 AM Dec 15, 2019 | Lakshmi GovindaRaj |

ಮಹಾನಗರ ಬಹಳ ಮುಂದೋಡಿದೆ. ದೊಡ್ಡ ದೊಡ್ಡ ಮಾಲುಗಳು ಗಗನ ಮುಟ್ಟಿವೆ. ಅದರೊಳಗೆ ಸ್ವರ್ಗರೂಪಿ ಮಲ್ಟಿಪ್ಲೆಕ್ಸ್‌ಗಳು. ವಾರಕ್ಕೆ ಎಂಟ್ಹತ್ತರಂತೆ ಬಂದಪ್ಪಳಿಸುವ ಸಿನಿಮಾಗಳು. ಡಿಜಿಟಲ್‌ ಪರದೆಯ ಈ ದೃಶ್ಯ ಮನರಂಜನೆಯ ಆಚೆಗೆ ತಣ್ಣಗೆ ಪ್ರವಹಿಸುವ ರಂಗಭೂಮಿ. ಬೆಂಗಳೂರಿನಲ್ಲಿ ಒಂದು ತಿಂಗಳಲ್ಲಿ ಏನಿಲ್ಲವೆಂದರೂ, ಕನಿಷ್ಠ 30- 50 ನಾಟಕಗಳು ಪ್ರದರ್ಶನ ಕಾಣುತ್ತವೆ. ಈ ವಾರ ರಂಗಪ್ರಿಯರಿಗೆ ನಿಜಕ್ಕೂ ಸುಗ್ಗಿ. ಡ್ರಾಮ ಜನ್ಮಭೂಮಿಯಂತಿರುವ ಬೆಂಗಳೂರಿನಲ್ಲಿ, ಅಪರೂಪದ ಕಥಾವಸ್ತುವಿನ ನಾಟಕಗಳು ಪ್ರೇಕ್ಷಕರೊಂದಿಗೆ ಮುಖಾಮುಖೀ ಆಗುತ್ತಿವೆ…

Advertisement

ವಂಶವೃಕ್ಷದ ಕೆಳಗೆ…: ಹೆಸರಾಂತ ಕಾದಂಬರಿ, ಡಾ. ಎಸ್‌.ಎಲ್‌. ಭೈರಪ್ಪನವರ ಬಹುಚರ್ಚಿತವಾದ ಮತ್ತು ಬಹು ವ್ಯಾಪಕವಾಗಿ, ಕಳೆದ 50 ವರ್ಷಗಳಿಗೂ ಹೆಚ್ಚು ಕಾಲದಿಂದ ಓದಲ್ಪಟ್ಟ ಕಾದಂಬರಿ ವಂಶವೃಕ್ಷ. ನಮ್ಮ “ವಟಿಕುಟೀರ’ ತಂಡವು ಇದನ್ನು ರಂಗರೂಪಕ್ಕೆ ಇಳಿಸುವಾಗ ಅನೇಕ ಸವಾಲುಗಳು ಇದ್ದವು. ಇದೊಂದು ವಿಶಾಲ ಭಿತ್ತಿಯ ಕಾದಂಬರಿ. ಎರಡು ತಲೆಮಾರುಗಳವರೆಗೆ ಸಾಗುವ ಕಾದಂಬರಿಯೂ ಹೌದು. ಎರಡು ತಲೆಮಾರಿಗೆ ಸೇರಿದ, ವಿಭಿನ್ನ ದೃಷ್ಟಿಕೋನ ಹೊಂದಿರುವ‌ ವ್ಯಕ್ತಿಗಳ ನಡುವಿನ ಭಾವನಾತ್ಮಕ ತುಮುಲದ ಕಥೆ.

