Advertisement

ಮಾದರಿಗಳ ಹಂಗು ತೊರೆದು ಕಂಗೊಳಿಸಿದ ತ್ರೀ ರೋಸಸ್‌     

04:06 PM Dec 23, 2017 | |

ಅಭಿಜಾತ ಅಂಶಗಳನ್ನು ಒಳಗೊಂಡಿರುವುವುದು ಮಾತ್ರವೇ ನಾಟಕ ಎಂದುಕೊಂಡು ಕೆಲವು ಮಡಿವಂತರು ಇಂದಿಗೂ ಅದೇ ರೀತಿಯ ಪ್ರಯೋಗಗಳಿಗೆ ತೊಡಗುತ್ತಿದ್ದಾರೆ. ಉತ್ತಮ ನಾಟಕ ಎನ್ನುವುದು ಅದರ ಪಾತ್ರ ಸನ್ನಿವೇಶಗಳಲ್ಲಿ ಹಳತು ಅನಿಸಬಹುದು ಅಷ್ಟೆ; ಆದರೆ, ಅದರ ಆಶಯಗಳು ಸಾರ್ವತ್ರಿಕ ಎಂದು ಹಠಕ್ಕೆ ಬೀಳುವವರೂ ಇದ್ದಾರೆ. ಮತ್ತೂಂದೆಡೆ ಬೇರೆ ವಾದ ಆರಂಭವಾಗಿದೆ. ಇಂದು ಜನ ಜೀವನದ ಮಾದರಿ ಬದಲಾಗಿದೆ. ಸ್ಪಂದನೆ ಬದಲಾಗಿದೆ. ನೋಟಕ್ರಮ ಬದಲಾಗಿದೆ. ಅಷ್ಟೆಲ್ಲ ಆಳವಾಗಿ ಅರ್ಥೈಸಿಕೊಳ್ಳುವ ವ್ಯವಧಾನವೂ ಇಲ್ಲವಾಗಿದೆ. ಹಾಗಾಗಿ, ನಾಟಕದ ಆರ್ಟ್‌ ಫಾರಂ ಅನ್ನೂ ಒಂದು ಲೈಟ್‌ ಟೋನ್‌ನಲ್ಲಿ ಕಟ್ಟಿಕೊಟ್ಟು ರಂಜಿಸಿದರೆ ಸಾಕು ಎನ್ನುವವರ ಆಶಯಗಳಿಗೆ ಕೆಲವು ನಾಟಕ ತಂಡಗಳೂ ಬದ್ಧವಾಗಿವೆ.

Advertisement

ಆದರೆ, ಎರಡನೇ ವಾದಕ್ಕೆ ಕಿವಿಗೊಡುವವರಲ್ಲಿ ಚೂರು ಅಳುಕೂ ಇದೆ. ರಂಜನೆಯ ಗುರಿ ಇರಿಸಿಕೊಂಡು ಮುಂದುವರಿದರೆ ಎಲ್ಲಿ ತಮ್ಮ ಪ್ರಯೋಗಗಳನ್ನು ಕಲಾತ್ಮಕ ನಾಟಕಗಳ ಚುಕ್ಕಾಣಿ ಹಿಡಿದಿರುವವರು ತಿರಸ್ಕರಿಸಿ ವ್ಯಂಗ್ಯವಾಡುತ್ತಾರೋ ಎಂದು ಸಂದೇಹಿಸುತ್ತಲೇ ದ್ವಂದ್ವಕ್ಕೆ ಬೀಳುತ್ತಿದ್ದಾರೆ.

