Advertisement

 ಒಳಚರಂಡಿ, ವಾರಾಹಿ ಕಾಮಗಾರಿ ವಿಳಂಬ: ಗುಂಡಿಬೈಲು ವಸತಿ ಪ್ರದೇಶ ತತ್ತರ

02:56 AM Mar 11, 2022 | Team Udayavani |

ಉಡುಪಿ: ನಗರಕ್ಕೆ ದಿನಪೂರ್ತಿ ಕುಡಿಯುವ ನೀರು ಪೂರೈಸುವ ವಾರಾಹಿ ಕುಡಿಯುವ ನೀರಿನ ಯೋಜನೆ ಮತ್ತು ನಗರದ ಪ್ರಮುಖ ಒಳಚರಂಡಿ ಸಂಪರ್ಕ (ಯುಜಿಡಿ) ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಗುಂಡಿಬೈಲು ಪರಸರದ ಜನತೆ ತತ್ತರಿಸಿ ಹೋಗಿದ್ದಾರೆ.

Advertisement

ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಈ ಎರಡು ಕಾಮಗಾರಿಗಳು ಅತ್ಯಂತ ಮಹತ್ವದ್ದಾಗಿದ್ದರೂ ವಿಳಂಬ, ಬೇಕಾಬಿಟ್ಟಿ ಕಾಮಗಾರಿಯಿಂದ ಜನ ಸಾಮಾನ್ಯರು ಪರ ದಾಡುವಂತಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ನಗರದ ಹೃದಯ ಭಾಗದಲ್ಲಿ ಪೈಪ್‌ಲೈನ್‌ ಕಾಮಗಾರಿಗಳು ಚುರುಕುಗೊಂಡಿದ್ದು, ಈಗಾಗಲೇ ಶೇ.67 ಕಾಮಗಾರಿ ಮುಗಿಸಲಾಗಿದೆ. ನಗರ ಸುತ್ತಮುತ್ತ ಸಹಿತ 271 ಕಿ.ಮೀ. ಪೈಪ್‌ಲೈನ್‌ ನಿರ್ಮಿಸಬೇಕಿದ್ದು 170 ಕಿ.ಮೀ. ಪೂರ್ಣ ಗೊಂಡಿದೆ. ಅದರೊಂದಿಗೆ ಯುಜಿಡಿ ಕಾಮಗಾರಿಯು ನಡೆಯುತ್ತಿದೆ. ಗುಂಡಿಬೈಲು ಸಹಿತ ಹಲವೆಡೆ ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದೆ.

5 ದಿನಗಳಿಂದ ಕಾಮಗಾರಿ ಬಂದ್‌
ಕಳೆದ ಐದು ದಿನಗಳಿಂದ ಗುಂಡಿಬೈಲು- ಅಂಬಾಗಿಲು ಮುಖ್ಯರಸ್ತೆಯಲ್ಲಿ ಯುಜಿಡಿ ಮತ್ತು ವಾರಾಹಿ ಕಾಮಗಾರಿ ನಡೆಯುತ್ತಿದೆ. ಇಲ್ಲಿನ ನಾಗಬನ ಸಮೀಪ, ಹಾಲಿನ ಅಂಗಡಿ ಮುಂಭಾಗ ನಡೆಯುತ್ತಿರುವ ಕಾಮಗಾರಿ ಕಳೆದ 5 ದಿನಗಳಿಂದ ನಿಂತಿದೆ. ಅರ್ಧಕ್ಕೆ ಅಲ್ಲಲ್ಲಿ ಕಾಮಗಾರಿ ನಡೆಸಿ ನಿಲ್ಲಿಸುವುದರಿಂದ ಸ್ಥಳೀಯರ ಓಡಾಟಕ್ಕೆ, ವ್ಯಾಪಾರಿಗಳಿಗೆ, ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಧೂಳಿನ ಸಮಸ್ಯೆ ಜನರನ್ನು ಕಾಡುತ್ತಿದೆ. ಬೆಳಗ್ಗೆ, ಸಂಜೆ ಅವಧಿಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಇಲ್ಲಿದ್ದು, ಕಾಮಗಾರಿ ನಡೆಯುವ ರಸ್ತೆಯನ್ನು ಬಂದ್‌ ಮಾಡಿ, ಇನ್ನೊಂದು ಬದಿಯಲ್ಲಿ ಎರಡು ಕಡೆಯಲ್ಲಿ ಸಾಗುವ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈಗಾಗಲೇ ಎರಡು, ಮೂರು ಸಣ್ಣಪುಟ್ಟ ಅಪಘಾತಗಳು ಸಂಭವಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸೇತುವೆ ಕಾಂಕ್ರೀಟ್‌ ಕೊರೆಯಬೇಕು
ಕೆಲವು ಭಾಗದಲ್ಲಿ ಅಡ್ಡಲಾಗಿರುವ ಸೇತುವೆ ಭೂತಳದ ಕಾಂಕ್ರೀಟ್‌ ಅನ್ನು ಕೊರೆದು ಪೈಪ್‌ ಅಳವಡಿಸಬೇಕಾಗಿದೆ. ಯುಜಿಡಿ ನಿರ್ವಹಿಸುವರು ಅರ್ಧಕ್ಕೆ ಕಾಮಗಾರಿ ನಿಲ್ಲಿಸಿದ್ದಾರೆ. ಕಾಂಕ್ರೀಟ್‌ ಕೊರೆದ ಬಳಿಕಯುಜಿಡಿ, ವಾರಾಹಿ ಕಾಮ ಗಾರಿ ಮುಂದುವರಿಸಬೇಕಿದೆ.  ಪ್ರಸ್ತುತ ಈ ಕಾರ್ಯ ವಿಳಂಬವಾಗುತ್ತಿದೆ.