ಇದರ ದೃಶ್ಯಾವಳಿಗಳು ಶ್ರೋತ್ರಿಯವರ ಶ್ರೀಮಂತ ಹಾಗೂ ಸಾತ್ವಿಕ ಶ್ರೀಮಂತಿಕೆಯ ಮನೆ, ಸಂಶೋಧಕ ಸದಾಶಿವರಾಯರ ಮನೆ ಮತ್ತು ಕಚೇರಿ, ಕಾಲೇಜು… ಹೀಗೆ ಹಲವು ಸ್ಥಳಗಳಲ್ಲಿ ನಡೆಯುತ್ತವೆ. ವ್ಯಕ್ತಿಗಳು ಕಾಲಮಾನದೊಂದಿಗೆ ಸಾಗುತ್ತಿರುತ್ತಾರೆ. ಕಾದಂಬರಿ ಆರಂಭವಾದಾಗಲೇ ಕಾತ್ಯಾಯನಿ ಗಂಡನನ್ನು ಕಳೆದುಕೊಂಡಿರುತ್ತಾಳೆ. ಅಂದಿನ ರೂಢಿಯಂತೆ, ಆಕೆಯ ಮುಡಿ ತೆಗೆದು, ಮಡಿ ಮಾಡಿ, ಹೊರಗಿನ ಸಂಪರ್ಕದಿಂದ ಅವಳನ್ನು ದೂರವಿಡುವುದನ್ನು ಶ್ರೋತ್ರಿಗಳು ಉದಾರವಾಗಿ ತಡೆದಿರುತ್ತಾರೆ. ಅವಳ ಮಗ ಶ್ರೀನಿವಾಸ ವಂಶದ ಮುಂದಿನ ಕುಡಿ.

ಗಂಡ ತೀರಿಕೊಂಡನೆಂದ ಮಾತ್ರಕ್ಕೆ ತನ್ನ ಬದುಕನ್ನೂ ಮನೆಯ ನಾಲ್ಕು ಗೋಡೆಗಳ ನಡುವೆ ಹುದುಗಿಸಿಡುವುದನ್ನು ಅವಳು ಒಪ್ಪಲಾರಳು. ಮುಂದೆ ಓದುವ ಬಯಕೆಯಾಗುತ್ತದೆ. ಸಂಪ್ರದಾಯಸ್ಥೆಯಾದ ಪತ್ನಿಯ ವಿರೋಧದ ನಡುವೆಯೂ, ಅದನ್ನೂ ಶ್ರೋತ್ರಿಗಳು ಪ್ರೋತ್ಸಾಹಿಸುತ್ತಾರೆ. ಮುಂದೆ ಆಕೆ ರಾಜಾರಾಯರನ್ನು ವಿವಾಹವಾಗಲು ಬಯಸಿದಾಗ, ಅವರವರ ಬದುಕು ಅವರದು ಎನ್ನುವ ಉದಾರ ಧೋರಣೆಯನ್ನು ತಾಳುತ್ತಾರಾದರೂ, ವಂಶದ ಕುಡಿಯನ್ನು ಕಾತ್ಯಾಯನಿ ಒಯ್ಯುವುದನ್ನು ಒಪ್ಪಲಾರರು.

ವಂಶದ ಮುಂದೆ ತಾಯ್ತನ ಇಲ್ಲವೆನ್ನುವುದು ಅವರು ನಂಬಿಕೊಂಡು ಬಂದಿರುವ ಸಿದ್ಧಾಂತವಾಗಿರುತ್ತದೆ. ಕೊನೆಗೊಮ್ಮೆ, ತಮ್ಮ ಹುಟ್ಟಿನ ರಹಸ್ಯ ತಿಳಿದಾಗ, ಕ್ಷೇತ್ರವೇ ಮುಖ್ಯ ಎನ್ನುವುದನ್ನು ಅರಿತು, ಕಾತ್ಯಾಯನಿಯ ನಿರ್ಧಾರವನ್ನು ಮನಸಾ ಸ್ವೀಕರಿಸುತ್ತಾರೆ. ಇಂಥದೊಂದು ನಂಬಿಕೆಗಳ ಸಂಘರ್ಷವನ್ನು ಕಾದಂಬರಿಕಾರರು ಮನಮುಟ್ಟುವಂತೆ ರಚಿಸಿದ್ದಾರೆ. ಕಾದಂಬರಿಯ ಆಶಯಕ್ಕೆ ಭಂಗಬಾರದಂತೆ ರಂಗರೂಪವನ್ನು ಸಿದ್ಧಪಡಿಸಿಕೊಂಡು, ಇದನ್ನು ರಂಗದ ಮೇಲೆ ತರುವಾಗ, ನಾವು ಸಹಜ ಆವರಣವನ್ನು ಸೃಷ್ಟಿಸುವುದು ಸಾಧ್ಯವಾಗದು.

