Advertisement

ಸುಸ್ಥಿರ ಚರಂಡಿ ವ್ಯವಸ್ಥೆಯತ್ತ ನಗರಗಳು ನಡೆದರೆ ಕ್ಷೇಮ

01:25 AM Jun 10, 2017 | Karthik A |

ಒಂದು ಮಳೆ ಸುರಿದು, ನಮ್ಮ ನಗರಗಳನ್ನು ಸಂಕಷ್ಟಕ್ಕೆ ದೂಡುತ್ತಿರುವಾಗಲೂ ನಮಗೆ ಎಂಥ ಚರಂಡಿ ವ್ಯವಸ್ಥೆ ಬೇಕು ಎಂದು ಅರ್ಥ ಮಾಡಿಕೊಳ್ಳುತ್ತಿಲ್ಲ. ಸುಸ್ಥಿರ ಚರಂಡಿ ವ್ಯವಸ್ಥೆಯತ್ತ ಯೋಚಿಸುವ ಬದಲು ಇನ್ನಷ್ಟು ಆಳ – ಅಗಲದ ಚರಂಡಿಯ ಬಗ್ಗೆ ಯೋಚಿಸುತ್ತಿದ್ದೇವೆ. ಅದಕ್ಕೇ ನಮ್ಮ ನಗರಗಳು ಮುಳುಗುತ್ತಿವೆ.

Advertisement

ನಮ್ಮ ನಗರಗಳು ಇನ್ನೂ ಒದ್ದಾಡುತ್ತಿರುವುದು ತೆರೆದ ಚರಂಡಿ ಮತ್ತು ಮುಚ್ಚಿದ ಚರಂಡಿಗಳ ಮಧ್ಯೆ. ಮಳೆ ನೀರು ಹರಿಯುವ ಚರಂಡಿ ಮತ್ತು ಕೊಳಚೆ ಹರಿಯುವ ಚರಂಡಿಗಳ ಮಧ್ಯೆ. ಮಳೆಗಾಲದಲ್ಲಿ ಇವೆಲ್ಲವೂ ಒಂದೇ ಆಗಿ ಕೃತಕ ನೆರೆಯಾಗಿ ಬೃಹತ್‌ ರೂಪ ತಾಳುತ್ತದೆ. ಅದರಲ್ಲಿ ನಮ್ಮ ನಗರೀಕರಣ, ಅಭಿವೃದ್ಧಿಯ ಕಲ್ಪನೆಗಳ ವಿಶ್ವರೂಪ ಕಂಡು ಖುಷಿಪಡಬೇಕು. ವಿಚಿತ್ರವೆಂದರೆ ಅಭಿವೃದ್ಧಿ ರಾಷ್ಟ್ರಗಳೆಲ್ಲ ನಮ್ಮ ಹಳೆಯ ಪದ್ಧತಿಗೆ ಮೊರೆ ಹೋಗಿವೆ. ಎಲ್ಲೆಲ್ಲೂ ಸುಸ್ಥಿರ ಚರಂಡಿ ವ್ಯವಸ್ಥೆಯನ್ನು ನಿರ್ಮಿಸುತ್ತಿವೆ. ಆದರೆ ನಾವಿನ್ನೂ ಆ ಚರಂಡಿ, ಈ ಚರಂಡಿ ಎನ್ನುವುದರಲ್ಲೇ ಮುಳುಗಿದ್ದೇವೆ.

