ಶಿರಾ: ತಾಲೂಕಿನ ಗೌಡಗೆರೆ ಹೋಬಳಿಯ ಗೋಮಾರದನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 5 ಎಕರೆ ಬರಡು ಭೂಮಿಯಲ್ಲಿ ರೈತ ಎಂ.ಎಸ್.ಪ್ರಸಾದ್ ಆರ್ಥಿಕವಾಗಿ ಸದಾ ಲಾಭ ತರುವ ಕೃಷಿ ಮಾಡಿ ಗಮನ ಸೆಳೆದಿದ್ದಾರೆ. ಗರಿಷ್ಠ 40 ಡಿಗ್ರಿ ಉಷ್ಣಾಂಶದ ಜೊತೆಗೆ ಕಡಿಮೆ ನೀರಿನ ಪ್ರಮಾಣದಲ್ಲಿ ಉತ್ತಮ ಫಸಲು ನೀಡುವಂತ ಡ್ರ್ಯಾಗನ್ ಫ್ರೂಟ್‌ಟ್ 5 ಎಕರೆ ಪ್ರದೇಶದಲ್ಲಿ ಬೆಳೆದು ಲಕ್ಷಾಂತರ ರೂ. ಲಾಭಗಳಿಸಿದ್ದಾರೆ.
1988ರಲ್ಲಿ ಪ್ರಥಮವಾಗಿ ವಿಯೆಟ್ನಾಂನಲ್ಲಿ ಈ ಕೃಷಿ ಮಾಡಿ ತದ ನಂತರ ಚೀನಾ, ಥೈಲ್ಯಾಂಡ್, ಮಲೇಶಿಯಾ ದಲ್ಲಿ ಹೆಚ್ಚು ಬೆಳೆಯಲಾಗುತ್ತಿತ್ತು. ರೋಗ ನಿರೋಧಕ ಶಕ್ತಿ ಡ್ರ್ಯಾಗನ್ ಫ್ರೂಟ್‌ಟ್‌ನಲ್ಲಿರುವ ಕಾರಣ ಮುಂಬೈ, ಬೆಂಗಳೂರಿನಂತ ನಗರ ಪ್ರದೇಶದಲ್ಲಿ ಪ್ರತಿ 1 ಕೇಜಿ ಹಣ್ಣು 300 ರಿಂದ 350 ರೂ.ಗೆ ಮಾರಾಟವಾಗುತ್ತದೆ.
ತುಮಕೂರಿನ ಹಿರೇಹಳ್ಳಿಯಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಪ್ರಾತ್ಯಕ್ಷಿಕೆ ಬೆಳೆಯ ಮೂಲಕ ತರಬೇತಿ ಪಡೆದಿರುವ ಪ್ರಸಾದ್ ಪ್ರಯೋಗಿಕವಾಗಿ 5 ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್‌ಟ್ ಬೆಳೆದು ಯಶಸ್ವಿಯಾಗಿದ್ದಾರೆ. 2017ರಲ್ಲಿ 5 ಎಕರೆ ಡ್ರ್ಯಾಗನ್ ಫ್ರೂಟ್ ಬೆಳೆಸಲು ಆರಂಭಿಸಿದ ರೈತ, 10 ಸಾವಿರ ಗಿಡಗಳನ್ನು ತಂದು, 250 ಕಲ್ಲುಗಂಬ ನಿಲ್ಲಿಸಿ ಪ್ರತಿಕಂಬಕ್ಕೆ 4 ಗಿಡಗಳಂತೆ ನಾಟಿ ಮಾಡಿದ್ದಾರೆ.
2018ರಲ್ಲಿ ಪ್ರಥಮ ಬೆಳೆ ಕೈಸೇರಿದ್ದು 6 ಟನ್ ಹಣ್ಣು ಬೆಳೆದು 9 ಲಕ್ಷ ರೂ. ಹಣಗಳಿಸಿದ್ದರು. ಈಗ ಫಸಲು ದ್ವಿಗುಣಗೊಂಡಿದ್ದು, ಪ್ರತಿ ಎಕರೆಗೆ 10 ಟನ್ ಡ್ರ್ಯಾಗನ್ ಫ್ರೂಟ್ ಬೆಳೆ ನಿರೀಕ್ಷೆ ಮಾಡಲಾಗಿದೆ. ಉದಯವಾಣಿ ಜತೆ ಈ ಬಗ್ಗೆ ರೈತ ಪ್ರಸಾದ್ ಮಾತನಾಡಿ, 1 ಎಕರೆ ಡ್ರ್ಯಾಗನ್ ಫ್ರೂಟ್ ಬೆಳೆದರೆ ಮತ್ತೂಂದು ಎಕರೆ ಇತರೆ ಬೆಳೆ ಬೆಳೆಯುವಂತ ವಿಭಿನ್ನ ಪ್ರಯತ್ನ ರೈತನದ್ದಾಗಿರಬೇಕು. ಕಡಿಮೆ ನೀರಿನ ಪ್ರಮಾಣ ಹೆಚ್ಚು ಲಾಭ ನೀಡುವಂತ ಡ್ರ್ಯಾಗನ್ ಫ್ರೂಟ್ ಉತ್ತಮ ಆದಾಯ ತರುವಂತ ಬೆಳೆ ಎಂದು ತಿಳಿಸಿದರು.