Advertisement

ಕುಂಜತ್ತಬೈಲ್‌ ಒಳಚರಂಡಿ ಸಮಸ್ಯೆ: ಬಾವಿ ನೀರು ಮಲಿನ

04:55 AM May 24, 2018 | Team Udayavani |

ಕಾವೂರು: ಮನಪಾ ವ್ಯಾಪ್ತಿಯ ಕುಂಜತ್ತಬೈಲ್‌ ಕುಳ ಭಾಗದಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆಯಿಂದಾಗಿ ತಗ್ಗು ಪ್ರದೇಶದ ಬಾವಿಗಳಿಗೆ ಮಲಿನ ನೀರು ಹರಿದು ಕುಡಿಯುವ ನೀರಿನ ಮೂಲ ಹಾಳಾಗುತ್ತಿದೆ. ಮಳೆ ನೀರು ಹರಿಯುವ ಸಣ್ಣ ತೋಡಿ ನಲ್ಲೇ ತ್ಯಾಜ್ಯ ನೀರು ಹರಿಯುತ್ತಿದೆ. ತಗ್ಗು ಪ್ರದೇಶದಲ್ಲಿ ಅಲ್ಲಲ್ಲಿ ನಿಲ್ಲುವ ಕಾರಣ ಸೊಳ್ಳೆ ಗಳ ಉತ್ಪತ್ತಿಯ ತಾಣವಾಗಿದೆ. ಶುಚಿತ್ವದ ಕೊರತೆಯಿಂದಾಗಿ ಜ್ವರ ಸಹಿತ ಆರೋಗ್ಯ ಏರುಪೇರಿಗೆ ಕಾರಣವಾಗುತ್ತಿದೆ.

Advertisement

ಚರಂಡಿಗೆ ಜಾಗವಿಲ್ಲ 
ರಸ್ತೆಯಲ್ಲಿಯೇ ಹರಿಯುವ ನೀರು, ನಡೆದಾಡುವ ಮೆಟ್ಟಿಲಿನಲ್ಲಿ ಒಸರುವ ಮಲಿನ ನೀರು, ಜತೆಗೆ ದುರ್ವಾಸನೆ. ಇದು ಕುಂಜತ್ತಬೈಲ್‌ ಕುಳ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ದೃಶ್ಯ. ಇದು ಭೌಗೋಳಿಕವಾಗಿ ಗುಡ್ಡ ಹಾಗೂ ತಗ್ಗು ಪ್ರದೇಶಹೊಂದಿದ್ದು, ವಲಸೆ ಕಾರ್ಮಿಕರ ವಸತಿ ಪ್ರದೇಶವಾಗಿದ್ದು, ಎಲ್ಲೆಂದರಲ್ಲಿ ಮನೆ ನಿರ್ಮಾಣದಿಂದ ಚರಂಡಿ ನಿರ್ಮಾಣಕ್ಕೂ ಇಲ್ಲಿ ಜಾಗವಿಲ್ಲ ಎಂಬಂತಾಗಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ . ಹಕ್ಕು ಪತ್ರ ಪಡೆದು ಗುಡ್ಡ ಪ್ರದೇಶದಲ್ಲಿ ವಾಸಿಸುವ ನಿವಾಸಗಳಿಗೆ ಒಳಚರಂಡಿ ವ್ಯವಸ್ಥೆ ಒಂದು ಸವಾಲೇ ಸರಿ. ಶೇ. 50ರಷ್ಟು ಈ ಭಾಗದಲ್ಲಿ ವಾಸಿಸುವರು ದೂರದ ಕೇರಳ, ತಮಿಳು ನಾಡು, ಉತ್ತರ ಕರ್ನಾಟಕದ ವಲಸಿಗರು. ಇನ್ನು ಸಣ್ಣ ಸಣ್ಣ ಮನೆಗಳಲ್ಲಿ ಬಾಡಿಗೆ ನೀಡುವ ವ್ಯವಹಾರ ಈ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದೆ.

