Advertisement

ಆಮೆಗತಿಯಲ್ಲಿ ಒಳಚರಂಡಿ ಕಾಮಗಾರಿ; ಸಂಚಾರ ಸಂಕಷ್ಟ

08:16 AM Sep 16, 2020 | mahesh |

ಮಹಾನಗರ: ಕೋವಿಡ್ ಕಾರಣದಿಂದಾಗಿ ನಗರದ ಅನೇಕ ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ಮಂದಗತಿಯಲ್ಲಿ ನಡೆಯುತ್ತಿವೆ. ಅದರಲ್ಲೂ ನಗರದ ಪಾಂಡೇಶ್ವರ- ಮಂಗಳಾದೇವಿ ರಸ್ತೆಯಲ್ಲಿ ತಿಂಗಳ ಹಿಂದೆ ಒಳಚರಂಡಿ ನಿರ್ಮಾಣಕ್ಕೆ ರಸ್ತೆ ಅಗೆಯಲಾಗಿದ್ದು, ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ಅಪೂರ್ಣ ಕಾಮಗಾರಿಯಿಂದ ಈ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ. ಇನ್ನು ಸ್ಥಳೀಯರಿಗೆ, ಸಾರ್ವಜನಿಕರಿಗೆ ಅಂಗಡಿ ಮಾಲಕರಿಗೆ ಇದರಿಂದ ತೊಂದರೆಯಾಗುತ್ತಿದೆ.

Advertisement

ಸ್ಮಾರ್ಟ್‌ಸಿಟಿ ಯೋಜನೆಯಡಿ ಕಾಮಗಾರಿ
ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಪಾಂಡೇಶ್ವರ- ಮಂಗಳಾದೇವಿ-ಮಾರ್ಗನ್ಸ್‌ಗೆಟ್‌ ಸಂಪರ್ಕ ರಸ್ತೆ ಇದಾಗಿದೆ. ಈ ಹಿಂದೆ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದಾಗಿ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿತ್ತು. ಇದೇ ಕಾರಣಕ್ಕೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಒಳಚರಂಡಿ ಕಾಮಗಾರಿ ಆರಂಭಗೊಂಡಿದೆ. ಬೆರಳೆಣಿಕೆಯ ಮಂದಿ ಕೆಲಸ ಮಾಡುತ್ತಿದೆ. ಸ್ಥಳದಲ್ಲಿ ಒಂದು ಜೆಸಿಬಿ ಮಾತ್ರ ಇದೆ. ಕಾಮಗಾರಿಗೆಂದು ಪಾಂಡೇಶ್ವರ ಕಟ್ಟೆಯಿಂದ ಸುಮಾರು 400 ಮೀ. ನಷ್ಟು ರಸ್ತೆ ಅಗೆಯಲಾಗಿದೆ. ಇದೇ ಕಾರಣದಿಂದಾಗಿ ಈ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.

ಟ್ರಾಫಿಕ್‌ ಜಾಮ್‌ ಸಮಸ್ಯೆ
ರಾಷ್ಟ್ರೀಯ ಹೆದ್ದಾರಿ ಮುಖೇನ ಪ್ರವೇಶಿಸಲು ಕೆಲವು ವಾಹನ ಸವಾರರು ಇದೇ ರಸ್ತೆಯ ಪ್ರಯೋಜನ ಪಡೆಯುತ್ತಾರೆ. ಇದೀಗ ರಸ್ತೆ ಕಾಮಗಾರಿಯಿಂದಾಗಿ ಬೆಳಗ್ಗೆ ಮತ್ತು ಸಂಜೆ ವೇಳೆ ಈ ರಸ್ತೆಯಲ್ಲಿ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

ಶೌಚಾಲಯದಿಂದ ಗಲೀಜು ನೀರು ರಸ್ತೆಗೆ
ಪಾಂಡೇಶ್ವರ ಕಟ್ಟೆ ಬಳಿ ಒಂದೆಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದರೆ, ಪಕ್ಕದಲ್ಲಿಯೇ ಚರಂಡಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಸುತ್ತಮುತ್ತಲ ಪ್ರದೇಶ ಗಬ್ಬು ನಾರುತ್ತಿದೆ. ಕಾಂಕ್ರೀಟ್‌ ರಸ್ತೆಯಲ್ಲಿ ಇರುವ ಮ್ಯಾನ್‌ಹೋಲ್‌ನಿಂದ ಅನೇಕ ದಿನಗಳಿಂದ ಕೊಳಚೆ ನೀರು ಸೋರಿಕೆಯಾಗಿ ಹತ್ತಿರ ಇರುವ ನಿರುಪಯುಕ್ತ ಶೌಚಾಲಯವನ್ನು ಸೇರುತ್ತಿದೆ. ಅನೇಕ ವರ್ಷಗಳಿಂದ ಈ ಶೌಚಾಲಯ ಪಾಳು ಬಿದ್ದಿದ್ದು, ಶೌಚಾಲಯದ ತುಂಬ ಕೊಳಚೆ ನೀರು ತುಂಬಿಕೊಂಡು ರಸ್ತೆಯಲ್ಲಿ ಹರಿಯುತ್ತಿದೆ. ಸಂಜೆಯಾದರೆ ಸುತ್ತಮುತ್ತ ಸೊಳ್ಳೆ ಕಾಟ ಹೆಚ್ಚಾಗಿದ್ದು, ರೋಗದ ಭೀತಿ ಎದುರಾಗಿದೆ ಎನ್ನುತ್ತಾರೆ ಸ್ಥಳೀಯರು.

ಒಂದು ತಿಂಗಳಲ್ಲಿ ಪೂರ್ಣ
ನಗರದ ಅನೇಕ ಕಡೆಗಳಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಅದರಂತೆ ಪಾಂಡೇಶ್ವರದಿಂದ ಮಂಗಳಾದೇವಿ ರಸ್ತೆಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಕಾಮಗಾರಿ ಆರಂಭವಾಗಿ ಈಗಾಗಲೇ ಸುಮಾರು ಒಂದು ತಿಂಗಳು ಕಳೆದಿದೆ. ಸದ್ಯ ಕಾಮಗಾರಿ ಅಂತಿಮ ಹಂತದಲ್ಲಿದೆ. ಇನ್ನು ಸುಮಾರು ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ.
-ದಿವಾಕರ್‌ ಪಾಂಡೇಶ್ವರ, ಮೇಯರ್‌

Advertisement

ಟ್ರಾಫಿಕ್‌ ಜಾಮ್‌ ಕಿರಿ ಕಿರಿ
ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲಿ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡ ಲಾಗಿದೆ. ಇದರಿಂದಾಗಿ ಬೆಳಗ್ಗೆ ಮತ್ತು ಸಂಜೆ ವೇಳೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.
-ನಿತಿನ್‌ ಕುಮಾರ್‌, ವಾಹನ ಸವಾರ

Advertisement

Udayavani is now on Telegram. Click here to join our channel and stay updated with the latest news.

Next