ವಿಶ್ವದ ಹಲವೆಡೆ ತೇಲುವ ನಗರಗಳು ನಿರ್ಮಾಣವಾಗುತ್ತಿರುವಾಗ ನಾವಿನ್ನೂ ಮುಳುಗುವ ನಗರಗಳಲ್ಲಿದ್ದೇವೆ. ಒಂದು ಮಳೆ ಅರ್ಧ ಗಂಟೆ ಜೋರಾಗಿ ಸುರಿದರೂ ನಮ್ಮ ಸ್ಥಿತಿ ಆಯೋಮಯ. ಒಂದೆಡೆ ಕೃತಕ ನೆರೆ, ಮತ್ತೂಂದೆಡೆ ಟ್ರಾಫಿಕ್‌ ಜಾಮ್‌, ಮಗದೊಂದು ಕಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಉಂಟು ಮಾಡುವ ಅನಾಹುತ, ಅಲ್ಲಿ ವಾಸಿಸುತ್ತಿರುವವರೆಲ್ಲ ರಾತ್ರಿ ನಿದ್ದೆಗೆಟ್ಟು ಗುಡಿಸಲು ಕಾಯಬೇಕಾದ ಸ್ಥಿತಿ-ಒಂದೇ ಎರಡೇ.  ಪ್ರಸ್ತುತ ನಮ್ಮ ನಗರಗಳ ಸ್ಥಿತಿ ಯಾವ ಹಂತಕ್ಕೆ ತಲುಪಿದೆಯೆಂದರೆ, ಹೆಚ್ಚು ಮಳೆಯಾಗಿ ಅಣೆಕಟ್ಟುಗಳು ತುಂಬಿ ಹೆಚ್ಚುವರಿ ನೀರನ್ನು ಹೊರಬಿಡುವಾಗ ನದಿ ಪಾತ್ರದ ಜನರಿಗೆ ಎಚ್ಚರಿಕೆ ಕೊಡುವುದನ್ನು ಕೇಳಿದ್ದೇವೆ. ‘ಯಾವುದೇ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಬಹುದು. ಹಾಗಾಗಿ ನೆರೆ ವಾತಾವರಣದಿಂದ ಕಾಪಾಡಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಹೋಗಿ’ ಎಂದು ಜಿಲ್ಲಾಡಳಿತ ಸೂಚಿಸುತ್ತದೆ. ಕೆಲವೊಮ್ಮೆ ಪರಿಸ್ಥಿತಿಯನ್ನು ಆಧರಿಸಿ ಜಿಲ್ಲಾಡಳಿತವೇ ತಾತ್ಕಾಲಿಕ ವಸತಿ ವ್ಯವಸ್ಥೆಯನ್ನೂ ಮಾಡುವಂತಿದೆ. ಇಂಥದ್ದೇ ಸ್ಥಿತಿ ಈಗ ನಗರಗಳಿಗೆ ಬಂದಿರುವುದು. ಸ್ವಲ್ಪ ಜೋರು ಮಳೆ ಬಿದ್ದರೂ ಮಹಾನಗರಪಾಲಿಕೆಯವರು ಜನರಿಗೆ, ‘ಇನ್ನು ಅರ್ಧ ಗಂಟೆ ಯಾರೂ ಆಫೀಸಿನಿಂದ ವಾಹನಗಳಲ್ಲಿ ಹೊರಗೆ ಬರಬೇಡಿ. ಮನೆಯಲ್ಲಿದ್ದವರು ಮನೆಯಲ್ಲೇ ಕುಳಿತುಕೊಳ್ಳಿ, ಪೇಟೆ, ಸಿನಿಮಾ ಮಂದಿರವೆಂದು ರಸ್ತೆಗಿಳಿಯಬೇಡಿ’ ಎಂದು ಮುನ್ನೆಚ್ಚರಿಕೆ ನೀಡಬೇಕಾದೀತು. 