Advertisement

ಹಲವು ನಾಟಕೀಯ ಸ್ವಾತಂತ್ರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗ, ಸಾಂಕೇತಿಕವಾದ ರಂಗಪರಿಕರಗಳನ್ನು ಬಳಸಬೇಕಾಗುತ್ತದೆ. ನಾಟಕೀಯ ದೃಶ್ಯಗಳನ್ನು ಸಂಯೋಜಿಸಬೇಕಾಗುತ್ತದೆ. ಪಾತ್ರಗಳ ಭಾವನೆಗಳ ತಾಕಲಾಟವನ್ನು ಆತ್ಮಗತವಾಗಲು ಬಿಡದೆ, ವ್ಯಕ್ತಿಗಳ ನಡುವಿನ ಚರ್ಚೆಯಾಗಿಸಬೇಕಾಗುತ್ತದೆ. ವಂಶವೃಕ್ಷದಂಥ ಬೃಹತ್‌ ಕಾದಂಬರಿ ರಂಗಭೂಮಿಯ ಮಿತಿಯೊಳಗೆ ನಾಟ್ಯಾಂತರಣಗೊಂಡು ಹೇಗೆ ಮೂಡಿಬಂದಿದೆ ಎನ್ನುವುದನ್ನು ಮತ್ತು ನಾವು ಕಾದಂಬರಿಗೆ ನ್ಯಾಯ ಒದಗಿಸಿದ್ದೇವೆಯೇ ಎನ್ನುವುದನ್ನು ಭೈರಪ್ಪನವರ ಕಾದಂಬರಿಪ್ರಿಯರು ನಾಟಕ ನೋಡಿ ಅಳೆಯಬಹುದಷ್ಟೆ.

ಯಾವಾಗ?: ಡಿ.16- ಡಿ.17, ಸಂಜೆ 7.30
ಎಲ್ಲಿ?: ಪ್ರಭಾತ್‌ ಕೆ.ಎಚ್‌. ಕಲಾಸೌಧ, ಹನುಮಂತ ನಗರ
ಪ್ರವೇಶ: 150 ರೂ.

ಸೋಮಾಲಿಯಾ ಕಡಲ್ಗಳ್ಳರು: ಕಡಲ್ಗಳ್ಳರು ಅಥವಾ ಪೈರೇಟ್ಸ್‌ಗಳನ್ನು ಮುಖ್ಯ ಪಾತ್ರವಾಗಿ ಬಿಂಬಿಸಿದ ಅದೆಷ್ಟೋ ಸಿನಿಮಾಗಳು ತೆರೆಯ ಮೇಲೆ ಬಂದಿವೆ. ಅದು ಸಿನಿಮಾ, ಅಲ್ಲಿ ಮಾತ್ರ ಹಾಗೆ ಆಗುತ್ತೇನೋ ಎಂದುಕೊಂಡು ಸುಮ್ಮನಿರುವಾಗಲೇ, ನಮ್ಮದೇ ಉಡುಪಿಯ ಮಲ್ಪೆಯಿಂದ ಸುವರ್ಣ ತ್ರಿಭುಜ ಎಂಬ ಮೀನುಗಾರರ ಹಡಗು, ದಿಢೀರನೆ ನಾಪತ್ತೆ ಆಯಿತು. ಅದರಲ್ಲಿದ್ದ ಮೀನುಗಾರರ ಸುಳಿವೂ ಸಿಗದೇ ಹೋಯಿತು. ಸೋಮಾಲಿಯದ ಕಡಲ್ಗಳ್ಳರು ಅದನ್ನು ಅಪಹರಿಸಿರಬಹುದೆಂಬ ಶಂಕೆ ಈಗಲೂ ಜೀವಂತವಾಗಿಯೇ ಉಳಿದಿದೆ.

