Advertisement

ಮುಚ್ಚಿ ಹೋದ ಚರಂಡಿ, ರಸ್ತೆಯಲ್ಲೇ ನೀರಿನ ಹರಿವು

02:20 AM Jun 12, 2018 | Team Udayavani |

ಸುಬ್ರಹ್ಮಣ್ಯ: ಕುಮಾರಧಾರೆ- ಸುಬ್ರಹ್ಮಣ್ಯ ಸಹಿತ ಇಲ್ಲಿನ ನಗರದಲ್ಲಿ ಬಳಕೆಯಲ್ಲಿರುವ ರಸ್ತೆಗಳು ಸೂಕ್ತ ಚರಂಡಿ ನಿರ್ವಹಣೆಯ ಸಮಸ್ಯೆ ಎದುರಿಸುತ್ತಿದೆ. ರಸ್ತೆ ಬದಿ ಇನ್ನೂ ಚರಂಡಿ ನಿರ್ಮಾಣವಾಗದೇ ಅಲ್ಲಲ್ಲಿ  ಕೃತಕ ನೀರಿನ ಕೊಳಗಳು ಕಾಣಿಸುತ್ತಿದೆ. ನಗರದ ಬಹುತೇಕ ರಸ್ತೆಗಳು ಚರಂಡಿ ಕಾಣದೆ ಮಳೆ ನೀರು ಸಂಪೂರ್ಣ ರಸ್ತೆಯಲ್ಲಿ ಹರಿಯುತ್ತಿದ್ದು, ವಾಹನ ಸವಾರರೂ ಸೇರಿದಂತೆ ಸಾರ್ವಜನಿಕರ ತೀವ್ರ ಕಷ್ಟಪಡುತ್ತಿದ್ದಾರೆ.

Advertisement

ಕುಮಾರಧಾರೆ – ಕಾಶಿಕಟ್ಟೆ ನಡುವಿನ ಪ್ರಮುಖ ಸಂಪರ್ಕ ರಸ್ತೆ ಈ ಹಿಂದೆ ಲೊಕೋಪಯೋಗಿ ಇಲಾಖೆಗೆ ಒಳಪಟ್ಟಿತ್ತು. ಬಳಿಕ ಅದೀಗ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತಕ್ಕೆ ಹಸ್ತಾಂತರಗೊಂಡಿದೆ. ಈ ರಸ್ತೆ ದೇಗುಲದ ಮಾಸ್ಟರ್‌ ಪ್ಲಾನ್‌ ಯೋಜನೆಯಲ್ಲಿ ಸೇರಿದ್ದು, ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಹೊಂದಲಿದೆ. ಇದಕ್ಕೆಂದು ಕುಮಾರಧಾರೆ – ಕಾಶಿಕಟ್ಟೆ ನಡುವೆ ಮಾರ್ಗದ ವಿಸ್ತರಣೆ ಕಾಮಗಾರಿ ಸಾಕಷ್ಟು ಮುಂಚಿತವೇ ನಡೆಸಿದ್ದು ಕಾಮಗಾರಿ ಅರ್ಧಕ್ಕೆ ನಿಂತಿದೆ. ಈ ಮಾರ್ಗದ ಎರಡೂ ಬದಿ ಸೂಕ್ತ ಚರಂಡಿ ಇಲ್ಲದೆ ಮಳೆಗೆ ನೀರು ರಸ್ತೆಯಲ್ಲಿ ಸಂಗ್ರವಾಗಿ ಸಮಸ್ಯೆಗೆ ಎಡೆಮಾಡಿಕೊಡುತ್ತಿದೆ.


ಸಂಪೂರ್ಣ ಅಸ್ತವ್ಯಸ್ತ

ಕುಮಾರಧಾರ ಪ್ರವೇಶ ದ್ವಾರ, ಪೆಟ್ರೋಲ್‌ ಪಂಪ್‌ ಬಳಿ, ಜೂನಿಯರ್‌ ಕಾಲೇಜು ಬಳಿ, ಕೆ.ಎಸ್‌.ಎಸ್‌. ಕಾಲೇಜು ಬಳಿ, ಬಿಲದ್ವಾರ, ಕಾಶಿಕಟ್ಟೆ ವೃತ್ತ, ಕೆ.ಎಸ್‌.ಆರ್‌.ಟಿ.ಸಿ. ಬಸ್‌ ನಿಲ್ದಾಣ ಮುಂಭಾಗದಲ್ಲಿ ಮಳೆ ನೀರು ರಸ್ತೆಗೆ ಹರಿದು ಸಂಚಾರ ವೇಳೆ ದೊಡ್ಡ ಪ್ರಮಾಣದ ಅಡಚಣೆಯಾಗುತ್ತಿದೆ. ಮಾರ್ಗದ ಎರಡು ಬದಿ ತಾತ್ಕಾಲಿಕ ಚರಂಡಿ ವ್ಯವಸ್ಥೆಯನ್ನು ದೇಗುಲದ ವತಿಯಿಂದ ನಡೆಸಿಲ್ಲ. ದೇಗುಲದ ರಸ್ತೆ ಕಾಶಿಕಟ್ಟೆ- ಹನುಮನ ದೇಗುಲದ ಬಳಿಯ ಬೆ„ಪಾಸ್‌ ರಸ್ತೆ ಕೂಡ ಚರಂಡಿ ಇಲ್ಲದೆ ರಸ್ತೆ ಹಾಗೂ ಇಲ್ಲಿನ ಪಾರ್ಕಿಂಗ್‌ ಸ್ಥಳಗಳಿಗೆ ನೀರು ನುಗ್ಗುತ್ತಿವೆ. ಕೆ.ಎಸ್‌.ಆರ್‌.ಟಿ.ಸಿ. ಸಮೀಪ ಆದಿಸುಬ್ರಹ್ಮಣ್ಯ ಹಾಗೂ ಸರ್ಪಸಂಸ್ಕಾರ ಯಾಗ ಶಾಲೆಗೆ ತೆರಳುವ ರಸ್ತೆ ಬದಿ ಕೂಡ ಚರಂಡಿ ತೆಗೆಯದೆ ಮತ್ತಷ್ಟೂ ಬವಣೆ ಪಡುವಂತಾಗಿದೆ.