ಮಳೆಯ ವಾತಾವರಣ ಕಂಡುಬಂದ ಕೂಡಲೇ ತಗ್ಗು ಪ್ರದೇಶದಲ್ಲಿದ್ದವರನ್ನು ‘ನಿಮ್ಮ ನಿತ್ಯದ ಅಡುಗೆ ಬೇಕಾಗುವಷ್ಟು ಸಾಮಾನು ತೆಗೆದುಕೊಂಡು ಬೇರೆಲ್ಲಾದರೂ ಹೋಗಿ, ಮಳೆ ಬಂದು ನೆರೆ ಇಳಿದ ಮೇಲೆ ವಾಪಸು ಬನ್ನಿ’ ಎಂದು ಹೇಳುವ ಸ್ಥಿತಿಯಿಲ್ಲವೇ? ಲೆಕ್ಕ ಹಾಕಿ. ಆಗ ಪಾಲಿಕೆಯವರೂ ಕೆಇಬಿಯವರ ರೀತಿಯಲ್ಲಿ ಅಪಾಯ ಗ್ರಹಿಸುವವರಾಗಬೇಕು. ಗ್ರಾಮೀಣ ಪ್ರದೇಶದಲ್ಲಂತೂ ಈಗ ನಾವು ಗಾಳಿ – ಮಳೆ ಯಾವಾಗ ಬರುತ್ತದೆಂದು ಲೆಕ್ಕ ಹಾಕುವುದು, ಆಕಾಶದಲ್ಲಿ ಮೋಡಗಳನ್ನು ನೋಡಿ ಅಲ್ಲ. ಕೆಇಬಿಯವರು ಯಾವಾಗ ಕರೆಂಟು ತೆಗೆಯುತ್ತಾರೋ ಆಗ ಮಳೆ ಬರುತ್ತದೆಂದು ಅರ್ಥ. ಅದು ಸುಳ್ಳಲ್ಲ. ಕರೆಂಟ್‌ ತೆಗೆದು ಐದು ಹತ್ತು ನಿಮಿಷಗಳಲ್ಲಿ ಜೋರಾದ ಗಾಳಿ ಬೀಸತೊಡಗುತ್ತದೆ; ಮಳೆ ಸುರಿಯತೊಡಗುತ್ತದೆ. 

ಸುಸ್ಥಿರ ಚರಂಡಿ ವ್ಯವಸ್ಥೆ: ನಮ್ಮಲ್ಲಿ ಕೆಲವು ಅಧಿಕಾರಿಗಳನ್ನು ಸುಸ್ಥಿರ ಚರಂಡಿ ವ್ಯವಸ್ಥೆ ಬಗ್ಗೆ ಏನು ಎಂದು ಕೇಳಿ. ಅವರು ದೊಡ್ಡ ಉಪನ್ಯಾಸವನ್ನೇ ಕೊಟ್ಟು ಬಿಟ್ಟಾರು. ‘ಅತ್ಯುತ್ತಮ ಸಿಮೆಂಟಿನಿಂದ, ಅತ್ಯುತ್ತಮ ಉಕ್ಕನ್ನು ಹಾಕಿ, ಅತ್ಯುತ್ತಮ ಗುಣಮಟ್ಟದ ದೀರ್ಘ‌ ಬಾಳಿಕೆ ಬರುವ ಚರಂಡಿ ಕಟ್ಟುವುದು’ ಎಂದು ಹೇಳಿಯಾರು. ಕೃತಕ ನೆರೆಗೆ ಪರಿಹಾರ ಕೇಳಿದರೆ, ಈಗಿರುವುದಕ್ಕಿಂತ ಇನ್ನೂ ಆಳವಾದ, ದೊಡ್ಡದಾದ ತೋಡುಗಳನ್ನು, ಚರಂಡಿಗಳನ್ನು ನಿರ್ಮಿಸುವುದು ಎಂದು ಹೇಳಬಹುದು. ಯಾಕೆ ಎಂದು ಮತ್ತೂಂದು ಪ್ರಶ್ನೆ ಕೇಳಿದರೆ, ‘ಈಗ ನೋಡಿ, ಮಳೆ ನೀರು ಚರಂಡಿಯಿಂದ ಉಕ್ಕಿ ಹರಿದು ರಸ್ತೆಯಲ್ಲಿ ನಿಲ್ಲುತ್ತಿದೆ. ಇದರರ್ಥ ಚರಂಡಿಯ ಸಾಮರ್ಥ್ಯ ಸಾಕಾಗುತ್ತಿಲ್ಲವೆಂದು. ಹಾಗಾಗಿ ದೊಡ್ಡದು ಕಟ್ಟಬೇಕಲ್ಲ’ ಎಂದು ವಿವರಣೆಯನ್ನೂ ಕೊಟ್ಟಾರು. ಆದರೆ, ವಾಸ್ತವವಾಗಿ ಖಂಡಿತ ಅದಲ್ಲ. ಇಲ್ಲಿ ಯಾವುದೂ ಕಟ್ಟುವ ವ್ಯವಸ್ಥೆಯಿಲ್ಲ. ಬದಲಾಗಿ ಬಿಡಿಸುವ ಉಪಕ್ರಮ. ಚರಂಡಿಗೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ನೀರು ಹೋಗುವಂತೆ ಮಾಡುವುದು.

