ತಿ.ನರಸೀಪುರ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ವರುಣಾ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಯತೀಂದ್ರ ಅವರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಹಾಗೂ ಬಿಎಸ್ಸೆನ್ನೆಲ್ ಸಲಹಾ ಸಮಿತಿ ಸದಸ್ಯ ಎನ್.ಸೋಮು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೃತ್ತಿಯಲ್ಲಿ ವೈದ್ಯರಾಗಿದ್ದರೂ ರಾಜಕಾರಣಕ್ಕೆ ಪ್ರವೇಶಿಸಿದ ಆರಂಭದಲ್ಲಿ ವರುಣಾ ಕ್ಷೇತ್ರಾದ್ಯಂತ ಹಂತಹಂತವಾಗಿ ಪ್ರವಾಸ ಕೈಗೊಂಡು ಗ್ರಾಮೀಣ ಸಮಸ್ಯೆಗಳು ಹಾಗೂ ಜನರ ನಾಡಿಮಿಡಿತ ಅರಿತು ಸಾರ್ವಜನಿಕರ ಜೀವನಕ್ಕೆ ಬದ್ಧರಾಗಿ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರಿಂದ ಯತೀಂದ್ರ ಅತ್ಯಧಿಕ ಮತಗಳಿಂದ ಆಯ್ಕೆಗೊಂಡರು ಎಂದರು.
ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರಕ್ಕೆ ಮಾರ್ಗದರ್ಶಕರಾಗಿ ಇರುತ್ತಾರೆಯಷ್ಟೇ. ಅವರಿಂದ ತೆರವಾಗುವ ಸ್ಥಾನವನ್ನು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಅವರಿಗೆ ನೀಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲು ಹೈಕಮಾಂಡ್ ಚಿಂತನೆ ಮಾಡಬೇಕು. ನಿಯೋಜಿತ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಬೇಕು ಎಂದು ಎನ್.ಸೋಮು ಆಗ್ರಹಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎನ್.ಮಹೇಶ್ ಮಾತನಾಡಿ, ಮೈಸೂರು ಭಾಗದಲ್ಲಿನ ಪ್ರಮುಖ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಿನ್ನೆಡೆಯಾಗಿದ್ದು, ಮುಂದಿನ ಸಾರ್ವತ್ರಿಕ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ವರಿಷ್ಠರು ಯುವ ಶಾಸಕ ಡಾ.ಯತೀಂದ್ರಗೆ ಸಚಿವ ಸ್ಥಾನ ನೀಡಬೇಕು ಎಂದರು.
ಜಿಲ್ಲಾ ಕಾಂಗ್ರೆಸ್‌ನ ಮಾಧ್ಯಮ ಸಂಚಾಲಕ ಸಂತೃಪ್ತಿಕುಮಾರ್, ಸುದ್ಧಿಗೋಷ್ಠಿಯಲ್ಲಿ ಬಿಲಿಗೆರೆಹುಂಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವು, ಕುರುಬರ ಸಂಘದ ನಿರ್ದೇಶಕ ಎಂ.ಕೆ.ಸಹದೇವ, ಡಣಾಯಕನಪುರ ಸೋಮಣ್ಣನಾಯಕ, ಹೆಳವರಹುಂಡಿ ಬಸಪ್ಪ, ಉಮೇಶ, ಕ್ರೇಜಿ ಸುರೇಶ, ಮಹದೇವ ಚಿಳ್ಳು, ಗೋವಿಂದರಾಜು, ಪುಟ್ಟಬಸವಣ್ಣ, ರಾಜು, ಪುಟ್ಟಸ್ವಾಮಿ(ಪುಟ್ಟ), ರಮೇಶ, ರಾಜೇಂದ್ರ, ಬನ್ನಹಳ್ಳಿಹುಂಡಿ ಚಂದ್ರಶೇಖರ್, ದೊರೆಸ್ವಾಮಿ ಇನ್ನಿತರರಿದ್ದರು.