ಮೀನುಗಾರರ ಹಡಗು ಹೇಗೆ ಕಳ್ಳತನವಾಗುತ್ತೆ? ಸಮುದ್ರಕ್ಕೆ ಇಳಿದ ಬೆಸ್ತನೊಬ್ಬನ ಎದೆಯಾಳದಲ್ಲಿ ಹುಟ್ಟುವ ಆತಂಕದ ಅಲೆಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ, ಕರಾವಳಿಯಿಂದ ಕಣ್ಮರೆಯಾದ ಆ 7 ಮೀನುಗಾರರ ಕಣ್ಣೀರ ಕತೆ ಹೊಂದಿದ ನಾಟಕವೊಂದು ಇದೀಗ ಪ್ರದರ್ಶನಕ್ಕೆ ಅಣಿಯಾಗಿದೆ. ರಂಗಪಯಣ ತಂಡದ ಆ ಸೃಷ್ಟಿ, “ಸೋಮಾಲಿಯಾ ಕಡಲ್ಗಳ್ಳರು’ ಎಂಬ ನಾಟಕ.

ಮೀನುಗಾರರು ಸೋಮಾಲಿಯಾದಲ್ಲಿ ಒತ್ತೆಯಾಳುಗಳಾಗಿ ಸಿಕ್ಕಿಕೊಳ್ಳುವುದು, ಅವರನ್ನು ಬಿಡಿಸಲು ಸರ್ಕಾರಕ್ಕೆ ಬೇಡಿಕೆ ಇಡುವುದು, ಬೆಸ್ತರ ಕುಟುಂಬದ ಯಾತನೆಗಳ ಸತ್ಯಕತೆಯನ್ನು ಈ ನಾಟಕವನ್ನು ಹೊಂದಿದೆ. ಸೋಮಾಲಿಯಾ ಎಂಬ ನತದೃಷ್ಟ ದೇಶದ, ಯುವಕರ ಸ್ಥಿತಿಯನ್ನೂ ನಾಟಕ ಚಿತ್ರಿಸಿದೆ. ರಾಜ್‌ಗುರು ಹೊಸಕೋಟೆ ಈ ನಾಟಕ ರಚಿಸಿ, ನಿರ್ದೇಶಿಸಿದ್ದಾರೆ.

ಯಾವಾಗ?: ಡಿ.19, ಗುರುವಾರ, ಸಂ.7
ಎಲ್ಲಿ?: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ
ಸಂಪರ್ಕ: 99641 40723
ಪ್ರವೇಶ: 70 ರೂ.