ನಿರ್ವಹಣೆಯ ತೊಡಕು
ನಗರ ವ್ಯಾಪ್ತಿಯಲ್ಲಿ ಸ್ಥಳೀಯಾಡಳಿತ ನಿರ್ವಹಣೆಯ ಹಲವು ರಸ್ತೆಗಳು ಇದ್ದು ಅವುಗಳ ಚರಂಡಿ ನಿರ್ವಹಣೆ ಕೂಡ ಈ ಭಾರಿ ನಡೆದಿಲ್ಲ. ಹೀಗಾಗಿ ನಗರದ ಎಲ್ಲ ರಸ್ತೆಗಳ ಮೇಲೆ ಮಳೆ ನೀರು ಹರಿದು ಹೋಗುತ್ತಿದೆ. ಮಳೆಗೆ ಗುಡ್ಡ ಪ್ರದೇಶದಿಂದ ರಸ್ತೆಗೆ ಹರಿಯುವ ಮಳೆ ನೀರಿನ ಜತೆ ಕಲ್ಲು ಮಣ್ಣುಗಳು ರಸ್ತೆಗೆ ಹರಿದು, ಅಲ್ಲಲ್ಲಿ ಕೆಸರು ಮಣ್ಣು ಶೇಖರಣೆಗೊಳ್ಳುತ್ತಿದೆ. ತಗ್ಗು ಪ್ರದೇಶಗಳತ್ತ ನೀರು ಹರಿದು ರಸ್ತೆಗಳು ಕೆರೆಗಳಾಗಿ ಪರಿವರ್ತನೆ ಆಗಿವೆ. ರಸ್ತೆ ಕೂಡ ಕಿರಿದಾಗಿದ್ದು ಹೂಳು ತುಂಬಿಕೊಂಡಿದೆ.

ಸಂಕಷ್ಟ ತಪ್ಪಿದಲ್ಲ
ರಸ್ತೆ ಮಧ್ಯೆ ಆಳವಾದ ಗುಂಡಿಗಳಲ್ಲಿ ನೀರು ನಿಂತುಕೊಂಡಿದೆ. ದ್ವಿಚಕ್ರ ಸವಾರರು ಗುಂಡಿಯ ಆಳ ಅರಿಯದೇ ನಿಯಂತ್ರಣ ಕಳೆದುಕೊಳ್ಳುತ್ತಿದ್ದಾರೆ. ನಡೆದುಕೊಂಡು ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಚಿಮ್ಮುವ ಕೊಳಚೆ ನೀರು ವಿದ್ಯಾರ್ಥಿಗಳ ಹಾಗೂ ಭಕ್ತರ ಮೇಲೆ ಚಿಮ್ಮುತ್ತಿದೆ.

Advertisement

ಅನುದಾನ ಬೇಕಿದೆ
ನಗರದ ಪ್ರಮುಖ ರಸ್ತೆಗಳು ದೇಗುಲಕ್ಕೆ ಹಸ್ತಾಂತರಗೊಂಡಿದೆ. ಹೀಗಾಗಿ ದೇಗುಲ ರಸ್ತೆಗಳನ್ನು ನಿರ್ವಹಣೆ ಹೊಣೆ ಹೊತ್ತಿದೆ. ತಾತ್ಕಾಲಿಕ ಚರಂಡಿ ನಿರ್ಮಾಣಕ್ಕೆ ದೇಗುಲ ಕಡೆಯಿಂದ ಹಣ ಒದಗಿಸಿದರೆ ಕೆಲಸ ಆರಂಭಿಸುತ್ತೇವೆ. 
– ಶ್ರೀ ಕಾಂತ ರಾವ್‌, ಪಿ.ಡಬ್ಲ್ಯೂ.ಡಿ. ಅಧಿಕಾರಿ

ಮನವಿ ಮಾಡುತ್ತೇವೆ
ಸೂಕ್ತವಾದ ರಸ್ತೆಗಳಲ್ಲಿ ಮಳೆ ನೀರು ಹರಿದು ಹೋಗಿ ಸಮಸ್ಯೆ ಆಗುತ್ತಿರುವುದು ನಿಜ. ರಸ್ತೆಗಳ ಬದಿ ತಾತ್ಕಾಲಿಕ ಚರಂಡಿ ನಿರ್ಮಿಸಲು ದೇಗುಲಕ್ಕೆ ಪಂಚಾಯತ್‌ ಕಡೆಯಿಂದ ಮನವಿ ಮಾಡುತ್ತೇವೆ. 
– ಯು.ಡಿ. ಶೇಖರ, ಸುಬ್ರಹ್ಮಣ್ಯ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

— ಬಾಲಕೃಷ್ಣ ಬೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next