Advertisement

ಹಾಗಾಗಿಯೇ ಇದು ವಿಶೇಷ: ಮಳೆ ನೀರಿನ ನಿರ್ವಹಣೆಯ ಹಿಂದಿನ ಈ ಪರಿಕಲ್ಪನೆ ಬಹಳ ವಿಶಿಷ್ಟ ಎನ್ನಿಸುತ್ತದೆ. ಆದರೆ ಪದ್ಧತಿ ನಮ್ಮ ಹಿರಿಯರು ಅನುಸರಿಸುತ್ತಿದ್ದುದೇ. ಅಂದರೆ ನಗರದ ರಸ್ತೆಯೆಲ್ಲ ಕಾಂಕ್ರೀಟು ಮಾಡಿ ಇಲ್ಲವೇ ಡಾಮರು ಹಾಕಿ ಸಂಭ್ರಮಿಸುವುದರ ಹಿಂದೆ ಇದ್ದ ಪದ್ಧತಿ. ಅಂದರೆ ಆಕಾಶದಿಂದ ಬಿದ್ದ ಮಳೆ ನೀರು ಎಷ್ಟು ಸಾಧ್ಯವೋ ಅಷ್ಟು ಭೂಮಿಯಲ್ಲಿ ಇಂಗಿ, ಉಳಿದದ್ದು ಮಾತ್ರ ಹರಿದು ನದಿಗೆ ಹೋಗಿ ಸೇರುವ ವ್ಯವಸ್ಥೆ. ಅದಕ್ಕಾಗಿ ನಮ್ಮ ಹಿರಿಯರು ಅಲ್ಲಲ್ಲಿ ಮರಗಳನ್ನು ನೆಟ್ಟಿದ್ದರು. ರಸ್ತೆ ಎಂದರೂ ಅಕ್ಕಪಕ್ಕದಲ್ಲಿ ಒಂದಿಷ್ಟು ನೀರು ಇಂಗಲು ಬಿಡುತ್ತಿದ್ದರು. ಮನೆಯ ಅಂಗಳದಲ್ಲಿ ಹಸಿರು ಬೆಳೆಸಿದ್ದರು. ಬಿದ್ದ ಮಳೆ ನೀರೆಲ್ಲ ಹಲವು ರೀತಿಯಲ್ಲಿ ನಿಲ್ಲುತ್ತಿತ್ತು, ಸುರಿದ ಎಲ್ಲ ಪ್ರಮಾಣವೂ ನದಿಗೆ ಹೋಗಿ ಸೇರುತ್ತಿರಲಿಲ್ಲ. ಹಾಗಾಗಿಯೇ ಅಂತರ್ಜಲ ಮಟ್ಟ ಚೆನ್ನಾಗಿತ್ತು, ವಾತಾವರಣ ತಂಪಾಗಿತ್ತು. ಎಲ್ಲರ ಆರೋಗ್ಯವೂ ಚೆನ್ನಾಗಿತ್ತು. 