ಆದರೆ, ಈಚೆಗೆ ಹೊಸ ತಂಡವೊಂದು ಉದಯವಾಗಿದೆ. ತಕ್ಷ ಥಿಯೇಟ್ರಿಕ್ಸ್‌ ಅದರ ಹೆಸರು. ಈ ತಂಡದ ನಟರಿಗೆ ರಂಗದ ಮೇಲೆ ಅಭಿನಯಿಸುವ ಇರಾದೆ ಇದೆ, ಅದನ್ನು ಗೀಳು ಅಂತಲೂ ಅನ್ನಬಹುದು. ಆದರೆ, ಮೇಲಿನ ವಾದಗಳಲ್ಲಿ ಎಂದೂ ಜೀಕಬೇಕು ಅನಿಸಿಲ್ಲ. ಅದರ ಗೊಡವೆಗೂ ಹೋಗಿಲ್ಲ. ರಂಗಕರ್ಮಿಗಳು ಎತ್ತಬಹುದಾದ ಕೊಂಕು, ಚಕಾರಗಳನ್ನು ಈ ತಂಡದವರು ತಲೆಯಲ್ಲಿ ಇರಿಸಿಕೊಂಡೇ ಇಲ್ಲ. ಪ್ರಾಯಶಃ ಆ ತೆರನಾದ ವಾದಗಳಿಗೆ ಕಿವಿಗೊಡದ ದೂರದ ಸುರಕ್ಷಿತ ವಲಯದಲ್ಲಿ ಈ ತಂಡದ ಪ್ರತಿಯೊಬ್ಬರೂ ಇದ್ದಂತಿದೆ, ಅಥವಾ ಇದ್ದಾರೆ.

ಇದರ ಪರಿಣಾಮವು ತû… ಥಿಯೇಟ್ರಿಕ್ಸ್‌ ತಂಡ ಈಚೆಗೆ ಎಂ.ಜಿ. ರಸ್ತೆಯ ಮೆಟ್ರೋ ರಂಗೋಲಿ ಕೇಂದ್ರದಲ್ಲಿ ಪ್ರದರ್ಶಿಸಿದ “ತ್ರೀ ರೋಸಸ್‌’ ನಾಟಕದಲ್ಲಿ ಕಂಡಿತು. ತಂಡದ ಪ್ರತಿಯೊಬ್ಬರನ್ನು ಗಮನಿಸಿದರೆ ಎಲ್ಲರೂ ಹೊಸ ಕಾಲಮಾನಕ್ಕೆ ತೆರೆದುಕೊಂಡ ಹುಡುಗ ಹುಡುಗಿಯರು. ಇದು ಹವ್ಯಾಸಿ ತಂಡವಾಗಿರುವ ಕಾರಣ ಹೊಸ ಸವಾಲಿನ ಹುದ್ದೆಗಳಿಗೆ ತೆರೆದುಕೊಂಡಿರುವವರು. ಇವರಿಗೆ ನಾಟ್ಯಶಾಸ್ತ್ರ ಎಂಬುದು ದಿಕ್ಸೂಚಿ ಅನಿಸಿಲ್ಲ. ಕಲೆ ಎಂದರೆ ಸಲ್ಲದ ಗಾಂಭೀರ್ಯ ತಂದುಕೊಡಬೇಕೆನ್ನುವ ಹುಸಿ ಧಿಮಾಕೂ ಇವರಲಿಲ್ಲ. ಭಾಷೆಯ ವಿಚಾರದಲ್ಲೂ ಮಡಿವಂತಿಕೆ ಇರಿಸಿಕೊಳ್ಳಬೇಕೆನಿಸಿಲ್ಲ. ವಿಮರ್ಶಕರನ್ನು ಮನಸ್ಸಿನಲ್ಲಿಟ್ಟುಕೊಂಡಿಲ್ಲ. ಬಹುಶಃ ಈ ರೂಢಿ ಕ್ರಮದ ಬಗ್ಗೆಯೂ ತಿಳಿದಂತಿಲ್ಲ.

