ಹುಳಿಯಾರು: ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಸ್ಟೇಷನ್ ಹಿಂಭಾಗದ ತೊರೆಸೂರಗೊಂಡನಹಳ್ಳಿ ರಸ್ತೆಯ ಮೇಲೆ ಚರಂಡಿ ಹರಿಯುತ್ತಿದ್ದರಿಂದ ಈ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಶನಿವಾರ ಬೆಳಗ್ಗೆ ಜರುಗಿದೆ.
ಗ್ರಾಮದ ಏಳೆಂಟು ಮನೆಯ ಬಚ್ಚಲು ನೀರನ್ನು ರಸ್ತೆಗೆ ಹರಿಯಲು ಬಿಟ್ಟಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಕೊಳಚೆ ನೀರಿನಿಂದ ಈ ಮಾರ್ಗದಲ್ಲಿ ತಿರುಗಾಡುವ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ನಿತ್ಯ ಚರಂಡಿ ನೀರು ಹರಿಯುತ್ತಿರುವುದರಿಂದ ಗುಂಡಿಗಳು ಬಿದ್ದಿದೆ. ಈ ಗುಂಡಿಗಳಲ್ಲಿ ಕೊಳಚೆ ನೀರು ನಿಂತು ದಾರಿಹೋಕರಿಗೆ ಕಿರಿಕಿರಿ ತಂದೊಡ್ಡಿದ್ದೆ ಎಂಬುದು ಪ್ರತಿಭಟನಾ ನಿರತರ ಆರೋಪವಾಗಿದೆ.
ದುರ್ನಾತ ಬೀರುವ ಚರಂಡಿ: ರಸ್ತೆ ತುಂಬಾ ಚರಂಡಿ ನೀರು ಹರಿಯುತ್ತಿರುವುದರಿಂದ ಸ್ನಾನ ಮಾಡಿ ಶುಭ್ರವಾಗಿ ಬರುವವರು ಕೊಳಚೆ ನೀರು ಸಿಡಿಯುವ ಭಯದಿಂದ ಸಂದಿಗೊಂದಿಯಲ್ಲಿ ಓಡಾಡುವಂತಾಗಿದೆ. ಪಾದಚಾರಿಗಳು ಬರುವ ವೇಳೆಯಲ್ಲೇ ಬೈಕ್‌ನವರು ಬಂದು ಚರಂಡಿ ನೀರು ಸಿಡಿದ ನಿದರ್ಶನ ಅನೇಕವಿದೆ. ಅಲ್ಲದೇ ಇಲ್ಲಿನ ವಾಸಿಸುವವರಿಗೆ ದುರ್ನಾತ ಬೀರುವ ಜೊತೆಗೆ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಕಾಡುತ್ತಿದೆ ಎಂದು ದೂರಿದರು.
ಉಗ್ರ ಪ್ರತಿಭಟನೆ ಎಚ್ಚರಿಕೆ: ಈ ಬಗ್ಗೆ ನೂರಾರು ಬಾರಿ ಪಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹುಳಿಯಾರಿನಲ್ಲಿ ಎಸಿಬಿ ಅಧಿಕಾರಿಗಳು ಸಭೆ ನಡೆಸಿದ ಸಂದರ್ಭದಲ್ಲಿ ಈ ಬಗ್ಗೆ ದೂರು ನೀಡಲಾಗಿದೆ. ಆದರೆ, ರಸ್ತೆಗೆೆ ನೀರು ಹರಿಯ ಬಿಟ್ಟಿರುವವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಪಪಂ ಎಚ್ಚೆತ್ತುಕೊಂಡು ಚರಂಡಿ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ನಿವೃತ್ತ ಸರ್ಕಾರ ನೌಕರ ಹನುಮಂತಪ್ಪ ಅವರ ಮನೆಯ ಬಚ್ಚಲು ನೀರು ರಸ್ತೆಗೆ ಹರಿಯುತ್ತಿದೆ. 52 ಲಕ್ಷ ರೂ. ವೆಚ್ಚದಲ್ಲಿ ಐದಾರು ಮನೆ ಮಾಡಿ ಬಾಡಿಗೆ ಕೊಟ್ಟಿದ್ದಾರೆ. ಆದರೆ, ಹತ್ತಿಪ್ಪತ್ತು ಸಾವಿರ ರೂ. ಖರ್ಚು ಮಾಡಿ ಇಂಗು ಗುಂಡಿ ಮಾಡಿಕೊಂಡಿದ್ದರೆ ಬಚ್ಚಲು ನೀರು ರಸ್ತೆಗೆ ಅರಿಯದೆ ಗುಂಡಿಯಲ್ಲಿ ಇಂಗುತ್ತಿತ್ತು. ಈ ಬಗ್ಗೆ ಅವರು ಮತ್ತು ಅವರ ಮಗನಿಗೆ ತಿಳಿ ಹೇಳಿದರೂ ಕೇಳುತ್ತಿಲ್ಲ. ಹಾಗಾಗಿ ಈ ರಸ್ತೆಯಲ್ಲಿ ಓಡಾಡುವವರು ಚರಂಡಿ ನೀರು ತುಳಿದುಕೊಂಡು ಓಡಾಡಲೇಬೇಕಾದ ಅನಿವಾರ್ಯ ಕರ್ಮ ಸೃಷ್ಟಿಯಾಗಿದೆ.
-ಪ್ರಸನ್ನ ಕುಮಾರ್, ಬೈಕ್ ಸವಾರ, ಹುಳಿಯಾರು
ಬಚ್ಚಲು ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ನಿತ್ಯ ನೂರಾರು ಜನರಿಗೆ ತೊಂದರೆಯಾಗಿದೆ ಎಂದು ಪಪಂ ಅಧ್ಯಕ್ಷರು, ಮುಖ್ಯಾಧಿಕಾರಿ ಅವರಿಗೆ ಸಾಕಷ್ಟು ಬಾರಿ ಮೌಖೀಕ ಮತ್ತು ಲಿಖೀತ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪಪಂ ಅಧ್ಯಕ್ಷರು ಇದೇ ರಸ್ತೆ ಮೂಲಕವೇ ತಮ್ಮ ತೋಟಕ್ಕೆ ಹೋಗಬೇಕಿದೆ. ಆದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ತಕ್ಷಣ ಈ ಸಮಸ್ಯೆ ಪರಿಹರಿಸದಿದ್ದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ.
-ವಿವೇಕಾನಂದ, ಇಲ್ಲಿನ ನಿವಾಸಿ, ಹುಳಿಯಾರು.