Advertisement

ತಾಲೂಕು ಕೇಂದ್ರ ಬೆಳ್ತಂಗಡಿಯಲ್ಲಿ ಚರಂಡಿ ಅವ್ಯವಸ್ಥೆ

05:45 AM May 28, 2018 | Karthik A |

ಬೆಳ್ತಂಗಡಿ: ಜಿಲ್ಲೆಯಾದ್ಯಂತ ನಿರೀಕ್ಷೆಗೂ ಮುನ್ನವೇ ಉತ್ತಮ ಮಳೆಯಾಗುತ್ತಿದೆ. ಆದರೆ ತಾಲೂಕು ಕೇಂದ್ರ ಬೆಳ್ತಂಗಡಿ ಸಹಿತ ಎಲ್ಲೂ ಚರಂಡಿ ನಿರ್ವಹಣೆ ಸಮರ್ಪಕವಾಗಿ ಮಾಡದಿರುವುದರಿಂದ ಮಳೆ ನೀರು ರಸ್ತೆಯಲ್ಲಿ ಹರಿದು ಸಮಸ್ಯೆ ಉಂಟು ಮಾಡುತ್ತಿದೆ. ತಾಲೂಕಿನಾದ್ಯಂತ ಪ್ರತಿದಿನ ಉತ್ತಮ ಮಳೆಯಾಗುತ್ತಿದೆ. ಹತ್ತು ದಿನಗಳೊಳಗಾಗಿ ಮುಂಗಾರು ಪ್ರವೇಶಿಸುವ ಮುನ್ಸೂಚನೆಯನ್ನೂ ಮೊದಲೇ ನೀಡಲಾಗಿದೆ. ಆದರೆ ತಾಲೂಕಿನ ಚರಂಡಿಗಳ ನಿರ್ವಹಣೆ ಇನ್ನೂ ನಡೆದಿಲ್ಲ. ಹೆದ್ದಾರಿಯಲ್ಲೇ ನೀರು ಹರಿಯುವುದನ್ನು ಜನಪ್ರತಿನಿಧಿಗಳು ಗಮನಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೆಸರಿನಿಂದ ಪಾದಚಾರಿಗಳು ಸಮರ್ಪಕವಾಗಿ ನಡೆದಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement


ರಸ್ತೆಯಲ್ಲೇ ಮಳೆ ನೀರು

ರಾ.ಹೆ. ತಾಲೂಕಿನ ಕೇಂದ್ರಭಾಗದಲ್ಲಿ ಹಾದುಹೋಗಿದ್ದರೂ ಯಾವುದೇ ನಿರ್ವಹಣೆ ಕಾರ್ಯ ಮಾಡಿಲ್ಲ. ಮುಖ್ಯವಾಗಿ ಈ ರಸ್ತೆಗೆ ಸಮರ್ಪಕ ರಸ್ತೆ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು, ರಸ್ತೆಯಲ್ಲೇ ಮಳೆನೀರು ಹರಿದು ಹೋಗುತ್ತಿದೆ. ಚರಂಡಿ ನೆಪ ಮಾತ್ರಕ್ಕೆ ಇದ್ದು, ಮಳೆನೀರು ಮಾತ್ರ ರಸ್ತೆಯ ಮೇಲೆ ಹರಿದು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನ ಸೆಳೆದಿದ್ದರೂ ಪರಿಣಾಮ ಮಾತ್ರ ಶೂನ್ಯ ಎಂಬಂತಾಗಿದೆ. ಕೆಲವೆಡೆ ಹೊಂಡಗಳಲ್ಲಿ ಮಳೆನೀರು ನಿಂತು ಸಾಂಕ್ರಾಮಿಕ ರೋಗಗಳ ಮೂಲವಾಗಿ ಪರಿಣಮಿಸುತ್ತಿದೆ. ಗುರುವಾಯನಕೆರೆಯಿಂದ ಆರಂಭವಾಗಿ ಉಜಿರೆವರೆಗೂ ಇಂತಹ ಸಮಸ್ಯೆ ಸಾಮಾನ್ಯವಾಗಿದೆ. ಇದರಿಂದ ಜನತೆಗೆ ಮುಕ್ತಿ ದೊರೆಯಬೇಕಾದ ಅಗತ್ಯತೆ ಇದೆ.