ಅಭಿವೃದ್ಧಿ ಕಾಮಗಾರಿಗೆ ಸಹಕಾರ
ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಅಗತ್ಯವಾಗಿ ರೂಪುಗೊಳ್ಳಬೇಕಾದ ಪ್ರಮುಖ ಕೆಲಸಗಳು. ಈ ಅಭಿವೃದ್ಧಿ ಕಾಮಗಾರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ಆದರೆ ಕಾಮಗಾರಿ ನೆಪದಲ್ಲಿ ವಿಳಂಬ ಸಲ್ಲದು, ಕಾಮಗಾರಿ ನಿರಂತರ ನಡೆಸಬೇಕು. ಈ ರೀತಿ ಎಲ್ಲೆಂದರಲ್ಲಿ ಗುಂಡಿ ತೆಗೆದು ಬಿಟ್ಟು ಐದಾರು ದಿನ ನಾಪತ್ತೆಯಾಗುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದು ಸ್ಥಳೀಯರು ಮನವಿ ಮಾಡಿಕೊಂಡಿದ್ದಾರೆ.

Advertisement

ವ್ಯವಸ್ಥಿತ ಕಾಮಗಾರಿ
ವಾರಾಹಿ ಕಾಮಗಾರಿ ಪೈಪ್‌ಲೈನ್‌ ಕೆಲಸ ನಗರದ ಹಲವು ಭಾಗದಲ್ಲಿ ವ್ಯವಸ್ಥಿತವಾಗಿ ನಡೆಯುತ್ತಿದೆ. ಕೆಲವು ಕಡೆ ಸೇತುವೆ ಕೆಳಗಿನ ಕಾಂಕ್ರೀಟ್‌ ಗೋಡೆಗಳಿದ್ದು, ಸ್ವಲ್ಪ ಸಮಸ್ಯೆಯಾಗಿದೆ.ಅವುಗಳನ್ನು ಕೊರೆದು ಪೈಪ್‌ ಜೋಡಿಸಬೇಕಾಗಿದೆ. ಜನರಿಗೆ ತೊಂದರೆಯಾಗದಂತೆ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಿದ್ದೇವೆ.
-ರಾಜಶೇಖರ್‌, ಎಂಜಿನಿಯರ್‌, ವಾರಾಹಿ ಯೋಜನೆ-ಕೆಯುಐಡಿಎಫ್ ಸಿ

ಶೀಘ್ರ ಕಾಮಗಾರಿ ಪೂರ್ಣ
ವಾರಾಹಿ ಕುಡಿಯುವ ನೀರು ಯೋಜನೆ ಪೈಪ್‌ಲೈನ್‌ ಕಾಮಗಾರಿ ನಗರದಲ್ಲಿ ಭರದಿಂದ ಸಾಗುತ್ತಿದೆ. ಅದರ ಜತೆಗೆ ಯುಜಿಡಿ ಕೆಲಸವೂ ನಡೆಯುತ್ತಿದೆ. ಪೈಪ್‌ಲೈನ್‌ ಕಾಮಗಾರಿ ವೇಳೆ ಕೆಲವು ಕಡೆಗಳಲ್ಲಿ ಸೇತುವೆಗಳ ಕಾಂಕ್ರೀಟ್‌ ತಡೆಗೋಡೆಗಳು ಸಿಗುತ್ತಿವೆ. ಇದನ್ನು ಕೊರೆಯುವ ಕೆಲಸ ಕ್ಲಿಷ್ಠವಾಗಿದೆ. ಈಗಾಗಲೇ ಒಂದು ಕೊರೆಯುವ ಯಂತ್ರ ಹಾಳಾಗಿದ್ದು, ಕೆಲಸ ನಿರ್ವಹಿಸುವಾಗ ಒಬ್ಬರು ಕಾರ್ಮಿಕರು ಗಾಯಾಳುವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಿ ಕೆಲವು ಕಡೆ ಕಾಮಗಾರಿ ವಿಳಂಬವಾಗಿದ್ದು, ಶೀಘ್ರದಲ್ಲೆ ಕಾಮಗಾರಿ ಮುಗಿಯಲಿದೆ. -ಸುಮಿತ್ರಾ ಎಸ್‌. ನಾಯಕ್‌, ಅಧ್ಯಕ್ಷರು, ಉಡುಪಿ, ನಗರಸಭೆ

 

Advertisement

Udayavani is now on Telegram. Click here to join our channel and stay updated with the latest news.

Next