ಭಾಷೆ ಎನ್ನುವುದು ಇಂದಿನದರ ಮಿಡಿತದಂತಿರಬೇಕು ಎಂದುಕೊಂಡು ಅದಕ್ಕೊಂದು ಸರಳ ಪ್ರೇಮಕಥಾನಕ ಹೆಣೆದಿದ್ದಾರೆ. ಇಲ್ಲಿ ತ್ರಿರೋಸಸ್‌ ಎಂದರೆ ಮೂರು ಪ್ರೇಮಿಗಳು ಮತ್ತು ಅವರುಗಳ ಪ್ರೇಮದ ಸಂಕೇತ. ಮತ್ತೂಬ್ಬರ ಪ್ರೇಮವಿಚಾರದಲ್ಲಿ ಮೂರನೇ ವ್ಯಕ್ತಿಯೊಬ್ಬ ಪ್ರವೇಶಿಸಿದರೆ ಏನೇನಾಗುತ್ತದೆ ಎನ್ನುವುದು ಇಲ್ಲಿರುವ ಒನ್‌ಲೈನ್‌ ಸ್ಟೋರಿ. ಇದಕ್ಕೆ ಹಿನ್ನೆಲೆಯಾಗಿ ಒಂದು ಕಾಲ್‌ ಸೆಂಟರ್‌ ಇದೆ. ಅದರಲ್ಲಿನ ಕೆಲಸಗಳ ಕ್ರಮದ ವಿವರಗಳು ಇದೆ. ಇದರೊಳಗೇ ಪ್ರೇಮದ ಕಥಾನಕವೂ ಅಡಕವಾಗಿದೆ.

Advertisement

ನಿರ್ದೇಶಕ ಅಕ್ಷಯ್‌ ಕಾರ್ತಿಕ್‌ ಮೊದಲಿಂದ ಕಡೆಯವರೆಗೆ ಕ್ಲಾಸಿಸಿಸಂನ ನೆರಳಿಗೆ ಸರಿದುಹೋಗಲಿಕ್ಕೆ ತಮ್ಮ ನಾಟಕವನ್ನು ಬಿಟ್ಟಿಲ್ಲ. ಪ್ರೇಮದ ಹೊಸ ಪರಿಭಾಷೆಯನ್ನು ನಾಟಕದಲ್ಲಿ ತಂದಿದ್ದಾರೆ. ಹಾಗೆಯೇ ಭರಪೂರ ನಗಿಸಿದ್ದಾರೆ. ಇಂದಿನ ವಸ್ತುಸ್ಥಿತಿ ಹೇಗಿದೆ ಎನ್ನುವುದನ್ನು ಪ್ರತಿ ಸನ್ನಿವೇಶದಲ್ಲಿ ಕಾಣಿಸಿದ್ದಾರೆ. ಕತೆಯಲ್ಲಿ ಗೋಜಲುಗಳಿಲ್ಲ. ಆದರೆ, ತೀರಾ ಸಂಪ್ರದಾಯಬದ್ಧ ನಾಟಕಗಳನ್ನು ನೋಡಿರುವವರಿಗೆ “ತ್ರಿ ರೋಸಸ್‌’ ನಾಟಕದ ಆರಂಭ ಚೂರು ಸಡಿಲ ಅನಿಸಬಹುದು. ವಾಚ್ಯ ಮೀರಬೇಕು ಎಂದು ವಾದಿಸುವವರು ಆರಂಭದಲ್ಲಿ ವಿವರಣೆ ಹೆಚ್ಚಾಯಿತು ಎನ್ನಬಹುದು. ಒಂದು ತಾಜಾ ಪ್ರೇಮಕಥಾನಕ ಇಂದಿನ ಕಂಗ್ಲಿಷ್‌ ಭಾಷೆಯಲ್ಲಿ ಅನಾವರಣಗೊಳ್ಳುವ ಪರಿ ಚೆಂದ. ಹುಡುಗರ ಅಭಿನಯ ಚೇತೋಹಾರಿ. ಹೆಣ್ಣುಮಕ್ಕಳಲ್ಲಿ ಇಂದಿನ ಸ್ಟೈಲಿಶ್‌ ಝಲಕ್‌ಗಳಿದ್ದವು. ಇಷ್ಟಾಗಿಯೂ ಈ ನಾಟಕ ಕೆಲವು ಕಡೆ ಚೂರು ಲಂಬಿಸಿದಂತೆ ಅನಿಸಿತು. ಮತ್ತೂಂದಿಷ್ಟು ಸಂಕಲಿಸಿ ಹುರಿಕಟ್ಟಿದರೆ ಮೂರು ಗುಲಾಬಿಗಳು ಮತ್ತಷ್ಟು ಚೆಂದ ಕಾಣುವುದರಲ್ಲಿ ಅನುಮಾನವಿಲ್ಲ.

ಎನ್‌.ಸಿ. ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next