ವಾಹನ ಸವಾರರಿಗೆ ಅಪಾಯ
ರಸ್ತೆ ಬದಿಗಳಲ್ಲಿ ಕೆಸರು ನೀರು ನಿಲ್ಲುವುದರಿಂದ ದ್ವಿಚಕ್ರ ವಾಹನಗಳು ಸ್ಕಿಡ್‌ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.  ಪಟ್ಟಣದ ಕೆಲವು ಪ್ರದೇಶಗಳಲ್ಲಿ ಹೊಂಡ/ಅಂಚುಗಳು ಸೃಷ್ಟಿಯಾಗಿದ್ದು ಅಪಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿವೆ.

ನಿರ್ವಹಣೆಯಾಗಬೇಕಿದೆ
ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ಇದ್ದರೂ ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದರಿಂದ ಸಮಸ್ಯೆ ಉಲ್ಬಣಿಸಿದೆ. ನಗರ ಪ್ರದೇಶದಲ್ಲೇ ಚರಂಡಿಗಳಲ್ಲಿ ಗಿಡಗಂಟಿ ಬೆಳೆದು ನೀರು ಹರಿದು ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವು ಭಾಗಗಳಲ್ಲಿ ಮಳೆನೀರು ಚರಂಡಿಗೆ ಸೇರಲು ಸಮರ್ಪಕ ವ್ಯವಸ್ಥೆ ಮಾಡದಿರುವುದರಿಂದ ಹೆಚ್ಚಿನ ಸಮಸ್ಯೆ ಉಂಟಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಖಾಸಗಿಯವರು ಮಾರ್ಗ ನಿರ್ಮಿಸುವಾಗ ಸಮರ್ಪಕ ಕೊಳವೆ ಅಥವಾ ಮೋರಿ ರಚಿಸದೆ ನೀರು ಹರಿಯುವ ದಿಕ್ಕು ಬದಲಾಗುತ್ತಿದೆ. ಚರಂಡಿಯನ್ನು ದುರಸ್ತಿಗೊಳಿಸಿ, ಮಳೆ ನೀರು  ಹರಿಯಲು ಸಣ್ಣ ಬದುಗಳ ವ್ಯವಸ್ಥೆ ಮಾಡಿದಲ್ಲಿ ಸಮಸ್ಯೆ ಪರಿಹರಿಸಬಹುದು.

ಎರಡು ದಿನಗಳಲ್ಲಿ ಕಾಮಗಾರಿ
ವಿಧಾನ ಪರಿಷತ್‌ ಚುನಾವಣೆ ಇರುವುದರಿಂದ ನೀತಿಸಂಹಿತೆಯಿಂದ ಕಾಮಗಾರಿ ನಡೆಸಲು ಅಡ್ಡಿಯಾಗಿದೆ. ಆದರೂ ಚರಂಡಿ ನಿರ್ವಹಣೆಗೆ ಈಗಾಗಲೇ ಎಂಜಿನಿಯರ್‌ ಗಳಿಗೆ ಸೂಚಿಸಲಾಗಿದೆ. ನಗರದ ಪ್ರಮುಖ ಪ್ರದೇಶಗಳಲ್ಲಿ ಎರಡು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ.
– ಮುಗುಳಿ ನಾರಾಯಣ ರಾವ್‌, ಪಟ್ಟಣ ಪಂಚಾಯತ್‌ ಅಧ್ಯಕ್ಷರು

Advertisement
Advertisement

Udayavani is now on Telegram. Click here to join our channel and stay updated with the latest news.

Next