ಪಾಲಿಕೆ ಕ್ರಮ ಕೈಗೊಂಡಿಲ್ಲ
ಕುಳ ಭಾಗದಲ್ಲಿ ಗುಡ್ಡ ಪ್ರದೇಶದಲ್ಲಿ ವಾಸಿಸುವವರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಮೇಲಿನಿಂದ ಬರುವ ಮಲಿನ ನೀರು ಒಂದೇ ಕಡೆಗೆ ತೋಡಿನ ಮೂಲಕ ಹರಿಯಬಿಡಲಾಗಿದೆ. ಇದರಿಂದ ಮಾರುತಿ ಬಡಾವಣೆಯ ಬಾವಿಗಳು ಕಲುಷಿತಗೊಂಡಿದ್ದು, ಕುಡಿಯಲು ಅಯೋಗ್ಯವಾಗಿದೆ. ಮುಂದೆ ನೀರು ಹರಿದು ಹೋಗಲು ವ್ಯವಸ್ಥೆಯಿಲ್ಲದೆ ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬೀರು ತ್ತಿದೆ. ಸೊಳ್ಳೆಗಳು ವಿಪರೀತವಾಗಿವೆೆ. ಆದ್ದರಿಂದ ಈ ಭಾಗದಲ್ಲಿ ಒಳಚರಂಡಿ ಅಗತ್ಯ ವಾಗಿದೆ. ಸದ್ಯಕ್ಕೆ ನಾಲ್ಕು ಭಾಗಗಳಲ್ಲೂ ಸಮಾನಾಂತರವಾಗಿ ತೋಡು ಮಾಡಿ ಹರಿಯಲು ವ್ಯವಸ್ಥೆ ಮಾಡಿದರೆ ಒಂದೇ ಪ್ರದೇಶ ತ್ಯಾಜ್ಯ ನೀರಿನಿಂದ ಸಮಸ್ಯೆ ಎದುರಿಸುವುದು ತಪ್ಪುತ್ತದೆ. ಈ ಬಗ್ಗೆ ಮನವಿ ಮಾಡಿದ್ದರೂ ಪಾಲಿಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ದಯಾನಂದ ಶೆಟ್ಟಿ, ಕುಳ, ಕುಂಜತ್ತಬೈಲ್‌ ದೂರಿದ್ದಾರೆ.

ಹಾಸುಗಲ್ಲಿನಿಂದಾಗಿ ಒಳಚರಂಡಿ ನಿರ್ಮಾಣ ಕಷ್ಟ
ದೇವಿನಗರ, ಜ್ಯೋತಿನಗರದಂತಹ ಎತ್ತರ ಪ್ರದೇಶದಲ್ಲಿ ಗಟ್ಟಿಯಾದ ಹಾಸುಗಲ್ಲು (ಸೋಮನಾಥ ಪಾದೆ) ಇರುವುದರಿಂದ ಒಳಚರಂಡಿ ನಿರ್ಮಾಣ ಕಷ್ಟ. ಇನ್ನೊಂದೆಡೆ ಮೂರ್‍ನಾಲ್ಕು ಅಡಿ ರಸ್ತೆ ಮಾತ್ರ ಇರುವುದರಿಂದ ಲಾರಿಗಳ ಓಡಾಟ ಕಷ್ಟಕರ. ಇಲ್ಲಿನ ಭಾಗದ ಒಳಚರಂಡಿ ವ್ಯವಸ್ಥೆಗೆ ವೆಟ್‌ ವೆಲ್‌ ನಿರ್ಮಾಣ ಮಾಡಲು ಜಾಗ ಗುರುತಿಸಲಾಗಿದೆ. ಸಾಧ್ಯವಾದ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಯನ್ನು ಹಣಕಾಸಿನ ಸೌಲಭ್ಯ ಹೊಂದಿಕೊಂಡು ಮಾಡಲಾಗುವುದು.
– ಮಹಮ್ಮದ್‌, ಕಾರ್ಪೊರೇಟರ್‌

ಯೋಜನೆ ರೂಪಿಸಲಾಗುವುದು 
ಭೌಗೋಳಿಕ ಪ್ರದೇಶವನ್ನು ಗಮನಿಸಿ ಅದಕ್ಕೆ ಹೊಂದಿಕೊಂಡು ಒಳಚರಂಡಿ ವ್ಯವಸ್ಥೆ ಮಾಡಲು ಪಾಲಿಕೆ ಕ್ರಮ ಕೈಗೊಳ್ಳಲಿದೆ. ತಾಂತ್ರಿಕವಾಗಿ ಸಲಹೆ ಪಡೆದು ಮುಂದಿನ ಯೋಜನೆ ರೂಪಿಸಲಾಗುವುದು.
– ಮಹಮ್ಮದ್‌ ನಝೀರ್‌, ಆಯುಕ್ತರು ಪಾಲಿಕೆ

Advertisement

— ಲಕ್ಷ್ಮೀನಾರಾಯಣ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next