ಗುರುಮಠಕಲ್: ಕುಡಿಯುವ ನೀರಿನ ಸಮಸ್ಯೆ ಮೇದಕ ಜನರಿಗೆ ಸದ್ಯ ಬಿಡುವಂತೆ ಕಾಣುತ್ತಿಲ್ಲ. ಗ್ರಾಮಕ್ಕೆ ಚರಂಡಿ ನೀರನ್ನೇ ಪೂರೈಕೆ ಮಾಡೋದು ಎಂಬ ಹಠಕ್ಕೆ ಬಿದ್ದಂತಿರುವ ಗ್ರಾಪಂನವರು ಜನರಿಗೆ ಕೊಳಕು ನೀರನ್ನೇ ಕುಡಿಸುತ್ತಿದ್ದಾರೆ.
ಗ್ರಾಮೀಣ ಭಾಗಕ್ಕೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಸರಕಾರಗಳು ಒಂದಷ್ಟು ಯೋಜನೆಗಳು ಅನುಷ್ಠಾನಗೊಳಿಸುತ್ತಲೆ ಇವೆ. ಆದರೆ, ಮೇದಕ ಗ್ರಾಮದ ಜನರ ಪಾಲಿಗಿದು ಕನಸು. ಏಕೆಂದರೆ ನೀರು ಬಂದರೂ ಕೊಳಚೆ ನೀರು. ಈ ಸಮಸ್ಯೆಗೆ ಯಾವಾಗ ಮುಕ್ತಿ ಸಿಗುತ್ತದೋ ಎಂದು ಸ್ಥಳೀಯರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಬೋರ್‌ವೆಲ್ ಬಳಿಯ ಕಬ್ಬಿಣದ ಪೈಪ್‌ಗ್ಳು ತುಕ್ಕು ಹಿಡಿದು ಚರಂಡಿ ನೀರು ಅದರಲ್ಲಿ ಸೋರುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮಾತ್ರ ಗಾಢ ನಿದ್ರೆಗೆ ಜಾರಿದಂತಿದೆ. ಕುಡಿಯುವ ನೀರಿನಲ್ಲಿ ಚರಂಡಿ ನೀರು ಹರಿದು ಸಂಗ್ರಹವಾಗುತ್ತಿದೆ. ಪ್ರತಿ ಮನೆಗೂ ಇದು ಸರಬರಾಜಾಗುತ್ತಿದೆ. ಆ ಕೊಳಕು ನೀರನ್ನೇ ನಿತ್ಯ ಕುಡಿದು ಜನ ತಣ್ಣಗಿದ್ದಾರೆ. ಬೋರ್‌ವೆಲ್ ಬಳಿಯ ಕಬ್ಬಿಣದ ಪೈಪ್‌ಗ್ಳು ತುಕ್ಕು ಹಿಡಿದು ನೀರು ಸೋರಿಕೆ ಆಗುತ್ತಿದೆ. ಹೀಗೆ ಸೋರಿಕೆ ಆಗುವ ನೀರು ಚರಂಡಿಯಲ್ಲಿ ಸಂಗ್ರಹಗೊಂಡು ಕೊಳಚೆ ನಿರ್ಮಾಣವಾಗಿದೆ.
ಗ್ರಾ.ಪಂ. ಸಿಬ್ಬಂದಿ ರಿಪೇರಿ ಮಾಡುವ ಬದಲು ತೇಪೆ ಹಾಕುವ ಕೆಲಸ ಮಾಡಿದ್ದಾರೆ. ಸೋರಿಕೆಗೆ ಪ್ಲಾಸ್ಟಿಕ್ ತೇಪೆ ಹಚ್ಚಿದ್ದಾರೆ. ಅದರಿಂದ ಬೋರ್ ನೀರು ಮತ್ತು ಕೊಳಚೆ ನೀರು ಸೇರಿಕೊಂಡು ಅದು ನೇರ ಮನೆಯ ಕುಡಿಯುವ ನೀರಿಗೆ ಸೇರಿಕೊಳ್ಳುತ್ತಿದೆ. ಈಗ ಕೊಳಚೆ ನಿರ್ಮಾಣಗೊಂಡು ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿದೆ. ಎತ್ತು ಮತ್ತು ಹಂದಿಗಳು ಬಿದ್ದು ಒದ್ದಾಡುತ್ತವೆ. ಗ್ರಾಪಂ ತಕ್ಷಣ ಕೊಳಚೆ ನೀರು ನಿಲ್ಲದಂತೆ ಮಾಡಬೇಕು ಎಂಬುದು ನಾಗರಿಕರ ಒತ್ತಾಯವಾಗಿದೆ.
ಗ್ರಾಪಂ ಸದಸ್ಯರ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಎನ್ನುತ್ತಿಲ್ಲ. ಬೋರ್‌ವೆಲ್ ಬಳಿ ಪೈಪ್‌ಗ್ಳು ಸೋರಲು ಪ್ರಾರಂಭವಾಗಿ ತಿಂಗಳೇ ಕಳೆದಿದೆ. ಈ ಗುಂಡಿಯಲ್ಲಿ ನಿಂತ ನೀರೂ ಸೇರಿ ಗ್ರಾಮಕ್ಕೆ ಸರಬರಾಜು ಆಗುತ್ತಿದೆ.
-ಕೇಶಪ್ಪ ತುಪುಡು, ಮೇದಕ ಗ್ರಾಮಸ್ಥ
ಬೋರ್‌ವೆಲ್ ಬಳಿಯ ಕಬ್ಬಿಣದ ಪೈಪ್‌ಗ್ಳು ತುಕ್ಕು ಹಿಡಿದು ನೀರು ಸರಬರಾಜಾಗುತ್ತಿರುವ ಮಾಹಿತಿ ಇರಲಿಲ್ಲ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಕೊಳಚೆ ನೀರು ಮನೆಗಳಿಗೆ ಹೋಗುತ್ತಿದ್ದರೆ ಸರಿಪಡಿಸಲಾಗುವುದು. ಜನತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು.
-ರಾಮಪ್ಪ, ಪಿಡಿಒ ಮೇದಕ್