ಇದೇ ಪದ್ಧತಿ ಸುಸ್ಥಿರ ಚರಂಡಿ ವ್ಯವಸ್ಥೆ ಎನ್ನುವ ಪರಿಕಲ್ಪನೆಯಡಿ ಬ್ರಿಟನ್‌, ಆಸ್ಟ್ರೇಲಿಯಾ, ಅಮೆರಿಕದಲ್ಲೆಲ್ಲ ಜಾರಿಗೊಂಡಿರುವುದು. ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಸುಸ್ಥಿರ ಚರಂಡಿ ವ್ಯವಸ್ಥೆ ಎಂದು ಜಾರಿಗೊಂಡಿದ್ದರೆ, ಸ್ಕಾಟ್‌ಲ್ಯಾಂಡ್‌ನ‌ಲ್ಲಿ ಇದರ ಮತ್ತೂಂದು ರೂಪ ಸುಸ್ಥಿರ ನಗರ ಚರಂಡಿ ವ್ಯವಸ್ಥೆಯಾಗಿ ಜಾರಿಗೊಂಡಿದೆ. ವಾಟರ್‌ ಸೆನ್ಸಿಟಿವ್‌ ಅರ್ಬನ್‌ ಡಿಸೈನ್‌ ಎಂದು ಆಸ್ಟ್ರೇಲಿಯಾದಲ್ಲಿ ಬಳಕೆಯಲ್ಲಿದ್ದರೆ, ಸಮಗ್ರ ಮಳೆ ನೀರು ನಿರ್ವಹಣಾ ವ್ಯವಸ್ಥೆ ಎಂದು ಅಮೆರಿಕದಲ್ಲಿ ಬಳಕೆಯಲ್ಲಿದೆ. ಇದರ ಒಟ್ಟೂ ಪರಿಕಲ್ಪನೆಯೆಂದರೆ, ಮಳೆ ನೀರು ಕೇವಲ ಭೂಮಿಯ ಮೇಲ್ಪದರದಲ್ಲೇ ಹರಿದು ಹೋಗಿ ಅವಾಂತರ ಸೃಷ್ಟಿಸುವುದಕ್ಕಿಂತ ಎಷ್ಟು ಸಾಧ್ಯವೋ ಅಷ್ಟನ್ನು ಅಲ್ಲಲ್ಲೇ ಇಂಗುವಂತೆ ಮಾಡಿ, ಒಟ್ಟೂ ಹರಿಯುವ ಪ್ರಮಾಣವನ್ನೇ ಕುಗ್ಗಿಸುವುದು. 

ಸುಸ್ಥಿರ ವ್ಯವಸ್ಥೆಯ ತತ್ವಗಳು: ರಭಸವಾಗಿ ಹರಿದು ಹೋಗುವ ನೀರಿನ ವೇಗವನ್ನು ತಡೆಯುವುದು ಮತ್ತು ನಿಧಾನವಾಗಿ ಹರಿಯುವಂತೆ ಮಾಡುವುದು. ಆದಷ್ಟು ಎಲ್ಲಿ ಮಳೆ ನೀರು ಬರುತ್ತದೋ ಅಲ್ಲಿಯೇ ಇಂಗುವಂತೆ, ಉಳಿಯುವಂತೆ ಮಾಡುವುದು, ಮಳೆ ನೀರು ಭೂಮಿಗೆ ಇಂಗುವಂತೆ ಮಾಡುವುದು, ನೀರು ಅಶುದ್ಧಗೊಳ್ಳದಂತೆ ನೋಡಿಕೊಳ್ಳುವುದು, ನೀರಿನ ಸರಾಗ ಹರಿಯುವಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು. ಇವು ಒಳ್ಳೆಯ ಅಮೃತ ತತ್ವಗಳೆಂಬಂತಿವೆಯಲ್ಲ. ಇಲ್ಲಿ ನೀರಿನ ಸರಾಗ ಹರಿಯುವಿಕೆ ಎಂದರೆ ರಭಸವಾಗಿ ಹರಿಯುವುದು ಎಂಬ ಅರ್ಥ ಖಂಡಿತ ಅಲ್ಲ. ಹರಿಯುವ ನೀರಿಗೊಂದು ಲಾಲಿತ್ಯವಿದೆ, ಅದನ್ನು ಉಳಿಸಿಕೊಳ್ಳಬೇಕೆಂಬ ಕಾಳಜಿ ಈ ಪರಿಕಲ್ಪನೆಯದ್ದು. ಈಗ ಹೇಳಿ, ಇವೆಲ್ಲವನ್ನೂ ನಮ್ಮ ಹಿರಿಯರು ಪಾಲಿಸುತ್ತಿರಲಿಲ್ಲವೇ? 

