ಮಂಗಳೂರು: ಬ್ಯುಸಿನೆಸ್ ನೆಟ್‌ವರ್ಕ್ ಇಂಟರ್‌ನ್ಯಾಶನಲ್ (ಬಿಎನ್‌ಐ) ಮಂಗಳೂರು ವತಿಯಿಂದ ಮಂಗಳೂರಿನ ಎಂ.ಜಿ. ರಸ್ತೆಯ ಡಾ| ಟಿ.ಎಂ.ಎ ಪೈ ಕನ್‌ವೆನ್ಶನ್ ಸೆಂಟರ್‌ನಲ್ಲಿ ಅ.2ರವರೆಗೆ ಆಯೋಜನೆಗೊಂಡ “ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ-2023′ ಪ್ರದರ್ಶನಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಉದ್ಘಾಟಿಸಿದ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಉದ್ಯಮ ಕ್ಷೇತ್ರದಲ್ಲಿ ಮಂಗಳೂರಿನ ಸಾಧನೆ ಶ್ಲಾಘನೀಯ. ಬಿಎನ್‌ಐ ಕಳೆದ ಕೆಲ ವರ್ಷಗಳಿಂದ ಹಲವಾರು ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. 120ಕ್ಕೂ ಹೆಚ್ಚಿನ ಸ್ಟಾಲ್‌ಗಳಿದ್ದು, ಮೂರು ದಿನಗಳ ಕಾಲ ನಗರದ ಜನತೆಗೆ ಉಪಯುಕ್ತ ಸೇವೆ ಸಿಗಲಿದೆ. ಗೃಹ ನಿರ್ಮಾಣ ಕೆಲಸಗಳಿಂದ ಆರಂಭಗೊಂಡು, ಗೃಹಪ್ರವೇಶದವರೆಗಿನ ಎಲ್ಲಾ ರೀತಿಯ ಪರಿಕರಗಳು ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ ಒಳಗೊಂಡಿದೆ ಎಂದು ಹೇಳಿದರು.
ಬಿಎನ್‌ಐ ಮಂಗಳೂರು ಇದರ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್ ಎನ್. ಶರ್ಮ ಮಾತನಾಡಿ, ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಪೋ ಕಳೆದ ವರ್ಷವೂ ಆಯೋಜನೆಗೊಳಿಸಿದ್ದು, ಜನರ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿತ್ತು. ಕಳೆದ 5 ವರ್ಷದಲ್ಲಿ ಸುಮಾರು 400 ಕೋಟಿ ರೂ. ವ್ಯವಹಾರ ನಡೆದಿದ್ದು, ಕಳೆದ ಒಂದೇ ವರ್ಷ 108 ಕೋಟಿ ರೂ. ವ್ಯವಹಾರವಾಗಿದೆ. ಈ ವರ್ಷ 200 ಕೋಟಿ ರೂ. ವ್ಯವಹಾರ ನಡೆಯುವ ಗುರಿ ಹೊಂದಲಾಗಿದೆ. ಸಾರ್ವಜನಿಕರು ಈ ಎಕ್ಸ್‌ಪೋದ ಪ್ರಯೋಜನ ಪಡೆಯಬೇಕು ಎಂದು ತಿಳಿಸಿದರು.
ಬಿಎನ್‌ಐ ಎಕ್ಸ್ ಪೋ ಇದರ ಡೈರೆಕ್ಟರಿಯನ್ನು ಭಾರತ್ ಬೀಡಿ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಬ್ರಾಯ ಪೈ ಬಿಡುಗಡೆಗೊಳಿಸಿದರು. ಇದೇ ಸಂದರ್ಭ ಮಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿ ಸುಸಜ್ಜಿತ ಎಕ್ಸ್‌ಪೋ ಸೆಂಟರ್ ಆರಂಭಿಸಲು ಶಾಸಕರು ವ್ಯವಸ್ಥೆ ಕಲ್ಪಿಸಬೇಕು ಎಂದು ಬಿಎನ್‌ಐ ಪದಾಧಿಕಾರಿಗಳು ಶಾಸಕ ವೇದವ್ಯಾಸ್ ಕಾಮತ್ ಅವರಲ್ಲಿ ಮನವಿ ಮಾಡಿಕೊಂಡರು.
ಬ್ಯಾಂಕ್ ಆಫ್ ಬರೋಡ ಇದರ ಡಿಜಿಎಂ ಅಶ್ವಿನಿ ಕುಮಾರ್, ಬಿಎನ್‌ಐ ಇದರ ಸಹ ನಿರ್ದೇಶಕಿ ಪ್ರೀತಿ ಶರ್ಮ ಅತಿಥಿಗಳಾಗಿದ್ದರು. “ಬಿಗ್ ಬ್ರ್ಯಾಂಡ್ ಎಕ್ಸ್‌ಪೋ 2023′ ಚೇರ್‌ವೆುನ್ ಮೋಹನ್‌ರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಿರಣ್ ಶ್ಯಾಮ್ ವಂದಿಸಿದರು.
ಒಂದೇ ಸೂರಿನಡಿ 120ಕ್ಕೂ ಹೆಚ್ಚು ಮಳಿಗೆ
ಬಿಗ್ ಬ್ರ್ಯಾಂಡ್ ಎಕ್ಸ್‌ಪೋದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ಆಟೋಮೊಬೈಲ್, ಜ್ಯುವೆಲ್ಲರಿ, ಎಚ್‌ಆರ್, ಲೈಟಿಂಗ್ ಸೊಲ್ಯೂಷನ್ಸ್, ಇನ್ಶೂರೆನ್ಸ್, ಗಾರ್ಮೆಂಟ್ಸ್, ಐಟಿ ಪ್ರಾಡಕ್ಟ್ಸ್, ಸಾಫ್ಟ್ವೇರ್, ಆಫೀಸ್ ಆ್ಯಂಡ್ ಹೋಮ್ ಫರ್ನೀಚರ್, ಫುಡ್ ಪ್ರಾಡಕ್ಟ್ಸ್ ಮೊದಲಾದ 120ಕ್ಕೂ ಅಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನ, ಸೇವೆಗಳ ಪ್ರದರ್ಶನವಿದೆ. ಬೆಳಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೆ ಪ್ರದರ್ಶನವಿರುತ್ತದೆ. ಪ್ರವೇಶ ಉಚಿತವಾಗಿರುತ್ತದೆ ಎಂದು ಆಯೋಜಕರು ತಿಳಿಸಿದರು.