Advertisement
ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ| ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಡಿ. 23 ಮತ್ತು ಡಿ. 24 ಮಂಗಳೂರಿನ ಪಿಲಿಕುಲದಲ್ಲಿ ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ದತೆ ಎಂಬ ನೆಲೆಗಟ್ಟಿನಲ್ಲಿ ತುಳುನಾಡೋಚ್ಚಯ-2017 ಸಂಭ್ರಮವು ನಡೆಯಲಿದ್ದು, ಡಿ. 24ರಂದು ಮಧ್ಯಾಹ್ನ 12ರಿಂದ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ| ಸುನೀತಾ ಎಂ. ಶೆಟ್ಟಿ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ “ತುಳುರತ್ನ’ ಬಿರುದು ಪ್ರದಾನಿಸಿ ಗೌರವಿಸಲಾಗುವುದು.
ಮಂಬಯಿಯ ಹಿರಿಯ ಸಾಹಿತಿಯಾಗಿ, ಕವಿಯಾಗಿ, ಲೇಖಕಿಯಾಗಿ ಜನಮನ್ನಣೆಯನ್ನು ಪಡೆದ ಡಾ| ಸುನೀತಾ ಎಂ. ಶೆಟ್ಟಿ ಅವರು ಪ್ರಾಧ್ಯಾಪಕಿಯಾಗಿ, ಒಳ್ಳೆಯ ವಾಗ್ಮಿಯಾಗಿ ಒಳ ಮತ್ತು ಹೊರನಾಡಿನಲ್ಲಿ ಹೆಸರು ಮಾಡಿದ್ದಾರೆ. ತುಳು-ಕನ್ನಡ ಎರಡೂ ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿರುವ ಇವರು “ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ‘ ಎಂಬ ಸಂಶೋಧನ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದಿಂದ ಪಡೆದಿದ್ದಾರೆ. ಮೂಲತಃ ಮಂಗಳೂರು ಕಳವಾರು ಎಂಬಲ್ಲಿ ಜನಿಸಿದ ಡಾ| ಸುನೀತಾ ಎಂ. ಶೆಟ್ಟಿ ಅವರು, “ಮಹಿಳೆಗೊಂದು ಸ್ವತಂತ್ರ ವ್ಯಕ್ತಿತ್ವ ಇರಬೇಕು. ಅದನ್ನು ಅವಳು ಬದುಕಿನಲ್ಲಿ ಉಳಿಸಿಕೊಳ್ಳಬೇಕು’ ಎಂಬುದನ್ನು ನಂಬಿ, ನೆಚ್ಚಿ, ಹಾಗೆ ನಡೆದು ಉನ್ನತ ವ್ಯಕ್ತಿತ್ವವನ್ನು ಗಳಿಸಿಕೊಂಡವರು. ಹೊಸ ವಿಚಾರ, ಹೊಸ ಚಿಂತನೆಗೆ ಸದಾ ತೆರೆದುಕೊಂಡು ಓಡಾಡುವ ಅವರು ಮುಂಬಯಿ ಕನ್ನಡಿಗರ ಅಕ್ಕರೆಯ ಅಕ್ಕನಾಗಿ, ಅಭಿಮಾನದ ಅಮ್ಮನಾಗಿ ಅಪಾರ ಮೆಚ್ಚುಗೆಯನ್ನು ಪಡೆದಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ, ಸಂಗೀತ, ಯಕ್ಷಗಾನ, ಚರ್ಚಾಕೂಟಗಳ ಒಡನಾಟ, ಸುತ್ತಲಿನ ರಮ್ಯ ನಿಸರ್ಗ, ಸುಸಂಸ್ಕೃತ ಕೌಟುಂಬಿಕ ವಾತಾವರಣದಲ್ಲಿ ಬೆಳೆದ ಅವರಿಗೆ ಸೃಜನಶೀಲವಾಗಿ ಸ್ಪಂದಿಸಲು ಸಾಧ್ಯವಾಯಿತು. ವಡಾಲದ ಎನ್‌ಕೆಇಎಸ್ ಹೈಸ್ಕೂಲ್, ಮಾಟುಂಗದ ಖಾಲ್ಸಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ ಇವರು ಮುಂಬಯಿ ವಿಶ್ವವಿದ್ಯಾಲಯದಲ್ಲೂ ದಶಕಗಳಿಗೂ ಹೆಚ್ಚು ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸಾಹಿತ್ಯ ಶ್ರದ್ದೆ ಕಾರ್ಯೋತ್ಸಾಹಕ್ಕೆ ಯಾರೂ ಬೆರಗಾಗಬೇಕು. ತಾವಾಯಿತು, ತಮ್ಮ ಸಾಹಿತ್ಯ ಕೃಷಿಯಾಯಿತು ಎಂದು ಅವರು ಸಮಾಜ ಸೇವೆಯಿಂದ ದೂರ ಉಳಿದವರಲ್ಲ. ಸೃಷ್ಟಿಶೀಲ ಸಾಹಿತ್ಯ ನಿರ್ಮಾಣ ಹಾಗೂ ಕನ್ನಡ ತುಳು ಕೈಂಕರ್ಯ ಎರಡೂ ಒಂದೇ ಅವರ ಪಾಲಿಗೆ. ಉದಯವಾಣಿ ಮುಂಬಯಿ ಆವೃತ್ತಿಯಲ್ಲಿ ತುಳು ತುಪ್ಪೆ ಅಂಕಣ ಬರಹಗಳನ್ನು ಬರೆಯುತ್ತಿದ್ದರು. ನಾಗಸಂಪಿಗೆ, ಪಿಂಗಾರ, ಸಂಕ್ರಾಂತಿ, ಕರಜನ, ಪದಪಣ್ ಕಣ್ಣಾರೋ ಮೊದಲಾದ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ.
Related Articles
Advertisement