ಬಾಯ್‌ ವಿತ್‌ ಎ ಸೂಟ್‌ಕೇಸ್‌: “ಬಾಯ್‌ ವಿತ್‌ ಎ ಸೂಟ್‌ಕೇಸ್‌’- ರಂಗಶಂಕರ ಹಾಗೂ ಜರ್ಮನಿಯ ರಂಗತಂಡ ಜಂಟಿಯಾಗಿ ನಿರ್ಮಿಸಿದ ನಾಟಕ. ಕೆಲವು ವರ್ಷಗಳ ಹಿಂದೆ ನೂರಾರು ಯಶಸ್ವಿ ಪ್ರದರ್ಶನಗಳನ್ನು ಕಂಡಿದ್ದ ಈ ನಾಟಕವನ್ನು, ರಂಗಶಂಕರವು ಮತ್ತೂಮ್ಮೆ ತೆರೆಯ ಮೇಲೆ ತಂದಿದೆ. ಮೈಕ್‌ ಕೆನ್ನಿ ರಚನೆಯ ಈ ನಾಟಕವನ್ನು, ಆ್ಯಂಡ್ರಿಯಾ ಗ್ರೊನೆಮಿಯರ್‌ ನಿರ್ದೇಶಿಸಿದ್ದಾರೆ. 12 ವರ್ಷದ ಅಕ್ರಮ ವಲಸಿಗ ಹುಡುಗನೊಬ್ಬನ ಕತೆ ಇದು. ತನ್ನ ಅಕ್ಕನನ್ನು ಹುಡುಕಿಕೊಂಡು ಯುದ್ಧಪೀಡಿತ ದೇಶದಿಂದ ಲಂಡನ್‌ಗೆ ಹೊರಡುವ ಆತನ ಬಳಿ ಒಂದೇ ಒಂದು ಸೂಟ್‌ಕೇಸ್‌ ಇರುತ್ತದೆ. ಆ ಪ್ರಯಾಣದಲ್ಲಿ ಅವನು ಎದುರಿಸುವ ಪರಿಸ್ಥಿತಿಯನ್ನು ನಾಟಕ ಕಟ್ಟಿ ಕೊಡಲಿದೆ. ಮುಖ್ಯ ಪಾತ್ರದಲ್ಲಿ ಬಿ.ವಿ.ಶೃಂಗ, ಎಂ.ಡಿ. ಪಲ್ಲವಿ ನಟಿಸಿದ್ದಾರೆ. ನಾಟಕಕ್ಕೆ, ಲೈವ್‌ ಸಂಗೀತ ಸಂಯೋಜನೆಯಿದೆ. ಟಿಕೆಟ್‌ಗಳು ರಂಗಶಂಕರ ಬಾಕ್ಸ್‌ ಆಫೀಸ್‌ ಮತ್ತು ಬುಕ್‌ವೆುಶೋನಲ್ಲಿ ಲಭ್ಯ.

ಎಲ್ಲಿ?: ರಂಗಶಂಕರ, 8ನೇ ಕ್ರಾಸ್‌, 2ನೇ ಹಂತ, ಜೆ.ಪಿ.ನಗರ
ಯಾವಾಗ?: ಡಿ.14, ಶನಿವಾರ, ಬೆಳಗ್ಗೆ 11
ಪ್ರವೇಶ: 300 ರೂ.

ಚಿಗರಿಗಂಗಳ ಚೆಲುವೆ: ತ.ರಾ.ಸು. ಅವರ “ಕಂಬನಿಯ ಕುಯಿಲು’ ಐತಿಹಾಸಿಕ ಕಾದಂಬರಿ ಆಧಾರಿತ ಚಿಗರಿಗಂಗಳ ಚೆಲುವೆ ನಾಟಕವನ್ನು, ಕಲಾವಿಲಾಸಿ ತಂಡವು ರಂಗದ ಮೇಲೆ ತಂದಿದೆ. ಸಿದ್ದರಾಮು ಕೆ.ಎಸ್‌. ಈ ನಾಟಕವನ್ನು ನಿರ್ದೇಶಿಸಿದ್ದಾರೆ. ಚಿತ್ರದುರ್ಗದ ದೊರೆ ಎರಡನೇ ಮದಕರಿ ನಾಯಕರ ಅಕಾಲ ಮರಣದ ನಂತರ, ಮುಂದಿನ ರಾಜಕುಮಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅರಮನೆಯವರ ಮತ್ತು ಸೇನೆಯವರ ನಡುವೆ ತಲೆದೋರುವ ಭಿನ್ನಾಭಿಪ್ರಾಯಗಳೇ ನಾಟಕದ ಪ್ರಮುಖ ವಸ್ತು. ನಾಟಕದ ಎರಡನೇ ಪ್ರದರ್ಶನವು ಭಾನುವಾರ ಆಯೋಜನೆಗೊಂಡಿದೆ.

ಯಾವಾಗ?: ಡಿ. 15, ಭಾನುವಾರ ಸಂಜೆ 7.30
ಎಲ್ಲಿ?: ಕೆ.ಎಚ್‌ ಕಲಾಸೌಧ, ರಾಮಾಂಜನೇಯ ಗುಡ್ಡ, ಹನುಮಂತನಗರ
ಟಿಕೆಟ್‌ ದರ: 100ರೂ.
ಹೆಚ್ಚಿನ ಮಾಹಿತಿಗೆ: 97393 98819

* ಅಭಿರುಚಿ ಚಂದ್ರು, ರಂಗ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next