ಈಗ ನಾವು ಏನು ಮಾಡಬೇಕು? ನಮ್ಮ ನಗರಗಳಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಸಸಿಗಳನ್ನು ನೆಟ್ಟು ಪೋಷಿಸೋಣ. ಯಾಕೆಂದರೆ, ಮರಗಳು ನೆರೆಯ ಪ್ರಮಾಣವನ್ನು ತಗ್ಗಿಸುತ್ತವೆಂಬುದು ಈಗಾಗಲೇ ಸಾಬೀತಾಗಿರುವ ಅಂಶ. ಸರಸರನೆ ಸರಿದು ಹೋಗುವ ನೀರನ್ನು ಗಿಡಗಳು ತಡೆದು ನಿಲ್ಲಿಸಬಲ್ಲವು. ಪ್ರತಿ ರಸ್ತೆಯಲ್ಲೂ ಎರಡೂ ಬದಿಗಳಲ್ಲಿ ಗಿಡಗಳಿದ್ದರೆ, ಒಂದಿಷ್ಟು ಪ್ರಮಾಣದ ನೀರು ರಸ್ತೆಗೆ ಸೇರಿ ಕೃತಕ ನೆರೆ ನಿರ್ಮಾಣವಾಗುವುದು ತಪ್ಪುತ್ತದೆ. ರಸ್ತೆ ಪೂರ್ತಿ ಡಾಮರು ಹಾಕುವುದು ಅಥವಾ ಕಾಂಕ್ರೀಟು ಹಾಕುವುದನ್ನೂ ನಿಲ್ಲಿಸಬೇಕಿದೆ. ಹಿಂದೆ ಇದ್ದಂತೆಯೇ ರಸ್ತೆಯ ಎರಡೂ ಬದಿಯ ಒಂದಿಷ್ಟು ಜಾಗವನ್ನು ಹಾಗೆಯೇ ಬಿಟ್ಟರೆ, ರಸ್ತೆಯಿಂದ ಇಳಿಯುವ ನೀರು ಆ ಮಣ್ಣಿನ ಜಾಗದಲ್ಲಿ ಇಂಗಬಲ್ಲದು.

ಇದೆಲ್ಲದರ ಸಂಯುಕ್ತ ಪರಿಣಾಮ ಅಂತರ್ಜಲ ಮಟ್ಟದ ಆರೋಗ್ಯ ಸುಧಾರಣೆಯೊಂದಿಗೆ ಪರಿಸರ, ವಾತಾವರಣದ ಆರೋಗ್ಯವೆಲ್ಲವೂ ಸುಧಾರಿಸುತ್ತದೆ. ಇವೆಲ್ಲವೂ ಸಾಧ್ಯವಾದರೆ ನಮ್ಮಲ್ಲೂ ಸುಸ್ಥಿರ ಚರಂಡಿ ವ್ಯವಸ್ಥೆ ಸಾಧ್ಯವಾಗುತ್ತದೆ. ನಮ್ಮ ನಗರಗಳು ಮತ್ತೆ ನಳನಳಿಸತೊಡಗುತ್ತವೆ. ಈ ಬಂಡವಾಳ ಹೂಡಿಕೆಯಿಂದ ಡಿವಿಡೆಂಡ್‌ ಎನ್ನುವಂತೆ ಅಲ್ಲಿ ಬದುಕುತ್ತಿರುವ ನಮ್ಮ ಆರೋಗ್ಯ ಸುಧಾರಿಸುತ್ತದೆ. ಇಷ್ಟೆಲ್ಲ ಆಗುವುದಾದರೆ ಏಕೆ ಬೇಡ. ನಮ್ಮ ಹಿರಿಯರ ಪದ್ಧತಿಯನ್ನೇ ಒಮ್ಮೆ ಅವಲೋಕಿಸಿ. ಅದರಿಂದಾಗುತ್ತಿದ್ದ ಲಾಭವನ್ನು ಎಣಿಸಿಕೊಳ್ಳುವುದು ಒಳಿತು. ಆಗ ಜನಸಂಖ್ಯೆ ಕಡಿಮೆ ಇತ್ತು. ಯಾವ ಸಮಸ್ಯೆಯೂ ಇರಲಿಲ್ಲ, ಈಗ ಹಾಗಲ್ಲ ಎಂದು ನೆವ ಹುಡುಕಿಕೊಂಡು ಹಿರಿಯರ ಆಲೋಚನಾ ಕ್ರಮವನ್ನು ಒಪ್ಪದೇ ಇರುವ ಸ್ಥಿತಿಗೆ ಹೋಗದಿರೋಣ. ಅದು ವರ್ತಮಾನ ಮತ್ತು ಭವಿಷ್ಯವೆರಡಕ್ಕೂ ಒಳ್ಳೆಯದು.

– ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next